Home Blog ಶರಾವತಿ ಸಂತ್ರಸ್ತ ಐದು ಕುಟುಂಬಗಳು ಬೀದಿಗೆ..!!

ಶರಾವತಿ ಸಂತ್ರಸ್ತ ಐದು ಕುಟುಂಬಗಳು ಬೀದಿಗೆ..!!

53
0

✒️…ಅಮಿತ್ ಆರ್ ಆನಂದಪುರ

ಸಾಗರ (ಆನಂದಪುರ):ಶರಾವತಿ ಮುಳುಗಡೆ ಸಂತ್ರಸ್ತರಾಗಿ ಸಾಗರ ತಾಲೂಕಿನ ತ್ಯಾಗರ್ತಿಯ ನಾಡವಳ್ಳಿ ಗ್ರಾಮದಲ್ಲಿ ನೆಲೆಸಿರುವ ಐದು ಕುಟುಂಬಗಳಿಗೆ ಮಂಜೂರಾಗಿದ್ದ ಜಮೀನಿನ ಪಾಣಿ (ಆರ್‌ಟಿಸಿ) ತಾಂತ್ರಿಕ ದೋಷದ ನೆಪದಲ್ಲಿ ರದ್ದಾಗಿರುವುದನ್ನು ಖಂಡಿಸಿ ಸಂತ್ರಸ್ತರು ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂತ್ರಸ್ತ ಟೀಕಪ್ಪ, ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿದ್ದ ಅವಧಿಯಲ್ಲಿ ಬಗರ್ ಹುಕುಂ ಸಮಿತಿಯಡಿ ನಾಡವಳ್ಳಿ ಗ್ರಾಮದ ಸರ್ವೆ ನಂ.12ರಲ್ಲಿ ಮಾಸ್ತಮ್ಮ, ವೆಂಕಟೇಶ, ದಾನಪ್ಪ, ಬಸಪ್ಪ ಹಾಗೂ ರತ್ನಮ್ಮ ಸೇರಿದಂತೆ ಐದು ಸಂತ್ರಸ್ತ ಕುಟುಂಬಗಳಿಗೆ ಒಟ್ಟು 15 ಎಕರೆ 27 ಗುಂಟೆ ಜಮೀನು ಮಂಜೂರಾಗಿತ್ತು. ಬಳಿಕ ಬ್ಯಾಂಕ್‌ಗಳಿಂದ ಸಾಲ ಪಡೆದು ಬೋರ್‌ವೆಲ್ ಕೊರೆಸಿ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಬಳಸಿಕೊಂಡು ಕೃಷಿ ಅಭಿವೃದ್ಧಿಪಡಿಸಿ ಜೀವನ ನಡೆಸುತ್ತಿದ್ದೆವು. ಆದರೆ 2018ರಿಂದ ಏಕಾಏಕಿ ಜಮೀನಿನ ಆರ್‌ಟಿಸಿ ರದ್ದಾಗಿರುವುದು ತಿಳಿದುಬಂದಿದೆ ಎಂದು ಆರೋಪಿಸಿದರು.

ಈ ಕುರಿತು ಅಧಿಕಾರಿಗಳನ್ನು ಪ್ರಶ್ನಿಸಿದಾಗ, “ತಾಂತ್ರಿಕ ದೋಷ” ಎಂದು ಹೇಳುತ್ತಾ ಕಳೆದ ಐದು-ಆರು ವರ್ಷಗಳಿಂದ ಕಚೇರಿಗೆ ಅಲೆದಾಡಿಸುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಐದು ಕುಟುಂಬಗಳು ಇಂದು ಸಂಕಷ್ಟಕ್ಕೆ ಸಿಲುಕಿದ್ದು, ಜೀವನಾಧಾರವೇ ಕಳೆದುಕೊಳ್ಳುವ ಪರಿಸ್ಥಿತಿ ಎದುರಾಗಿದೆ ಎಂದು ಅವರು ಅಳಲು ತೋಡಿಕೊಂಡರು.

ಸಂತ್ರಸ್ತ ಆದರ್ಶ ಮಾತನಾಡಿ, “ನಮ್ಮ ತಂದೆ ಶರಾವತಿ ಮುಳುಗಡೆ ಸಂತ್ರಸ್ತರಾಗಿ ಇಲ್ಲಿ ಬಂದು ನೆಲೆಸಿ ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕಾಗೋಡು ತಿಮ್ಮಪ್ಪ ಅವರ ಅವಧಿಯಲ್ಲಿ ಖಾತೆ ಮಂಜೂರಾಗಿ ಸರ್ಕಾರದ ಸೌಲಭ್ಯ ಪಡೆದು ಉತ್ತಮ ಕೃಷಿ ಮಾಡುತ್ತಿದ್ದೆವು. ಆದರೆ 2018ರ ಬಳಿಕ ಜಮೀನಿನ ಖಾತೆ ಕಾಣಿಸುತ್ತಿಲ್ಲ. ತಾಂತ್ರಿಕ ದೋಷ ಎಂದು ಹೇಳುತ್ತಾ ಹಲವು ವರ್ಷಗಳಿಂದ ನಮ್ಮನ್ನು ಸತಾಯಿಸುತ್ತಿದ್ದು, ಈಗ ನಾವು ಬೀದಿಗೆ ಬರುವ ಸ್ಥಿತಿ ನಿರ್ಮಾಣವಾಗಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮತ್ತೋರ್ವ ಸಂತ್ರಸ್ತ ಕೃಷ್ಣಪ್ಪ ಮಾತನಾಡಿ, “ಶರಾವತಿ ಮುಳುಗಡೆ ಸಂತ್ರಸ್ತರಾಗಿ ಇಲ್ಲಿ ಬಂದು ಜೀವನ ಕಟ್ಟಿಕೊಂಡಿದ್ದೇವೆ. ನಮಗೆ ಆಸರೆಯಾಗಿ ಮಂಜೂರಾದ ಜಮೀನಿನ ಆರ್‌ಟಿಸಿ 2018ರಿಂದ ತಾಂತ್ರಿಕ ಸಮಸ್ಯೆ ಎಂದು ತೋರಿಸುತ್ತಿಲ್ಲ. ಇಷ್ಟೊಂದು ವರ್ಷವಾದರೂ ನ್ಯಾಯ ದೊರೆಯಲಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

*ಧರಣಿ ಸತ್ಯಾಗ್ರಹದ ಎಚ್ಚರಿಕೆ*

ತಾಂತ್ರಿಕ ದೋಷವನ್ನು ಕೂಡಲೇ ಸರಿಪಡಿಸಿ ತಮ್ಮ ಜಮೀನಿನ ಹಕ್ಕು ಪುನಃಸ್ಥಾಪಿಸಬೇಕು. ಇಲ್ಲವಾದರೆ ಮಹಿಳೆಯರು ಹಾಗೂ ಮಕ್ಕಳೊಂದಿಗೆ ಸಂಬಂಧಿಸಿದ ಅಧಿಕಾರಿಗಳ ಮನೆ ಅಥವಾ ಕಚೇರಿ ಎದುರು ಹಗಲು-ರಾತ್ರಿ ಉಗ್ರ ಧರಣಿ ಸತ್ಯಾಗ್ರಹ ನಡೆಸುವುದಾಗಿ ಸಂತ್ರಸ್ತರು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ವೆಂಕಟೇಶ ತಿಮ್ಮಪ್ಪ, ರೇವಪ್ಪ ಬಿನ್ ಬಸಪ್ಪ ,ಶ್ರೀಧರ್ ,ರಾಮಚಂದ್ರಪ್ಪ ಹಾಗೂ ಇತರರು ಉಪಸ್ಥಿತರಿದ್ದರು.

ಜಾಹೀರಾತು: