✒️..ಅಮಿತ್ ಆರ್ ಆನಂದಪುರ
ಸಾಗರ:ಕಾಯಂ ಶಿಕ್ಷಕರ ನೇಮಕ ಮಾಡುವಂತೆ ಆಗ್ರಹಿಸಿ ತಾಲ್ಲೂಕಿನ ತುಮರಿ ಸಮೀಪದ ಕಳೂರು ಹಿರಿಯ ಪ್ರಾಥಮಿಕ ಶಾಲೆ ಎದುರು ಪೋಷಕರು ಸೋಮವಾರ ಪ್ರತಿಭಟನೆ ನಡೆಸಿದರು.
ಶಾಲೆಗೆ ಬೀಗ ಹಾಕಿ ಬಂದ್ ಮಾಡಿ ವಿದ್ಯಾರ್ಥಿಗಳ ಜೊತೆ ಪೋಷಕರು ಶಾಲೆ ಎದುರು ಶಿಕ್ಷಣ ಇಲಾಖೆ ವಿರುದ್ಧ ದಿಕ್ಕಾರ ಕೂಗಿ ಕಾಯಂ ಶಿಕ್ಷಕರ ನೇಮಕ ಮಾಡುವಂತೆ ಆಗ್ರಹಿಸಿದರು.
1 ರಿಂದ 7ನೇ ತರಗತಿಯವರೆಗೆ 13 ವಿದ್ಯಾರ್ಥಿಗಳ ಪೈಕಿ ಶಾಲೆಗೆ 2 ಜನ ಅಥಿತಿ ಶಿಕ್ಷಕರಿದ್ದಾರೆ. ಆದರೆ ಒಬ್ಬರೂ ಕಾಯಂ ಶಿಕ್ಷಕರಿಲ್ಲ. ತಾಲ್ಲೂಕಿನ ಕಳೂರು ಗ್ರಾಮವು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದ ಗ್ರಾಮವಾಗಿದ್ದು, ಎಲ್ಲರ ಸಹಕಾರದೊಂದಿಗೆ ಇಲ್ಲಿ ಶಾಲಾ ಶೈಕ್ಷಣಿಕ ಕೇಂದ್ರವನ್ನು ಅಭಿವೃದ್ಧಿ ಪಡಿಸಲಾಗಿದ್ದು ಶಿಕ್ಷಕರ ಕೊರತೆ ಎದುರಾಗಿದೆ ಎಂದು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಓಂಕಾರ್ ಜೈನ್ ಸಮಸ್ಯೆ ತಿಳಿಸಿದರು.
ಶೈಕ್ಷಣಿಕ ವರ್ಷದ ಆರಂಭದ ಹಂತದಲ್ಲಿ ವಿದ್ಯಾರ್ಥಿಗಳ ಶಿಕ್ಷಣ ಭವಿಷ್ಯದ ಜೊತೆಗೆ ಇಲಾಖೆಯ ಅಧಿಕಾರಗಳು ಚೆಲ್ಲಾಟ ಆಡುವುದು ಸರಿಯಲ್ಲ. ಕಾಯಂ ಶಿಕ್ಷಕರನ್ನು ನೀಡಬೇಕು. ಶಾಲೆಗೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಬೇಕು. ಒಂದು ವೇಳೆ ಅಧಿಕಾರಿಗಳು ಬೇಡಿಕೆ ಈಡೇರಿಸದಿದ್ದರೆ ಬೃಹತ್ ಪ್ರತಿಭಟನೆ ಮಾಡಲಾಗುತ್ತದೆ ಎಂದು ಆಗ್ರಹಿಸಿದರು.
ಸ್ಥಳಕ್ಕೆ ಶಿಕ್ಷಣ ಇಲಾಖೆಯ ಇಸಿಒ ದಿನೇಶ್, ಸಿಆರ್‌ಪಿ ರಮೇಶ್ ಭೇಟಿ ನೀಡಿ, ಪೋಷಕರ ಅಹವಾಲು ಆಲಿಸಿದರು. ಶಿಕ್ಷಕರ ನೇಮಕ ಮಾಡುವ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ನಾಗರಾಜ್, ಕೆ ಎಸ್ ಓಂಕಾರ, ಭೀಮಾನಾಯ್ಕ್, ಸತೀಶ್ ನಾಯ್ಕ, ರೇಣುಕಾ, ಆದಿರಾಜ್, ಸಂಕೇತ್, ಮೋಹನ್, ಲೋಕಪಾಲ್ ಇದ್ದರು.
ಜಾಹೀರಾತು












