ಶಿವಮೊಗ್ಗ.ಮೇ.14: ಮುಸ್ಲಿಂರನ್ನು ಒಲೈಸುವುದಕ್ಕೆ ಕೋರ್ಟ್ ತೀರ್ಪನ್ನೇ ಉಲ್ಲಂಘಿಸಿ ಹಿಜಾಬ್‌ಗೆ ಅವಕಾಶ ಕೊಟ್ಟು, ಕೇಸರಿ ಶಾಲು ಧರಿಸುವುದಕ್ಕೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದಲ್ಲದೆ, ಶಾಲಾ ಕಾಲೇಜುಗಳಲ್ಲಿ ಮಾತ್ರವಲ್ಲ ಇಡೀ ರಾಜ್ಯವೇ ಮುಂದೆ ಕೇಸರಿಮಯವಾಗಿ ಕಾಂಗ್ರೆಸ್ ನಿರ್ನಾಮವಾಗುವುದು ಖಚಿತ ಎಂದು ಎಚ್ಚರಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಇದು ಕಾಂಗ್ರೆಸ್ ಸರ್ಕಾರದ ಕೊನೆಯ ಆದೇಶವಾಗಲಿದೆ. ಮುಸ್ಲಿಂರನ್ನು ಒಲೈಸುವುದಕ್ಕೆ ಕೋರ್ಟ್ ತೀರ್ಪನ್ನೇ ಉಲ್ಲಂಘಿಸಲಾಗಿದ್ದು, ಮುಂದಿನ ದಿನಗಳಲ್ಲಿ ಕಾಂಗ್ರೆಸ್‌ಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಸಂವಿಧಾನ ಮತ್ತು ಕಾನೂನಿನ ಬಗ್ಗೆ ಸದಾ ಮಾತನಾಡುವ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಈಗ ಏನು ಮಾಡುತ್ತಿದ್ದಾರೆ? ಒಂದು ಕಡೆ ಸರ್ವ ಜನಾಂಗದ ಶಾಂತಿಯ ತೋಟ ಎಂದು ಹೇಳುತ್ತಲೇ, ಶಾಂತವಾಗಿರುವ ರಾಜ್ಯದಲ್ಲಿ ಹಿಂದೂ-ಮುಸ್ಲಿಂ ನಡುವೆ ಗೊಂದಲ ಸೃಷ್ಟಿಸಿ ಕೋಮು ಘರ್ಷಣೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಅವರು ಕಿಡಿಕಾರಿದರು.
ದಾವಣಗೆರೆ ಚುನಾವಣೆ ಸಂದರ್ಭದಲ್ಲಿ ಟಿಕೆಟ್ ಹಂಚಿಕೆ ವಿಚಾರವಾಗಿ ಅಸಮಾಧಾನಗೊಂಡಿದ್ದ ಮುಸ್ಲಿಂ ಸಮುದಾಯವನ್ನು ತೃಪ್ತಿಪಡಿಸಲು ಸರ್ಕಾರ ಈ ನಿರ್ಧಾರ ಮಾಡಿದೆ ಎಂದು ಆರೋಪಿಸಿದ ಅವರು, ಬಿಜೆಪಿ ಸರ್ಕಾರದ ಸಮವಸ್ತ್ರ ನೀತಿಯನ್ನು ಹೈಕೋರ್ಟ್ ಸ್ವಾಗತಿಸಿತ್ತು. ಆದರೆ ಈಗಿನ ಸರ್ಕಾರ ಮುಸ್ಲಿಮರ ಓಲೈಕೆಗಾಗಿ ಹಳೆಯ ಆದೇಶವನ್ನು ಹಿಂಪಡೆದು ನ್ಯಾಯಾಂಗದ ಆದೇಶವನ್ನು ಉಲ್ಲಂಘಿಸಿದೆ. ಈ ಓಲೈಕೆಯ ನೀಚ ವ್ಯವಸ್ಥೆಯಿಂದಾಗಿಯೇ ಡಿಎಂಕೆ ಮಾದರಿಯಲ್ಲಿ ಕಾಂಗ್ರೆಸ್ ಸರ್ಕಾರ ಕೂಡ ಪತನವಾಗಲಿದೆ ಎಂದು ಎಚ್ಚರಿಕೆ ನೀಡಿದರು.














