Home Shivamogga ಸಕ್ರೆಬೈಲು ಆನೆ ಬಿಡಾರ ತಾತ್ಕಾಲಿಕ ಬಂದ್..!!

ಸಕ್ರೆಬೈಲು ಆನೆ ಬಿಡಾರ ತಾತ್ಕಾಲಿಕ ಬಂದ್..!!

30
0

✒️..ಅಮಿತ್ ಆರ್ ಆನಂದಪುರ

ಶಿವಮೊಗ್ಗ: ಜಿಲ್ಲೆಯ ಅತ್ಯಂತ ಪ್ರಸಿದ್ದ ಹಾಗೂ ಆಕರ್ಷಣೀಯ ಪ್ರವಾಸಿ ತಾಣಗಳಲ್ಲಿ ಒಂದಾದ ಸಕ್ರೆಬೈಲು ಆನೆ ಬಿಡಾರಕ್ಕೆ ಇಂದಿನಿಂದ ಮುಂದಿನ ಕೆಲವು ದಿನಗಳ ಕಾಲ ಪ್ರವಾಸಿಗರ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಿ ಅರಣ್ಯ ಇಲಾಖೆ ಆದೇಶಿಸಿದೆ.

ಕೊಡಗಿನ ದುಬಾರೆ ಆನೆ ಬಿಡಾರದಲ್ಲಿ ಇತ್ತೀಚೆಗೆ ನಡೆದ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ, ಪ್ರವಾಸಿಗರ ಸುರಕ್ಷತೆಯನ್ನು ಕಾಯ್ದುಕೊಳ್ಳುವ ದೃಷ್ಟಿಯಿಂದ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ನಿಷೇಧಕ್ಕೆ ಕಾರಣವೇನು..?

ಕಳೆದ ಕೆಲವು ದಿನಗಳ ಹಿಂದೆ ಕೊಡಗಿನ ಪ್ರಸಿದ್ದ ದುಬಾರೆ ಆನೆ ಬಿಡಾರದಲ್ಲಿ ಆನೆಗಳ ನಡುವೆ ತೀವ್ರ ಗುದ್ದಾಟ ನಡೆದಿತ್ತು. ಈ ಆಕಸ್ಮಿಕ ಜಗಳದ ಸಂದರ್ಭದಲ್ಲಿ ಅಲ್ಲಿಗೆ ಭೇಟಿ ನೀಡಿದ್ದ ಪ್ರವಾಸಿ ಮಹಿಳೆಯೊಬ್ಬರು ದುರದೃಷ್ಟವಶಾತ್ ಸಾವನ್ನಪ್ಪಿದ್ದರು. ಈ ಕಹಿ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಅರಣ್ಯ ಇಲಾಖೆಯು, ರಾಜ್ಯದ ಎಲ್ಲಾ ಆನೆ ಬಿಡಾರಗಳಲ್ಲಿ ಪ್ರವಾಸಿಗರ ಸುರಕ್ಷತೆಗೆ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ರೂಪಿಸಲು ಮುಂದಾಗಿದೆ. ಬಿಡಾರಗಳಲ್ಲಿ ಹೊಸ ಪ್ರಮಾಣಿತ ಕಾರ್ಯಾಚರಣೆ ವಿಧಾನ ನಿಯಮಗಳನ್ನು ಜಾರಿಗೆ ತರುವಂತೆ ಉನ್ನತ ಅಧಿಕಾರಿಗಳು ಆದೇಶಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ ಬಂದ್..

ಶಿವಮೊಗ್ಗದ ಸಕ್ರೆಬೈಲು ಬಿಡಾರಕ್ಕೂ ಪ್ರತಿದಿನ ರಾಜ್ಯ ಹಾಗೂ ಹೊರರಾಜ್ಯಗಳಿಂದ ಅಪಾರ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಾರೆ.

ಇಲ್ಲಿಗೆ ಬರುವ ಸಾರ್ವಜನಿಕರು ಆನೆಗಳಿಗೆ ಸ್ನಾನ ಮಾಡಿಸುವುದು, ಅವುಗಳ ಜೊತೆ ಫೋಟೋ ತೆಗೆಸಿಕೊಳ್ಳುವುದು ಮತ್ತು ಆನೆಗಳನ್ನು ಮುಟ್ಟಿ ಆನಂದಿಸುವುದು ಸಾಮಾನ್ಯವಾಗಿದೆ. ಆದರೆ, ವನ್ಯಜೀವಿಗಳ ನಡೆ ಸದಾ ಅನಿರೀಕ್ಷಿತವಾಗಿರುವುದರಿಂದ, ದುಬಾರೆಯಲ್ಲಿ ನಡೆದಂತಹ ಘಟನೆ ಸಕ್ರೆಬೈಲಿನಲ್ಲಿ ಮರುಕಳಿಸಬಾರದು ಎಂಬ ಮುನ್ನೆಚ್ಚರಿಕೆಯಿಂದ ಅರಣ್ಯ ಇಲಾಖೆ ಈ ಮುಚ್ಚುವ ನಿರ್ಧಾರಕ್ಕೆ ಬಂದಿದೆ.

ಪ್ರವೇಶಾವಕಾಶ ಯಾವಾಗ?

ಮೂಲಗಳ ಪ್ರಕಾರ, ಹೊಸ ಎಸ್‌ಒಪಿ ನಿಯಮಗಳು ಸಂಪೂರ್ಣವಾಗಿ ಸಿದ್ಧಗೊಂಡು, ಬಿಡಾರದಲ್ಲಿ ಸುರಕ್ಷತಾ ಕ್ರಮಗಳು ಮತ್ತು ಹೊಸ ನಿಯಮಾವಳಿಗಳು ಜಾರಿಗೆ ಬರುವವರೆಗೂ ಸಕ್ರೆಬೈಲು ಆನೆ ಬಿಡಾರವು ಸಾರ್ವಜನಿಕರಿಗೆ ಮುಚ್ಚಿರಲಿದೆ. ವಾಸ್ತವವಾಗಿ ಈ ನಿಷೇಧ ಇಂದಿನಿಂದಲೇ ಕಟ್ಟುನಿಟ್ಟಾಗಿ ಜಾರಿಗೆ ಬರಬೇಕಿತ್ತು. ಆದರೆ ಮುಂಚಿತವಾಗಿ ಮಾಹಿತಿ ಇಲ್ಲದೆ ದೂರದ ಊರುಗಳಿಂದ ನೂರಾರು ಪ್ರವಾಸಿಗರು ಈಗಾಗಲೇ ಸ್ಥಳಕ್ಕೆ ಆಗಮಿಸಿದ್ದರಿಂದ, ಮಾನವೀಯತೆಯ ದೃಷ್ಟಿಯಿಂದ ಇಂದು ಮಾತ್ರ ಅವರಿಗೆ ಆನೆಗಳನ್ನು ವೀಕ್ಷಿಸಲು ಕೊನೆಯ ಅವಕಾಶ ಮಾಡಿಕೊಡಲಾಗಿತ್ತು.

ಹೊಸ ನಿಯಮಾವಳಿಗಳೊಂದಿಗೆ ಬಿಡಾರವು ಶೀಘ್ರದಲ್ಲೇ ಪುನರಾರಂಭಗೊಳ್ಳಲಿದ್ದು, ಅಲ್ಲಿಯವರೆಗೆ ಪ್ರವಾಸಿಗರು ತಮ್ಮ ಪ್ರವಾಸದ ಯೋಜನೆಯನ್ನು ಮುಂದೂಡುವುದು ಸೂಕ್ತವಾಗಿದೆ.