ಸಾಗರ:, “ಸುಧಾ ಅವರು ತಮ್ಮ ಸೇವಾವಧಿಯಲ್ಲಿ ಪ್ರತಿಯೊಂದು ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು, ಏಜೆಂಟ್‌ಗಳಿಗೆ ನಿರಂತರ ಸಲಹೆ, ಸಹಕಾರ ಮತ್ತು ಮಾರ್ಗದರ್ಶನ ನೀಡುವ ಮೂಲಕ ಎಲ್ಲರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಡಿ.ಎನ್. ರವಿಕುಮಾರ್ ಹೇಳಿದರು .
ಅವರು ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಸಾಗರ ಶಾಖೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸುಧಾ ಟಿ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿ ಮಾತನಾಡಿದರು.
ಸಂಸ್ಥೆಯ ವಿವಿಧ ಕಾರ್ಯಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಅವರು ಕರ್ತವ್ಯನಿಷ್ಠೆ, ಸಮಯಪ್ರಜ್ಞೆ ಹಾಗೂ ಪ್ರಾಮಾಣಿಕತೆಯಿಂದ ಸಹೋದ್ಯೋಗಿಗಳ ವಿಶ್ವಾಸ ಗಳಿಸಿದ್ದರು. ಗ್ರಾಹಕರೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವ ಮೂಲಕ ಸಂಸ್ಥೆಯ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕಚೇರಿಯ ಆಡಳಿತಾತ್ಮಕ ಕಾರ್ಯಗಳನ್ನು ಸಮರ್ಪಕವಾಗಿ ನಿರ್ವಹಿಸುವುದರ ಜೊತೆಗೆ ಸಿಬ್ಬಂದಿ ಹಾಗೂ ಏಜೆಂಟ್‌ಗಳ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುತ್ತಿದ್ದರು. ಯಾವುದೇ ಜವಾಬ್ದಾರಿಯನ್ನು ವಹಿಸಿದರೂ ಅದನ್ನು ಯಶಸ್ವಿಯಾಗಿ ಪೂರ್ಣಗೊಳಿಸುವ ಗುಣ ಅವರಲ್ಲಿತ್ತು ಎಂದರು.
ಸುಧಾ ಮೇಡಂ ಅವರು ಏಜೆಂಟ್‌ಗಳ ತರಬೇತಿ ಕಾರ್ಯಕ್ರಮಗಳ ಕುರಿತು ಅತ್ಯಂತ ವಿವರವಾಗಿ ಮಾಹಿತಿ ನೀಡುತ್ತಿದ್ದರು. ವಿಶೇಷವಾಗಿ ಏಜೆಂಟ್‌ಗಳಿಗೆ ದೊರೆಯುವ ಆಫೀಸ್ ಅಲೋವೆನ್ಸ್, ಗ್ರ್ಯಾಚುಟಿ ಹಾಗೂ ವಿವಿಧ ಮುಂಗಡ ಸೌಲಭ್ಯಗಳ ಬಗ್ಗೆ ಸ್ಪಷ್ಟವಾಗಿ ತಿಳಿಸಿ, ಅವರ ವೃತ್ತಿಜೀವನದ ಬೆಳವಣಿಗೆಗೆ ನೆರವಾಗುತ್ತಿದ್ದರು ಎಂದು ತಿಳಿಸಿದರು.
ತಂಡದೊಂದಿಗೆ ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುವ ಅವರ ಸ್ವಭಾವವು ಶಾಖೆಯಲ್ಲಿ ಉತ್ತಮ ಕಾರ್ಯಸಂಸ್ಕೃತಿ ನಿರ್ಮಾಣಕ್ಕೆ ನೆರವಾಗಿತ್ತು. ಹೊಸ ಸಿಬ್ಬಂದಿಗೆ ಮಾರ್ಗದರ್ಶನ ನೀಡುವುದು, ಏಜೆಂಟ್‌ಗಳಿಗೆ ಅಗತ್ಯ ಮಾಹಿತಿ ಒದಗಿಸುವುದು ಹಾಗೂ ಗ್ರಾಹಕ ಸೇವೆಗೆ ಆದ್ಯತೆ ನೀಡುವುದು ಅವರ ಕಾರ್ಯವೈಖರಿಯ ವಿಶೇಷತೆಯಾಗಿತ್ತು ಎಂದರು.

ಸುದೀರ್ಘ ಸೇವಾ ಅವಧಿಯಲ್ಲಿ ಸಂಸ್ಥೆಯ ಗುರಿ ಸಾಧನೆಗಾಗಿ ಶ್ರಮಿಸಿದ ಅವರ ಕಾರ್ಯವೈಖರಿ ಇತರ ಸಿಬ್ಬಂದಿಗೆ ಮಾದರಿಯಾಗಿದೆ. ನಿವೃತ್ತಿ ಜೀವನ ಆರೋಗ್ಯ, ನೆಮ್ಮದಿ ಹಾಗೂ ಸಂತೋಷದಿಂದ ಕೂಡಿರಲಿ ಎಂದು ಹಾರೈಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುಧಾ ಟಿ, ನನ್ನ ವೃತ್ತಿ ಜೀವನದಲ್ಲಿ ಎಲ್‌ಐಸಿ ಸಂಸ್ಥೆಯಲ್ಲಿ ನನಗೊಂದು ‘ಅಭಿಮಾನಿ ಬಳಗ’ ಸೃಷ್ಟಿಯಾಗಿರುವುದೇ ಅತ್ಯಂತ ಹೆಮ್ಮೆಯ ಸಂಗತಿ. ಇದಕ್ಕಿಂತ ದೊಡ್ಡ ಸೌಭಾಗ್ಯ ಮತ್ತು ಸಾರ್ಥಕತೆ ನನಗೆ ಬೇರೊಂದಿಲ್ಲ ಎಂದರು.
“ಎಲ್‌ಐಸಿ ಸಂಸ್ಥೆಯ ಬೆಳವಣಿಗೆಯೊಂದಿಗೆ ನನ್ನ ವೃತ್ತಿಜೀವನವೂ ಬೆಸೆದುಕೊಂಡಿತ್ತು. ಸಹೋದ್ಯೋಗಿಗಳು, ಏಜೆಂಟ್‌ಗಳು ಹಾಗೂ ಗ್ರಾಹಕರಿಂದ ದೊರೆತ ಪ್ರೀತಿ, ವಿಶ್ವಾಸ ಮತ್ತು ಬೆಂಬಲವನ್ನು ನಾನು ಎಂದಿಗೂ ಮರೆಯುವುದಿಲ್ಲ. ನಿವೃತ್ತಿಯಾದರೂ ಎಲ್‌ಐಸಿ ಕುಟುಂಬದೊಂದಿಗೆ ನನ್ನ ಬಾಂಧವ್ಯ ಮುಂದುವರಿಯಲಿದೆ” ಎಂದು ಭಾವನಾತ್ಮಕವಾಗಿ ನುಡಿದರು.

ಕಾರ್ಯಕ್ರಮದಲ್ಲಿ ಚಂದ್ರಶೇಖರ್, ಬೆಂಡಿಟ್ ಜೋಸೆಫ್, ಶಿವಾನಂದ ಸೊರಬ, ಗಿರೀಶ್ ಕುಮಾರ್, ಮಂಜುನಾಥ್, ಸರ್ವೇಶ್ವರಪ್ಪ, ಓಂಕಾರ್ ನಾಯಕ್, ಶಕುಂತಲಾ, ಸೇರಿದಂತೆ ಸಿಬ್ಬಂದಿ, ಏಜೆಂಟ್‌ಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಸತೀಶ್ ಮಹಾಲೆ ನಿರೂಪಣೆ, ಪ್ರಾರ್ಥನೆ ಗಣೇಶ್, ಸ್ವಾಗತ ಸಂತೋಷ ಕಾರ್ಗಲ್ ಮಾಡಿದರು.
















