✒️..ಅಮಿತ್ ಆರ್ ಆನಂದಪುರ
ಸಾಗರ: “ಮನುಷ್ಯತ್ವ ಇರುವ ಶಾಸಕ ಅಡ್ಡೇರಿಯಲ್ಲಿ ಬಡ ರೈತನ ಜಾಗವನ್ನು ಅರಣ್ಯ ಇಲಾಖೆಯವರು ತೆರವುಗೊಳಿಸಿರುವುದನ್ನು ಬಂದು ನೋಡಬೇಕು” ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಒತ್ತಾಯಿಸಿದರು.
ಅವರು ಸಾಗರ ಸಮೀಪದ ಅಡ್ಡೇರಿಯಲ್ಲಿ ಅರಣ್ಯ ಇಲಾಖೆಯವರು ಸುಜಾತ ಎಂಬುವವರ 15 ಗುಂಟೆ ಜಮೀನನ್ನು ತೆರವುಗೊಳಿಸಿದ ಸ್ಥಳಕ್ಕೆ ಭೇಟಿ ನೀಡಿ ಪತ್ರಕರ್ತರೊಂದಿಗೆ ಮಾತನಾಡಿದರು.

“ಶರಾವತಿ ಮುಳುಗಡೆ ರೈತರು ತಮ್ಮ ಪೂರ್ವಜರಿಂದ ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಯಾರೋ ರಾಜಕೀಯ ಪುಡಾರಿ ಹೇಳಿದ ಮಾತು ಕೇಳಿ ಅದನ್ನು ಕಿತ್ತೊಗೆಯಿರಿ ಎಂದು ಹೇಳುವುದು ಅಕ್ಷಮ್ಯ ಅಪರಾಧ” ಎಂದು ಖಂಡಿಸಿದರು.
“ಇದನ್ನು ಡಿಎಫ್ಓ ಮಾಡಿರಲು ಸಾಧ್ಯವಿಲ್ಲ. ಅವರ ಕೆಳಹಂತದ ಅಧಿಕಾರಿಗಳು ಮಾಡಿರಬೇಕು. ಆದರೆ ಇದು ಗಮನಕ್ಕೆ ಬಂದ ಕೂಡಲೇ ಯಾವ ಕ್ರಮ ಕೈಗೊಂಡಿದ್ದಾರೆ?” ಎಂದು ಪ್ರಶ್ನಿಸಿದರು.

ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವೈಫಲ್ಯದಿಂದ ಇಂತಹ ಘಟನೆಗಳು ನಡೆಯುತ್ತಿವೆ. ಅಧಿಕಾರಿಗಳ ಮೇಲೆ ಇವರಿಗೆ ಹಿಡಿತ ಸಾಧಿಸಲಾಗುತ್ತಿಲ್ಲ ಎಂದು ಆರೋಪಿಸಿದರು.
ಸ್ಥಳದಲ್ಲೇ ಡಿಎಫ್ಓಗೆ ಕರೆ
ಸ್ಥಳದಲ್ಲೇ ಡಿಎಫ್ಓಗೆ ಕರೆ ಮಾಡಿದ ಹರತಾಳು ಹಾಲಪ್ಪ, “ಸ್ಥಳ ಪರಿಶೀಲನೆ ಮಾಡದೇ ಹೇಗೆ ತೆರವುಗೊಳಿಸಿದ್ದೀರಿ? ಬಡ ರೈತರ ಮೇಲೆ ಈ ರೀತಿಯ ದೌರ್ಜನ್ಯ ಸರಿಯೇ?” ಎಂದು ಪ್ರಶ್ನಿಸಿ, ಕಚೇರಿ ಮುಂದೆ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು, ಹಕ್ರೆ ಮಲ್ಲಿಕಾರ್ಜುನ, ಶಾಂತಪ್ಪ ಗೌಡ್ರು, ದೇವೇಂದ್ರಪ್ಪ ಯಲಕುಂದ್ಲಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
















