Home Blog ಮೆಗ್ಗಾನ್ ಆಸ್ಪತ್ರೆ ಎದುರು ಅನಧಿಕೃತ ಗಾಡಿಗಳ ತೆರವು: ಪಾಲಿಕೆ–ಪೊಲೀಸ್ ಸಂಯುಕ್ತ ಕಾರ್ಯಾಚರಣೆ..!!

ಮೆಗ್ಗಾನ್ ಆಸ್ಪತ್ರೆ ಎದುರು ಅನಧಿಕೃತ ಗಾಡಿಗಳ ತೆರವು: ಪಾಲಿಕೆ–ಪೊಲೀಸ್ ಸಂಯುಕ್ತ ಕಾರ್ಯಾಚರಣೆ..!!

74
0

ಶಿವಮೊಗ್ಗ:
ನಗರದ ಮೆಗ್ಗಾನ್ ಆಸ್ಪತ್ರೆ ಸಮೀಪದಲ್ಲಿರುವ ಅನಧಿಕೃತ ತಿಂಡಿ ಗಾಡಿಗಳು ಹಾಗೂ ಇತರೆ ಅಂಗಡಿಗಳನ್ನು ಮಹಾನಗರ ಪಾಲಿಕೆ ಆಡಳಿತವು ಇಂದು ಸಂಚಾರಿ ಪೊಲೀಸರ ಸಹಕಾರದೊಂದಿಗೆ ತೆರವುಗೊಳಿಸಿತು.

ನಗರದಲ್ಲಿ ಸುಮಾರು 150ಕ್ಕೂ ಹೆಚ್ಚು ತಳ್ಳುವ ಗಾಡಿಗಳು ಹಾಗೂ ಜ್ಯೂಸ್ ಗಾಡಿಗಳು ನಿಷ್ಕ್ರಿಯವಾಗಿದ್ದು, ಬೀದಿ ಬದಿ ವ್ಯಾಪಾರದ ಕಾರ್ಡ್ ಪಡೆದಿದ್ದರೂ ಅದನ್ನು ಸದುಪಯೋಗಪಡಿಸಿಕೊಳ್ಳದೇ ಸಾರ್ವಜನಿಕರಿಗೆ ಅಡ್ಡಿಯಾಗುವ ರೀತಿಯಲ್ಲಿ ಫುಟ್‌ಪಾತ್ ಮೇಲೆ ಶಾಶ್ವತವಾಗಿ ಸ್ಥಾಪಿಸಿಕೊಂಡಿದ್ದರು.

ಈ ಸಂಬಂಧ ಪಾಲಿಕೆಯಿಂದ ಸುಮಾರು 20 ದಿನಗಳ ಹಿಂದೆಯೇ ಪತ್ರಿಕೆಗಳ ಮೂಲಕ ಸೂಚನೆ ನೀಡಿ, ಗಾಡಿಗಳನ್ನು ತೆರವುಗೊಳಿಸುವಂತೆ ತಿಳಿಸಲಾಗಿತ್ತು. ಆದರೂ ಸಹ ಸಂಬಂಧಪಟ್ಟ ಗಾಡಿಗಳ ಮಾಲೀಕರು ಸೂಚನೆಗೆ ಸ್ಪಂದಿಸದೇ ಇದ್ದ ಹಿನ್ನೆಲೆಯಲ್ಲಿ ಇಂದು ತೆರವು ಕಾರ್ಯಾಚರಣೆಗೆ ಚಾಲನೆ ನೀಡಲಾಯಿತು.

ಮೆಗ್ಗಾನ್ ಆಸ್ಪತ್ರೆ ಮುಂಭಾಗದ ಫುಟ್‌ಪಾತ್‌ನಲ್ಲಿ ನಿಷ್ಕ್ರಿಯವಾಗಿದ್ದ ಹಾಗೂ ಕೆಲವು ಅನಧಿಕೃತ ತಳ್ಳುವ ಗಾಡಿಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಿ, ಸದ್ಯಕ್ಕೆ ದೊಡ್ಡಪೇಟೆ ಪೊಲೀಸ್ ಠಾಣೆ ಆವರಣಕ್ಕೆ ಸ್ಥಳಾಂತರಿಸಲಾಗಿದೆ. ನಿಯಮಾನುಸಾರ ದಂಡ ಪಾವತಿಸಿದ ನಂತರ ಮಾಲೀಕರಿಗೆ ಮತ್ತೆ ಅವಕಾಶ ನೀಡಲಾಗುವುದು ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಮಹಾನಗರ ಪಾಲಿಕೆಯ ಸಮುದಾಯ ವ್ಯವಹಾರಿಕ ಅಧಿಕಾರಿ ಅನುಪಮಾ ಭಟ್ ಅವರು, ಕೆಲವರು ತಮ್ಮ ಗಾಡಿಗಳನ್ನು ಒಳಬಾಡಿಗೆಗೆ ನೀಡುವುದು, ಯಾವುದೇ ವ್ಯಾಪಾರ ಚಟುವಟಿಕೆ ನಡೆಸದೇ ಇರುವುದು, ಹಾಗೆಯೇ ಮೊಬೈಲ್ ಕ್ಯಾಂಟೀನ್ ಗಾಡಿಗಳ ಸುತ್ತಮುತ್ತ ಟಾರ್ಪಾಲು ಹಾಕಿ ಐದು-ಆರು ಟೇಬಲ್ ಮತ್ತು ಕುರ್ಚಿಗಳನ್ನು ಅಳವಡಿಸಿ ಫುಟ್‌ಪಾತ್ ಮೇಲೆ ಅಕ್ರಮವಾಗಿ ಹೋಟೆಲ್ ನಿರ್ಮಿಸಿರುವುದು ಕಂಡುಬಂದಿದೆ. ಇಂತಹ ಅನಧಿಕೃತ ಗಾಡಿಗಳಿಗೆ ನೋಟಿಸ್ ನೀಡಿ ತೆರವುಗೊಳಿಸಲಾಗಿದೆ ಎಂದು ತಿಳಿಸಿದರು.

ಕಾರ್ಯಾಚರಣೆಯ ಸಂದರ್ಭದಲ್ಲಿ ಟ್ರಾಫಿಕ್ ಠಾಣೆಯ ಇನ್ಸ್‌ಪೆಕ್ಟರ್ ದೇವರಾಜ್ ಸೇರಿದಂತೆ ಪಾಲಿಕೆ ಹಾಗೂ ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

✒️…ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ