ಮನೆ Blog 🛤️ ಸಾಗರ ಮಾರಿಕಾಂಬಾ ಜಾತ್ರೆಗೆ ವಿಶೇಷ ರೈಲು ಸೌಲಭ್ಯ: ಸಂಸದ ಬಿ.ವೈ. ರಾಘವೇಂದ್ರ..!!

🛤️ ಸಾಗರ ಮಾರಿಕಾಂಬಾ ಜಾತ್ರೆಗೆ ವಿಶೇಷ ರೈಲು ಸೌಲಭ್ಯ: ಸಂಸದ ಬಿ.ವೈ. ರಾಘವೇಂದ್ರ..!!

47
0

ಶಿವಮೊಗ್ಗ: ಸಾಗರ ಮಾರಿಕಾಂಬಾ ಜಾತ್ರೆಗೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ರೈಲು ಸೌಲಭ್ಯ ಕಲ್ಪಿಸುವಂತೆ ಸಂಸದ ಬಿ.ವೈ. ರಾಘವೇಂದ್ರ ಅವರ ಮನವಿಗೆ ರೈಲ್ವೆ ಇಲಾಖೆ ಸ್ಪಂದಿಸಿದ್ದು, ವಿಶೇಷ ರೈಲು ಸಂಚಾರ ಸೌಲಭ್ಯ ಒದಗಿಸಿದೆ.

ಫೆಬ್ರವರಿ 3ರಿಂದ 11ರವರೆಗೆ ನಡೆಯಲಿರುವ “ಮಲೆನಾಡಿನ ಮಹಾಕುಂಭ” ಎಂದೇ ಪ್ರಸಿದ್ಧವಾಗಿರುವ ಸಾಗರ ತಾಲ್ಲೂಕಿನ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ರೈಲು ಸೌಲಭ್ಯ ಕಲ್ಪಿಸುವಂತೆ ಕೋರಿ ಸಂಸದ ಬಿ.ವೈ. ರಾಘವೇಂದ್ರ ಅವರು ರೈಲ್ವೆ ಇಲಾಖೆ ರಾಜ್ಯ ಸಚಿವ ವಿ. ಸೋಮಣ್ಣ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆಗೆ ರೈಲ್ವೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದೆ.

ಈ ಕುರಿತಂತೆ ಅಧಿಕೃತ ಆದೇಶವನ್ನು ಇನ್ನೂ ಒಂದೆರಡು ದಿನಗಳಲ್ಲಿ ಪ್ರಕಟಿಸಲಾಗುವುದು ಎಂದು ತಿಳಿದು ಬಂದಿದೆ.

ಮೂರು ವರ್ಷಕ್ಕೊಮ್ಮೆ ನಡೆಯುವ ಈ ಐತಿಹಾಸಿಕ ಮಾರಿಕಾಂಬಾ ಜಾತ್ರೆಗೆ ರಾಜ್ಯದ ನಾನಾ ಕಡೆಗಳಿಂದ ಅಂದಾಜು 25 ರಿಂದ 30 ಲಕ್ಷ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಸಾರ್ವಜನಿಕರ ದಟ್ಟಣೆಯನ್ನು ನಿಯಂತ್ರಿಸಲು ಹಾಗೂ ಸುಗಮ, ಸುರಕ್ಷಿತ ಪ್ರಯಾಣದ ಅನುಕೂಲ ಒದಗಿಸಲು ವಿಶೇಷ ರೈಲ್ವೆ ಸೌಲಭ್ಯ ಕಲ್ಪಿಸುವ ಅಗತ್ಯವಿದೆ ಎಂದು ಸಂಸದ ರಾಘವೇಂದ್ರ ಅವರು ಒತ್ತಿ ಹೇಳಿದ್ದಾರೆ. ಈ ಸಂಬಂಧ ಕೇಂದ್ರ ಸರ್ಕಾರದ ವಿಶೇಷ ಪರಿಗಣನೆ ಹಾಗೂ ಸಹಕಾರ ಅಗತ್ಯವೆಂದು ತಿಳಿಸಿದ್ದಾರೆ.

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಪತ್ರ ಬರೆದಿರುವ ಸಂಸದರು, ಪ್ರಸ್ತುತ ವಾರಕ್ಕೆ ಮೂರು ದಿನ ಸಂಚರಿಸುತ್ತಿರುವ ರೈಲು ಸಂಖ್ಯೆ 16581/82 (ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್) ಅನ್ನು ಜಾತ್ರೆಯ ಅವಧಿಯಲ್ಲಿ, ಅಂದರೆ ಫೆಬ್ರವರಿ 3ರಿಂದ 11ರವರೆಗೆ ಪ್ರತಿದಿನ ಓಡಿಸುವಂತೆ ಹಾಗೂ ಈ ರೈಲನ್ನು ಶಿವಮೊಗ್ಗದಿಂದ ಸಮೀಪದ ತಾಳಗುಪ್ಪ ನಿಲ್ದಾಣದವರೆಗೆ ವಿಸ್ತರಿಸುವಂತೆ ಕೋರಿದ್ದಾರೆ.ಸಂಸದರ ಕೋರಿಕೆಯನ್ನು ಅನುಮೋದಿಸಿರುವ ರೈಲ್ವೆ ಇಲಾಖೆ ಶೀಘ್ರದಲ್ಲೇ ಈ ಕುರಿತು ಅಧಿಕೃತ ಆದೇಶ ಹೊರಡಿಸಲಿದೆ.

ಮಲೆನಾಡಿನ ರೈಲ್ವೆ ಅಭಿವೃದ್ಧಿಗೆ ಸದಾ ಸ್ಪಂದಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ ಅವರಿಗೆ ಸಂಸದರು ಕೃತಜ್ಞತೆ ಸಲ್ಲಿಸಿದ್ದಾರೆ.

“ದರ್ಶನಕ್ಕೆ ಬರುವ ಭಕ್ತರಿಗೆ ಸಂಪೂರ್ಣ ಅನುಕೂಲ ಒದಗಿಸಬೇಕು, ಯಾವುದೇ ತೊಂದರೆ ಶ್ರೀ ಮಾರಿಕಾಂಬಾ ದೇವಿಯ ಯಾತ್ರೆಯಲ್ಲಿ ಉಂಟಾಗಬಾರದು ಎನ್ನುವುದು ನನ್ನ ಆಶಯ. ಈ ತಾತ್ಕಾಲಿಕ ರೈಲ್ವೆ ಸೇವೆಯಿಂದ ಭಕ್ತಾದಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ನನ್ನ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರಕ್ಕೆ ಕೃತಜ್ಞತಾಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ” ಎಂದು ಸಂಸದ ಬಿ.ವೈ. ರಾಘವೇಂದ್ರ ಅವರು ತಿಳಿಸಿದ್ದಾರೆ.

✒️.. ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ