Home Shivamogga Sagara ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ದುರಂತ ಅಂತ್ಯ ಕಂಡ ಬೈಕ್ ಸವಾರ..!!

ಕೆ.ಎಸ್.ಆರ್.ಟಿ.ಸಿ ಬಸ್ ಮತ್ತು ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ದುರಂತ ಅಂತ್ಯ ಕಂಡ ಬೈಕ್ ಸವಾರ..!!

110
0

✒️..ಅಮಿತ್ ಆರ್ ಆನಂದಪುರ

ಸಾಗರ/ಆನಂದಪುರ: ಮಿತಿಮೀರಿದ ವೇಗ ಹಾಗೂ ಚಾಲಕನ ನಿರ್ಲಕ್ಷ್ಯದ ಚಾಲನೆಯಿಂದಾಗಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಶನಿವಾರ ಇಲ್ಲಿನ ರಾಷ್ಟ್ರೀಯ ಹೆದ್ದಾರಿ 69ರಲ್ಲಿ ನಡೆದಿದೆ.

ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಜಂಬೂರು ಮನೆ ಗ್ರಾಮದ ಡಾಕಪ್ಪ (60+) ಮೃತಪಟ್ಟ ದುರ್ದೈವಿ.

ಘಟನೆ ವಿವರ:

ಡಾಕಪ್ಪ ಅವರು ಶನಿವಾರ ಬೆಳಿಗ್ಗೆ ತಮ್ಮ ಮನೆಯಿಂದ ಬೈಕ್‌ನಲ್ಲಿ ಸಾಗರ ನಗರಕ್ಕೆ ಹೊರಟಿದ್ದರು. ಬೆಳಿಗ್ಗೆ 11.30ರ ವೇಳೆಗೆ ಕಾಸ್ಪಾಡಿ ಸರ್ಕಲ್‌ ಬಳಿ ಎದುರುಗಡೆಯಿಂದ ಅಂದರೆ ಸಾಗರದಿಂದ ಅತಿ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್‌ ಬೈಕ್‌ಗೆ ನೇರವಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗುತ್ತಿದೆ.

ಮಾರ್ಗಮಧ್ಯೆ ಸಾವು:

ಅಪಘಾತದ ತೀವ್ರತೆಗೆ ಡಾಕಪ್ಪ ಅವರ ಎರಡೂ ಕಾಲುಗಳು ಮುರಿದಿದ್ದು, ತೀವ್ರ ರಕ್ತಸ್ರಾವವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರು. ತಕ್ಷಣವೇ ಅವರನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಸಾಗಿಸಲಾಗುತ್ತಿತ್ತು. ಆದರೆ, ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ.

ಪ್ರಕರಣ ದಾಖಲು:
ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.