✒️..ಅಮಿತ್ ಆರ್ ಆನಂದಪುರ
(ಸಾಗರ)ಆನಂದಪುರ: ಜನಪದ ಕಲೆ ಮತ್ತು ಸಾಹಿತ್ಯವನ್ನು ಉಳಿಸಿ ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಸಿ. ಜಗದೀಶ್ ಹೇಳಿದರು.
ಅವರು ಕಣ್ಣೇಶ್ವರ ಜನಪದ ಸಂಘ ಕಣ್ಣೂರು ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಇರುವಕ್ಕಿಯ ವಿಶ್ವವಿದ್ಯಾಲಯದ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ‘ಜನಪದ ಕಲಾ ಉತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.‘

ಜನಪದ ಕಲೆಗಳು ಜನರ ಬದುಕು, ಸಂಸ್ಕೃತಿ ಹಾಗೂ ಪರಂಪರೆಯ ಪ್ರತೀಕಗಳಾಗಿವೆ. ಪ್ರಾಚೀನ ಕಾಲದಿಂದಲೂ ಜನಜೀವನದೊಂದಿಗೆ ಬೆಸೆದುಕೊಂಡಿರುವ ಜನಪದ ಸಾಹಿತ್ಯ ಮತ್ತು ಕಲೆಯನ್ನು ಜೀವಂತವಾಗಿಡಲು ಇಂತಹ ಕಾರ್ಯಕ್ರಮಗಳು ಅಗತ್ಯವಾಗಿವೆ. ಇಂದಿನ ಯುವಪೀಳಿಗೆ ಜನಪದವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಬಿ. ಟಾಕಪ್ಪ ಕಣ್ಣೂರು ಮಾತನಾಡಿ, ‘ಜನಪದವು ನಮ್ಮ ತಾಯಿ ಬೇರು ಇದ್ದಂತೆ. ಭಾರತದ ಜನಪದ ಪರಂಪರೆ ಜಗತ್ತಿನಲ್ಲೇ ಶ್ರೀಮಂತವಾಗಿದೆ. ಮಲೆನಾಡಿನ ಜನಪದ ಕಲೆಗಳಿಗೆ ವಿಶೇಷ ಸ್ಥಾನವಿದೆ. ಇಂತಹ ಕಲೆಗಳನ್ನು ವಿದ್ಯಾರ್ಥಿಗಳಿಗೆ ಪರಿಚಯಿಸುವ ಕೆಲಸವಾಗಬೇಕು’ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ. ಸ್ವಾಮಿ ಮಾತನಾಡಿ, ‘ದೇಶೀಯ ಕಲೆಗಳನ್ನು ಉಳಿಸುವ ಕಾರ್ಯ ನಿರಂತರವಾಗಿರಬೇಕು. ಜನಪದ ಕಲೆಗಳು ಜನರ ಬದುಕಿನ ನೋವು–ನಲಿವುಗಳನ್ನು ಪ್ರತಿಬಿಂಬಿಸುವ ಶಕ್ತಿಶಾಲಿ ಮಾಧ್ಯಮಗಳಾಗಿವೆ’ ಎಂದರು.
ಕಣ್ಣೇಶ್ವರ ಜನಪದ ಕಲಾ ಸಂಘದ ಅಧ್ಯಕ್ಷ ಟಿಕಪ್ಪ ಅಧ್ಯಕ್ಷತೆ ವಹಿಸಿದ್ದರು.ವೇದಿಕೆಯಲ್ಲಿ ಆನಂದಪುರ ಕಸಾಪ ಅಧ್ಯಕ್ಷ ಬಿ.ಡಿ. ರವಿಕುಮಾರ್, ಕಣ್ಣೂರು ಗ್ರಾಮ ಸುಧಾರಣಾ ಸಮಿತಿ ಅಧ್ಯಕ್ಷ ನಾಗರಾಜ್ ಸಂಗೀ, ಕೃಷಿ ವಿವಿಯ ಪ್ರಮುಖರಾದ ಡಾ. ನಾರಾಯಣ ಮಾವರ್ಕರ್. ಶಶಿಧರ್ ಕೆ ಸಿ, ರವಿಕುಮಾರ್, ಗಣಪತಿ, ಮಾನ್ಯ ಪಾಟೀಲ್ ರಕ್ಷಿತಾ ಮೊದಲಾದವರು ಉಪಸ್ಥಿತರಿದ್ದರು.
ಉತ್ಸವದಲ್ಲಿ ಡೊಳ್ಳು ಕುಣಿತ, ವೀರಗಾಸೆ, ಜೋಗಿ ಪದ, ಮಹಿಳಾ ಡೊಳ್ಳು ಕುಣಿತ, ಲಂಬಾಣಿ ನೃತ್ಯ, ಪೂಜಾ ಕುಣಿತ, ನಂದಿಧ್ವಜ ಹಾಗೂ ಸೋಮನ ಕುಣಿತ ಸೇರಿದಂತೆ ವಿವಿಧ ಜನಪದ ಕಲಾ ತಂಡಗಳ ಪ್ರದರ್ಶನಗಳು ಪ್ರೇಕ್ಷಕರನ್ನು ರಂಜಿಸಿದವು.
















