ಶಿಕಾರಿಪುರ: ಜಮೀನಿನ ಖಾತೆ ಬದಲಾವಣೆ ಎಂಬ ಸರಳ ಕೆಲಸಕ್ಕೆ ಲಕ್ಷಾಂತರ ರೂಪಾಯಿ ಲಂಚ ಬೇಡಿಕೆಯಿಟ್ಟಿದ್ದ ಗ್ರಾಮ ಆಡಳಿತಾಧಿಕಾರಿಯೊಬ್ಬರು ಕೊನೆಗೂ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ತಾಲೂಕು ಕಚೇರಿಯ ಕಂದಾಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಠಲ ಕೋಲ್ಹರ ಎಂಬ ವಿಲೇಜ್ ಅಕೌಂಟೆಂಟ್, ಖಾತೆ ಬದಲಾವಣೆ ಮಾಡಿಕೊಡುವುದಾಗಿ ಹೇಳಿ 4 ಲಕ್ಷ ರೂ. ಲಂಚಕ್ಕೆ ಪಟ್ಟು ಹಿಡಿದಿದ್ದರು ಎಂಬ ಆರೋಪ ಕೇಳಿಬಂದಿದೆ.

ಚಿಕ್ಕಬಂಜೂರು ಗ್ರಾಮದ ನಿವಾಸಿ ಜಕ್ರಿಯಾ ಬೇಗ್ ಅವರು ಹಣ ನೀಡಲು ನಿರಾಕರಿಸಿ, ಭ್ರಷ್ಟಾಚಾರದ ವಿರುದ್ಧ ಧೈರ್ಯವಾಗಿ ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ರೂಪಿಸಿದ ಕಾರ್ಯಾಚರಣೆಯಲ್ಲಿ, ಇಂದು ಮೊದಲ ಕಂತಿನ ರೂಪದಲ್ಲಿ 1 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಕ್ಷಣದಲ್ಲೇ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ.
ಲೋಕಾಯುಕ್ತ ಎಸ್‌ಪಿ ಎಂ.ಎಸ್. ಕೌಲಾಪುರೆ ಅವರ ನೇತೃತ್ವದ ತಂಡ ಈ ದಾಳಿ ನಡೆಸಿದ್ದು, ಆರೋಪಿಯಿಂದ ದಾಖಲೆಗಳನ್ನು ವಶಪಡಿಸಿಕೊಂಡು ಪ್ರಕರಣದ ಬಗ್ಗೆ ಸವಿಸ್ತಾರ ತನಿಖೆ ಮುಂದುವರಿಸಿದೆ.
✒️…ಅಮಿತ್ ಆರ್ ಆನಂದಪುರ
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ









