Home Blog ‘ನಮ್ಮ ನೆಲದ ಉದ್ಯೋಗ ನಮಗೇ ನೀಡಿ’: ಕೃಷಿ ವಿವಿ ವಿರುದ್ಧ ಸ್ಥಳೀಯ ನಿರುದ್ಯೋಗಿಗಳ ಹೋರಾಟದ ಮುನ್ಸೂಚನೆ..!!

‘ನಮ್ಮ ನೆಲದ ಉದ್ಯೋಗ ನಮಗೇ ನೀಡಿ’: ಕೃಷಿ ವಿವಿ ವಿರುದ್ಧ ಸ್ಥಳೀಯ ನಿರುದ್ಯೋಗಿಗಳ ಹೋರಾಟದ ಮುನ್ಸೂಚನೆ..!!

79
0

✒️..ಅಮಿತ್ ಆರ್ ಆನಂದಪುರ

ಆನಂದಪುರ (ಸಾಗರ): ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಹೋಬಳಿಯ ಯಡೇಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇರುವಕ್ಕಿಯಲ್ಲಿ 777 ಎಕರೆ ಪ್ರದೇಶದಲ್ಲಿ ಸ್ಥಾಪಿತವಾಗಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಸ್ಥಳೀಯ ವಿದ್ಯಾವಂತ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವಲ್ಲಿ ವಿಫಲವಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಕಾಗೋಡು ತಿಮ್ಮಪ್ಪ ಅವರ ಹೋರಾಟದ ಫಲದಿಂದ 2021 ರಲ್ಲಿ ಏಳು ಜಿಲ್ಲೆಗಳ ವ್ಯಾಪ್ತಿಯನ್ನು ಒಳಗೊಂಡಿರುವ ಈ ಪ್ರತಿಷ್ಠಿತ ಕೃಷಿ ಹಾಗೂ ತೋಟಗಾರಿಕೆ ವಿಶ್ವವಿದ್ಯಾಲಯ ಸ್ಥಾಪನೆಯಾದಾಗ ಸ್ಥಳೀಯ ಯುವಕರಿಗೆ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿವೆ ಎಂಬ ನಿರೀಕ್ಷೆ ಇತ್ತು. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಖಾಯಂ ಹುದ್ದೆಗಳು ಮಾತ್ರವಲ್ಲದೆ ದಿನಗೂಲಿ ಉದ್ಯೋಗಗಳಲ್ಲಿಯೂ ಸ್ಥಳೀಯರಿಗೆ ಅವಕಾಶ ಸಿಗುತ್ತಿಲ್ಲ ಎಂಬ ಅಸಮಾಧಾನ ವ್ಯಕ್ತವಾಗುತ್ತಿದೆ.

ಉದ್ಯೋಗಕ್ಕಾಗಿ ವಿಶ್ವವಿದ್ಯಾಲಯದ ಬಾಗಿಲು ತಟ್ಟುವ ಸ್ಥಳೀಯ ಯುವಕರು ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರೆಯುತ್ತಿಲ್ಲ ಎಂದು ದೂರಿದ್ದಾರೆ. ದಿನಗೂಲಿ ಕೆಲಸಕ್ಕಾಗಿ ಸಂಪರ್ಕಿಸಿದರೆ ಗುತ್ತಿಗೆದಾರರ ಕಡೆಗೆ ಕಳುಹಿಸಲಾಗುತ್ತಿದೆ. ಆದರೆ ಕೆಲವು ಸಿಬ್ಬಂದಿಗಳು ತಮ್ಮ ಊರಿನವರನ್ನೇ ಕರೆತಂದು ಉದ್ಯೋಗ ನೀಡುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಕೆಲವು ಮದ್ಯವರ್ತಿಗಳ ಮೂಲಕ ತಮಗೆ ಬೇಕಾದವರಿಗೆ ಹಣ ಪಡೆದು ಕೆಲಸ ನೀಡುವ ಜಾಲವೂಂದು ವಿವಿ ಸುತ್ತ ಮುತ್ತ ಸಕ್ರಿಯವಾಗಿದೆ ಎಂಬುದು ಸ್ಥಳೀಯರ ಗಂಭೀರ ಆರೋಪವಾಗಿದೆ.

ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಸ್ಥಳೀಯರು ಭೂಮಿ, ಜಲ ಹಾಗೂ ಮೂಲಸೌಕರ್ಯಗಳನ್ನು ಒದಗಿಸಿದ್ದರೂ, ಉದ್ಯೋಗದ ವಿಷಯದಲ್ಲಿ ಸ್ಥಳೀಯರೇ ನಿರ್ಲಕ್ಷ್ಯಕ್ಕೊಳಗಾಗಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಶೇಷವಾಗಿ ವಿದ್ಯಾವಂತ ನಿರುದ್ಯೋಗಿ ಯುವಕರು ತಮಗೆ ಆದ್ಯತೆ ನೀಡಬೇಕು ಎಂದು ಆಗ್ರಹಿಸುತ್ತಿದ್ದಾರೆ.

ಸ್ಥಳೀಯರಿಗೆ ಉದ್ಯೋಗಾವಕಾಶಗಳಲ್ಲಿ ಆದ್ಯತೆ ನೀಡಬೇಕು, ನೇಮಕಾತಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಬೇಕು ಹಾಗೂ ದಿನಗೂಲಿ ಕೆಲಸಗಳಲ್ಲಿಯೂ ಸ್ಥಳೀಯರಿಗೆ ಅವಕಾಶ ಕಲ್ಪಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

ಈ ಹಿನ್ನೆಲೆಯಲ್ಲಿ ಸ್ಥಳೀಯ ವಿದ್ಯಾವಂತ ನಿರುದ್ಯೋಗಿ ಯುವಕರು ಶೀಘ್ರದಲ್ಲೇ ಪ್ರತಿಭಟನೆ ಹಮ್ಮಿಕೊಳ್ಳುವ ಕುರಿತು ಚರ್ಚೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಜಾಹೀರಾತು