✒️..ಅಮಿತ್ ಆರ್ ಆನಂದಪುರ
ಸಾಗರ: ತಾಲ್ಲೂಕಿನ ಮಾಲ್ವೆ ಗ್ರಾಮದ ಅರಣ್ಯ ಭೂಮಿಯಲ್ಲಿ ನಿಯಮಬಾಹಿರವಾಗಿ ಜೆಸಿಬಿ ಬಳಸಿ ರಸ್ತೆ ನಿರ್ಮಾಣ ಹಾಗೂ ಮರಗಳ ಅಕ್ರಮ ಕಟಾವಿಗೆ ಪರೋಕ್ಷವಾಗಿ ಸಹಕರಿಸಿದ ಆರೋಪದ ಮೇಲೆ, ಸಾಗರ ವಲಯ ಅರಣ್ಯಾಧಿಕಾರಿ (RFO) ಅಣ್ಣಪ್ಪ ಬಿ. ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಮಾಲ್ವೆ ಗ್ರಾಮದ ಸರ್ವೆ ನಂ. 43ರಲ್ಲಿನ ಅರಣ್ಯ ಇಲಾಖೆಯ ಪರಿಹಾರಾತ್ಮಕ ಅರಣ್ಯ ಪ್ರದೇಶ ಹಾಗೂ ಸೊಪ್ಪಿನಬೆಟ್ಟದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಿಸಲಾಗಿದೆ.
ಈ ವೇಳೆ ಇಲಾಖೆಯು ಬೆಳೆಸಿದ್ದ ನೂರಾರು ಅಕೇಶಿಯಾ ಮತ್ತು ಇತರ ಕಾಡು ಮರಗಳನ್ನು ಅಕ್ರಮವಾಗಿ ಕಡಿದು ಸಾಗಾಟ ಮಾಡಲಾಗಿದ್ದು.ಜಿ.ಪಿ.ಎಸ್ ಚಿತ್ರಗಳ ಮೂಲಕ ಅಕ್ರಮ ರಸ್ತೆ ನಿರ್ಮಾಣ ಮತ್ತು ಮರಗಳ ಕಟಾವು ನಡೆದಿರುವುದು ಸ್ಪಷ್ಟವಾಗಿ ಕಂಡುಬಂದಿದೆ.

ಆರೋಪದ ಹಿನ್ನೆಲೆ:
ಅಪರಾಧ ನಡೆದ ಸ್ಥಳವು ಅರಣ್ಯದ ಹೊರಗಿದೆ ಎಂದು ಎಫ್.ಐ.ಆರ್‌ನಲ್ಲಿ ತಪ್ಪಾಗಿ ನಮೂದಿಸುವ ಮೂಲಕ ಮತ್ತು ದೋಷಪೂರಿತ ಸೆಕ್ಷನ್‌ಗಳನ್ನು ಹಾಕುವ ಮೂಲಕ ಆರೋಪಿಗಳಿಗೆ ಅನುಕೂಲ ಮಾಡಿಕೊಡುವ ಪ್ರಯತ್ನ ನಡೆದಿದೆ ಎಂಬುದು ಮೇಲ್ನೋಟಕ್ಕೆ ಗೋಚರಿಸಿದೆ. ಈ ಕುರಿತು ಅರಣ್ಯ ಸಚಿವರಿಗೆ ಸಲ್ಲಿಕೆಯಾದ ದೂರಿನ ಆಧಾರದ ಮೇಲೆ ತನಿಖೆ ನಡೆಸಿ ಈ ಕ್ರಮ ಕೈಗೊಳ್ಳಲಾಗಿದೆ.
ಅಮಾನತು ಆದೇಶ:
ಶಿಸ್ತು ಪ್ರಾಧಿಕಾರ ಹಾಗೂ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮೀನಾಕ್ಷಿ ನೇಗಿ ಅವರು ಈ ಅಮಾನತು ಆದೇಶ ಹೊರಡಿಸಿದ್ದಾರೆ. ಇಲಾಖಾ ತನಿಖೆಯನ್ನು ಬಾಕಿ ಇರಿಸಿ ಅಣ್ಣಪ್ಪ ಬಿ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದ್ದು, ಇವರು ಅಮಾನತ್ತಿನ ಅವಧಿಯಲ್ಲಿ ಕೇಂದ್ರ ಸ್ಥಾನ ಬಿಡುವಂತಿಲ್ಲ ಎಂದು ಸೂಚಿಸಲಾಗಿದೆ.














