Home Blog ಡಾ.ಸಿರಾಜ್ ಅಹಮದ್ ,ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಅಪರೂಪದ ಸಾಧಕ..!!

ಡಾ.ಸಿರಾಜ್ ಅಹಮದ್ ,ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದ ಅಪರೂಪದ ಸಾಧಕ..!!

64
0

✒️..ಅಮಿತ್ ಆರ್ ಆನಂದಪುರ

ಶಿವಮೊಗ್ಗದ ಪ್ರಸಿದ್ಧ ಐತಿಹಾಸಿಕ ಹಿನ್ನೆಲೆ ಹೊಂದಿದ್ದ ಸಹ್ಯಾದ್ರಿ ಕಾಲೇಜು ಅನೇಕ ಬರಹಗಾರರನ್ನು, ಸಾಹಿತಿಗಳನ್ನು, ರಾಜಕಾರಣಿಗಳನ್ನು ಮತ್ತು ಪತ್ರಕರ್ತರನ್ನು ಹುಟ್ಟುಹಾಕಿದ ಪ್ರಸಿದ್ಧ ಕಾಲೇಜು ಅಂತಹ ಕಾಲೇಜಿನಲ್ಲಿ ಈಗ ಆಧಾರ ಸ್ತಂಭವಂತೆ ಪ್ರಾಂಶುಪಾಲರಾದ ಡಾ. ಸಿರಾಜ್ ಅಹಮದ್ ಇದ್ದಾರೆ.

ಇವರ ಪರಿಚಯ ನನಗೇನು ಮೊದಲಿಂದ ಇದ್ದದ್ದೇನು ಅಲ್ಲ ,ಆಕಸ್ಮಿಕವಾಗಿ ಅರುಣ್ ಪ್ರಸಾದ್ ಅವರಿಂದ ಇವರ ಪರಿಚಯ ನನಗಾಯಿತು.ಒಂದು ದಿನ ಇವರ ಕಚೇರಿಗೆ ಹೋಗಿದ್ದೆ ಉತ್ತಮ ಬಾಂಧವ್ಯದಿಂದ ಮಾತನಾಡಿ ನನ್ನ ಹಿನ್ನೆಲೆಯನ್ನು ಕೇಳಿ ನನ್ನನ್ನು ಹುರಿದುಂಬಿಸಿದರು, ಆದಷ್ಟು ಬೇಗನೆ ನಿನ್ನ ಕವನ ಸಂಕಲನ ಬಿಡುಗಡೆ ಗೊಳ್ಳಲಿ ಎಂದು ಸಹ ಆಶಯ ಮಾತುಗಳನ್ನು ಸಹ ಆಡಿದರು ಆಗಿನಿಂದ ನನ್ನ ಮತ್ತು ಅವರ ನಡುವಿನ ಬಾಂಧವ್ಯ ಉತ್ತಮವಾಗಿ ಬೆಳೆಯಿತು.

ನಾನು ಪತ್ರಕರ್ತ ಹಿನ್ನೆಲೆ ಹೊಂದಿದ್ದರಿಂದ ಪತ್ರಿಕೆಗಳ ಓದು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವುದು ನನ್ನ ಆದ್ಯ ಕೆಲಸ ಮತ್ತು ಜವಾಬ್ದಾರಿ ಕೂಡ ಆಗಿರುವುದರಿಂದ, ಪತ್ರಿಕೆಗಳಲ್ಲಿ ಮತ್ತು ಸಾಮಾಜಿಕ ಜಾಲತಾಣದಲ್ಲಿ ವಾರದಲ್ಲಿ ಒಂದೆರಡು ಬಾರಿಯಾದರೂ ಖಾಯಂ ಆಗಿ ಸಿರಾಜ್ ಅಹಮದ್ ಅವರು ಯಾವುದಾದರೂ ಕಾರ್ಯಕ್ರಮದಲ್ಲಿ ಇರುವ ಫೋಟೋ ಮತ್ತು ಸುದ್ದಿ ನೋಡುತ್ತಿದ್ದ ,ನನಗೆ ಅವರ ಸಾಧನೆ ಮತ್ತು ಹಿನ್ನೆಲೆ ಏನು ತಿಳಿದಿರಲಿಲ್ಲ ಮತ್ತು ತಿಳಿದುಕೊಳ್ಳಬೇಕೆಂಬ ಕುತೂಹಲ ಸಹ ನನ್ನಲ್ಲಿತ್ತು.

ಅದೇ ಸಮಯಕ್ಕೆ ಅರುಣ್ ಪ್ರಸಾದ್ ಅವರು ಸಿರಾಜ್ ಅಹಮದ್ ಅವರ ಹುಟ್ಟುಹಬ್ಬದ ಸಮಯದಲ್ಲಿ ಲೇಖನವನ್ನು ಇತ್ತೀಚಿಗಷ್ಟೇ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು ,ಅದನ್ನು ಓದಿದ ನನಗೆ ಅವರ ಸಾಧನೆ ಮತ್ತು ಹಿನ್ನೆಲೆ ತಿಳಿದು ಬಹಳ ಸಂತಸವಾಯಿತು.

ಅದರ ಬಗ್ಗೆ ಕೆಲ ತುಣುಕುಗಳನ್ನು ನೋಡುವುದಾದರೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ರಾಮಜೋಗಿಹಳ್ಳಿಯಲ್ಲಿ ಜನಿಸಿದ ಡಾ. ಸಿರಾಜ್ ಅಹಮದ್ ಅವರು ಶಿಕ್ಷಣದ ವಾತಾವರಣದಲ್ಲೇ ಬೆಳೆದವರು. ಅವರ ತಂದೆ ಎಂ. ಸತ್ತಾರ್ ಸಾಬ್ ಅವರು ಹೈಸ್ಕೂಲ್ ಶಿಕ್ಷಕರಾಗಿ ಹಾಗೂ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದರು. ತಾಯಿ ಶ್ರೀಮತಿ ಇಕ್ಬಾಲ್ ಉನ್ನೀಸ ಅವರ ಸಂಸ್ಕಾರ ಮತ್ತು ಕುಟುಂಬದ ಶಿಕ್ಷಣಪರ ಹಿನ್ನೆಲೆ ಡಾ. ಸಿರಾಜ್ ಅಹಮದ್ ಅವರ ವ್ಯಕ್ತಿತ್ವ ರೂಪುಗೊಳ್ಳಲು ಪ್ರಮುಖ ಕಾರಣವಾಗಿತು ಎಂದು ಸಹ ಹೇಳಬಹುದು.

ರಾಮಜೋಗಿಹಳ್ಳಿ, ಚಿತ್ರದುರ್ಗ ಹಾಗೂ ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ಅವರು ನಂತರ ಸಂಶೋಧನೆಗಾಗಿ ಕುವೆಂಪು ವಿಶ್ವವಿದ್ಯಾಲಯಕ್ಕೆ ಬಂದರು. ಅಲ್ಲಿಯೇ ಅವರು ಶೈಕ್ಷಣಿಕ ಜೀವನ ಆರಂಭಿಸಿ ಇಂಗ್ಲಿಷ್ ವಿಭಾಗದ ಪ್ರಾಧ್ಯಾಪಕರಾಗಿ, ಸಂಯೋಜಕರಾಗಿ ಮತ್ತು ಬಳಿಕ ಪ್ರಾಂಶುಪಾಲರಾದರು. ಎಂ.ಎ. ಹಾಗೂ ಪಿಎಚ್.ಡಿ ಪದವಿಗಳನ್ನು ಪಡೆದಿರುವ ಅವರು ಇಂಗ್ಲಿಷ್ ಸಾಹಿತ್ಯ, ಭಾಷಾಶಾಸ್ತ್ರ, ಚೋಮ್ಸ್ಕಿ ಚಿಂತನೆ ಮತ್ತು ಉತ್ತರ-ಆಧುನಿಕತಾವಾದದಲ್ಲಿ ವಿಶೇಷ ಆಸಕ್ತಿ ಹೊಂದಿದ್ದಾರೆ.

ಡಾ. ಸಿರಾಜ್ ಅಹಮದ್ ಅವರು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ಬರೆಯುವ ಅಪರೂಪದ ದ್ವಿಭಾಷಾ ವಿಮರ್ಶಕರಾಗಿದ್ದಾರೆ. ಸಾಹಿತ್ಯ, ಸಂಸ್ಕೃತಿ ಮತ್ತು ರಾಜಕೀಯ ಕುರಿತಾಗಿ ಅವರು ಪ್ರಕಟಿಸಿರುವ ಪ್ರಬಂಧಗಳು ಕನ್ನಡ ವಿಮರ್ಶಾ ಕ್ಷೇತ್ರದಲ್ಲಿ ಹೊಸ ಚಿಂತನೆಗೆ ದಾರಿ ಮಾಡಿಕೊಟ್ಟಿವೆ. ವಿಶೇಷವಾಗಿ ಸಲ್ಮಾನ್ ರಶ್ದಿ ಮತ್ತು ರೋಹಿಂಟನ್ ಮಿಸ್ತ್ರಿ ಅವರ ಸಾಹಿತ್ಯದ ಕುರಿತು ಅವರು ನಡೆಸಿದ ಅಧ್ಯಯನ ಗಮನಾರ್ಹವಾಗಿದ್ದು ಹಾಗೂ ಅನುವಾದ ಕ್ಷೇತ್ರದಲ್ಲಿಯೂ ಅವರ ಕೊಡುಗೆ ಅಪಾರ.

ಹಾಗೆ ವಿಶೇಷವಾಗಿ ಇವರು ಶಿಮ್ಲಾ ದ ಇಂಡಿಯನ್ ಇನ್ ಸ್ಟಿಟ್ಯೂಟ್ ನಲ್ಲಿ ಫೆಲೋ ಆಗಿದ್ದು ಮತ್ತು ದೇಶದ ಹಲವು ದೆಹಲಿ, ಪಾಟ್ನಾ, ಮುಂಬೈ, ಐ ಐ ಟಿ ಮದ್ರಾಸ್, ವಿಚಾರ ಸಂಕಿರಣಗಳಲ್ಲಿ ಪ್ರಬಂಧ ಮಂಡಿಸಿದ್ದಾರೆ. ಈಚೆಗೆ ದೆಹಲಿಯ ಇಂಡಿಯಾ ಇಂಟರ್ ನ್ಯಾಷನಲ್ ನಲ್ಲಿ ವಚನ ಸಾಹಿತ್ಯ ದ ಬಗ್ಗೆ ಪ್ರಬಂಧ ಮಂಡಿಸಿದ್ದಾರೆ.

ಕರ್ನಾಟಕ ಸರ್ಕಾರದ ಕುವೆಂಪು ಭಾಷಾ ಭಾರತಿ ಪ್ರಾಧಿಕಾರಕ್ಕಾಗಿ ಮರಾಠಿ, ಗುಜರಾತಿ, ತೆಲುಗು ಮತ್ತು ಕೊಂಕಣಿ ಭಾಷೆಗಳಿಂದ ಅನುವಾದಗಳ ಸರಣಿಯನ್ನು ಅವರು ಸಂಪಾದಿಸಿದ್ದಾರೆ. ಸಂತ ಕನಕದಾಸರ ಕೃತಿಗಳನ್ನು ಭಾರತೀಯ ವಿವಿಧ ಭಾಷೆಗಳಿಗೆ ಅನುವಾದಿಸುವ ಮಹತ್ವದ ಯೋಜನೆಯಲ್ಲಿಯೂ ಅವರು ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಅವರು “ಬಹುವಚನ” ಎಂಬ ವಿಮರ್ಶಾ ಪ್ರಧಾನ ಕನ್ನಡ ದ್ವೈಮಾಸಿಕ ಪತ್ರಿಕೆಯ ಸಂಪಾದಕರಾಗಿದ್ದು, ಕನ್ನಡದ ಇತ್ತೀಚಿನ ಪ್ರಕಟಣೆಗಳ ಕುರಿತು ವಿಮರ್ಶಾತ್ಮಕ ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ.

ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರ ಸಾಹಿತ್ಯದ ಕುರಿತು ಡಾ. ಸಿರಾಜ್ ಅಹಮದ್ ಅವರು ಆಳವಾದ ಅಧ್ಯಯನ ನಡೆಸಿದ್ದಾರೆ. ಮಲೆನಾಡಿನ ಸಂಸ್ಕೃತಿ, ಪ್ರಕೃತಿ ಮತ್ತು ಬದುಕಿನೊಂದಿಗೆ ಅವರಿಗೆ ಇರುವ ನಿಕಟ ಸಂಬಂಧ ಅವರ ಬರಹಗಳಲ್ಲಿಯೂ ಸ್ಪಷ್ಟವಾಗಿ ಕಾಣುತ್ತದೆ. ತೇಜಸ್ವಿಯವರ ಸಾಹಿತ್ಯದ ಮೂಲಕ ಪರಿಸರ ಮತ್ತು ಜೀವನ ಮೌಲ್ಯಗಳನ್ನು ಯುವಜನತೆಗೆ ಪರಿಚಯಿಸುವ ಕಾರ್ಯದಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ.

ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಪ್ರಾಂಶುಪಾಲರಾಗಿ ಅವರು ವಿದ್ಯಾರ್ಥಿ ಕೇಂದ್ರಿತ ಶಿಕ್ಷಣಕ್ಕೆ ಆದ್ಯತೆ ನೀಡಿದ್ದಾರೆ. ಕೇವಲ ಆಡಳಿತ ನಡೆಸುವ ಪ್ರಾಂಶುಪಾಲರಲ್ಲದೆ ವಿದ್ಯಾರ್ಥಿಗಳೊಂದಿಗೆ ನೇರ ಸಂಪರ್ಕ ಇಟ್ಟುಕೊಂಡು ಮಾರ್ಗದರ್ಶನ ನೀಡುವ ಶಿಕ್ಷಕರಾಗಿ ಹೆಸರು ಪಡೆದಿದ್ದಾರೆ. ಕಾಲೇಜಿನ ಶೈಕ್ಷಣಿಕ ಮಟ್ಟ ಮತ್ತು ಸಾಹಿತ್ಯಿಕ ಚಟುವಟಿಕೆಗಳನ್ನು ವಿಸ್ತರಿಸುವಲ್ಲಿ ಅವರ ಪಾತ್ರ ಮಹತ್ವದ್ದಾಗಿದೆ.ಸರಳತೆ ಮತ್ತು ಮಾನವೀಯತೆ ಡಾ. ಸಿರಾಜ್ ಅಹಮದ್ ಅವರ ವ್ಯಕ್ತಿತ್ವದ ವಿಶೇಷ ಗುಣಗಳು. ಇಷ್ಟೊಂದು ಸಾಧನೆಗಳ ನಡುವೆಯೂ ಅವರು ವಿದ್ಯಾರ್ಥಿಗಳು ಮತ್ತು ಸಾಹಿತ್ಯಾಸಕ್ತರಿಗೆ ಸದಾ ಪ್ರೋತ್ಸಾಹ ನೀಡುತ್ತಾ ಜ್ಞಾನದ ಹಂಚಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಖ್ಯಾತ ಸಾಹಿತಿ ಎಚ್.ಎಸ್. ಶಿವಪ್ರಸಾದ್ ಅವರ ಶಿಷ್ಯರಾಗಿರುವ ಇವರ ಎರಡು ಪುಸ್ತಕಗಳು ಶೀಘ್ರದಲ್ಲೇ ಪ್ರಕಟವಾಗಲಿವೆ ಎಂಬುದು ಸಾಹಿತ್ಯ ವಲಯದಲ್ಲಿ ನಿರೀಕ್ಷೆ ಮೂಡಿಸಿದೆ.

ಡಾ. ಎಸ್. ಸಿರಾಜ್ ಅಹಮದ್ ಅವರು ಸಾಹಿತ್ಯ, ಸಂಶೋಧನೆ, ಅನುವಾದ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಅಪರೂಪದ ಸಾಧಕರು. ಕನ್ನಡ ನಾಡಿನ ಬೌದ್ಧಿಕ ಪರಂಪರೆಯನ್ನು ಮುಂದುವರಿಸುತ್ತಿರುವ ಅವರು ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಮಹತ್ವದ ಕೊಡುಗೆ ನೀಡಲಿ ಎಂಬುದು ಸಾಹಿತ್ಯಾಸಕ್ತರ ಆಶಯವಾಗಿದೆ.