ಮನೆ Blog ಎಡಮನೆ: ರೈತರ ತೋಟ ಕಡಿತಲೆಗೆ ಕ್ಷಣಗಣನೆ. ಇದು ಆರಂಭವೇ?,ಸದ್ದಿಲ್ಲದೆ ನಡೆಯುತ್ತಿದೆ ಒಕ್ಕಲ್ಲೆಬ್ಬಿಸುವ ತಯಾರಿ!

ಎಡಮನೆ: ರೈತರ ತೋಟ ಕಡಿತಲೆಗೆ ಕ್ಷಣಗಣನೆ. ಇದು ಆರಂಭವೇ?,ಸದ್ದಿಲ್ಲದೆ ನಡೆಯುತ್ತಿದೆ ಒಕ್ಕಲ್ಲೆಬ್ಬಿಸುವ ತಯಾರಿ!

48
0

ಸಾಗರ:ಒಂದು ಕಾಲದಲ್ಲಿ ಮಲೆನಾಡಿನ ರೈತರನ್ನು ಬಲವಂತವಾಗಿ ಒಕ್ಕಲೆಬ್ಬಿಸೋದಿಲ್ಲ ಅಂದ ಸರ್ಕಾರ, ಇವತ್ತು ಅವರು ತಾವೇ ಒಕ್ಕಲೇಳಲೇ ಬೇಕಾದ ಒತ್ತಡವನ್ನು ಸೃಷ್ಟಿ ಮಾಡಿದೆ.

ಸಾಗರ ತಾಲ್ಲೂಕು ಕರೂರು ಹೋಬಳಿ ಕಟ್ಟಿನಕಾರು ಗ್ರಾಮದ ಎಡಮನೆಯಲ್ಲಿ ಒಟ್ಟು 14 ಕುಟುಂಬಗಳು ಕಳೆದ 6 ದಶಕಗಳಿಂದ ಅರಣ್ಯ ಇಲಾಖೆಯ ನಿರಂತರ ಕಿರುಕುಳಕ್ಕೆ ಒಳಗಾಗಿವೆ. ಅಂತಿಮವಾಗಿ ನ್ಯಾಯಾಲಯದ ಆದೇಶದ ಮೇರೆಗೆ ಇಂದು ಪೋಲಿಸ್ ಭದ್ರತೆಯೊಂದಿಗೆ ತೆರವು ಕಾರ್ಯಾಚರಣೆಗೆ ಅರಣ್ಯ ಇಲಾಖೆ ಸಜ್ಜಾಗಿದೆ.

ಕಟ್ಟಿನಕಾರು ಗ್ರಾಮದ ಎಡಮನೆ ಹಳ್ಳಿಯಲ್ಲಿ ಸುಮಾರು 14 ಕುಟುಂಬಗಳಿದ್ದು 1963ರ ಲಿಂಗನಮಕ್ಕಿ ಜಲಾಶಯದಿಂದ ಶರಾವತಿ ಸಂತ್ರಸ್ತರಾಗಿರುವ ಕುಟುಂಬಗಳೇ ಇಲ್ಲಿ ವಾಸವಾಗಿದ್ದು ಭೂಮಿ ಹಕ್ಕನ್ನು ಹೊರತು ಪಡಿಸಿ ಉಳಿದೆಲ್ಲ ನಾಗರೀಕ ಸೌಲಭ್ಯಗಳಿಂದ ಈ ಸಂತ್ರಸ್ತರು ವಂಚಿತರಾಗಿದ್ದು ಆಧುನಿಕ ನಾಗರೀಕ ಸಮಾಜದಿಂದ ದೂರ ಉಳಿದಿವೆ.

ಸುಮಾರು 60 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬಂದಿರುವ ಕಟ್ಟಿನಕಾರು ಗ್ರಾಮದ ಸರ್ವೇ ನಂ 264,265ರ ಎಡಮನೆ ಈ ಪ್ರದೇಶದಲ್ಲಿ ಲಾಗಾಯ್ತಿ ನಿಂದಲೂ ಅಡಿಕೆ, ಭತ್ತ, ಬಾಳೆ, ಕಾಳುಮೆಣಸು ಬೆಳೆಗೆ ತಕ್ಕಂತೆ ಸರ್ಕಾರಕ್ಕೆ ಕಂದಾಯ ಪಾವತಿ ಮಾಡುತ್ತಿದ್ದಾರೆ. ಸದರಿ ಪ್ರದೇಶದಲ್ಲಿ ಹಿಂದುಳಿದ ಸಮುದಾಯಕ್ಕೆ ಸೇರಿದ ಮನೆಗಳಿದ್ದು, ಭೂಮಿ ಉಳುಮೆ ಸಹ ಮಾಡುತ್ತಿದ್ದಾರೆ. ಮುಂಗಾರಿನಲ್ಲಿ ಬೆಳೆದ ಭತ್ತದ ಕಟಾವು ಸಹಿತ ಬಾಕಿ ಇದೆ. ಕೃಷಿಯನ್ನೆ ನಂಬಿರುವ ಕುಟುಂಬಗಳು ಈಗ ನಿರಾಶ್ರಿತರಾಗುವ ಆತಂಕ ಎದುರಾಗಿದೆ.

ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಅರ್ಜಿ ಸಲ್ಲಿಸಿ ಇತ್ಯರ್ಥಕ್ಕೆ ಬಾಕಿ ಉಳಿದಿರುವ ಹಾಗೂ ಪಟ್ಟಾ ಭೂಮಿ ಸೇರಿದಂತೆ 3 ಎಕರೆಗಿಂತ ಕಡಿಮೆ ಅರಣ್ಯ ಭೂಮಿ ಒತ್ತುವರಿಯನ್ನು ತೆರವು ಮಾಡುವುದಿಲ್ಲ ಎಂದು ಪದೇ ಪದೇ ಹೇಳುತ್ತಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆಯವರ ಮಾತು ಕಾರ್ಯರೂಪಕ್ಕೆ ಬಂದಂತಿಲ್ಲ, ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಶರಾವತಿ ಸಂತ್ರಸ್ತರ ಬಗ್ಗೆ ಕಾಳಜಿ ಇಲ್ಲ ಎಂದು ಇಲ್ಲಿನ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2015ರ ನಂತರದ ಮತ್ತು ದೊಡ್ಡ ಪ್ರಮಾಣದಲ್ಲಾದ ಅರಣ್ಯ ಒತ್ತುವರಿಯನ್ನು ಮಾತ್ರ ತೆರವು ಮಾಡಲಾಗುವುದು ಎಂದು ಅರಣ್ಯ ಸಚಿವರು ಹೇಳಿದ್ದರು, ಆದರೆ ನಾವು ಮಡೆನೂರು, ಲಿಂಗನಮಕ್ಕಿ ಜಲಾಶಯಕ್ಕಾಗಿ ನಮ್ಮ ಮನೆ, ಭೂಮಿ ತ್ಯಾಗ ಮಾಡಿದ್ದೇವೆ. ಈಗ ಸರ್ಕಾರ ಪುನಃ ನಮ್ಮನ್ನು ಒಕ್ಕಲೆಬ್ಬಿಸುತ್ತಿರುವುದು ಯಾವ ನ್ಯಾಯ ಎಂದು ರೈತ ಹೂವಯ್ಯ ಸರ್ಕಾರವನ್ನು ಪ್ರಶ್ನಿಸಿದರು.

ಜಿಲ್ಲೆಯ ಶೆಟ್ಟಿಹಳ್ಳಿ ಅಭಯಾರಣ್ಯದ ವ್ಯಾಪ್ತಿಯನ್ನು ಹಾಲಿ ಇರುವ ವ್ಯಾಪ್ತಿಯನ್ನು ಕಡಿತ ಮಾಡಿ ಮರು ವಿನ್ಯಾಸಗೊಳಿಸುವ ರಾಜ್ಯ ಸರ್ಕಾರದ ಪ್ರಸ್ತಾವಕ್ಕೆ ಕೇಂದ್ರದ ವನ್ಯಜೀವಿ ಮಂಡಳಿ ಈಚೆಗೆ ಒಪ್ಪಿಗೆ ನೀಡಿದೆ.

ಇದೇ ಮಾದರಿಯಲ್ಲಿ ಶರಾವತಿ ಸಿಂಗಳೀಕ ಅಭಯಾರಣ್ಯ, ಕಾರಣಿ ಮೀಸಲು ಅಭಯಾರಣ್ಯದಲ್ಲಿ ಬದುಕು ಕಟ್ಟಿಕೊಂಡಿರುವ ರೈತರ ಜನ ವಸತಿ ಪ್ರದೇಶವನ್ನು ಅಭಯಾರಣ್ಯದ ವ್ಯಾಪ್ತಿಯಿಂದ ಕೈ ಬಿಟ್ಟು ಅರಣ್ಯಭೂಮಿಯನ್ನಷ್ಟೇ ಗುರುತಿಸಿ ಅರಣ್ಯ ವ್ಯಾಪ್ತಿಯನ್ನು ಮರು ನಿಗದಿ ಮಾಡಬೇಕು ಎಂಬ ರೈತರ ಬೇಡಿಕೆ ಈಗ ಮತ್ತೆ ಮುನ್ನೆಲೆಗೆ ಬಂದಿದೆ.

ಅರಣ್ಯಗಳಲ್ಲಿ ತಲೆತಲಾಂತರದಿಂದ ವಾಸಿಸುತ್ತಿರುವ ರೈತರಿಗೆ ಕಾನೂನಾತ್ಮಕವಾಗಿ ಹಕ್ಕು ಪತ್ರಗಳನ್ನು ನೀಡದಿರಲು ರಾಜ­ಕೀಯ ಶಕ್ತಿಗಳೇ ಪ್ರಮುಖ ಕಾರಣ ಪರಿಸರ ಉಳಿಸುವ ನೆಪದಲ್ಲಿ ಸರ್ಕಾರಗಳು ಕಾನೂನು ಜಾರಿಗೆ ತಂದು ಸ್ಥಳೀಯರನ್ನು ಜನರ ಒಕ್ಕಲೆಬ್ಬಿಸುವ ತಂತ್ರ ಮಾಡುತ್ತಿವೆ.ಎಂದು ರೈತ ಸಂಘದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾಗರದಲ್ಲಿ ಜಾತ್ರೆ, ಎಡಮನೆಯಲ್ಲಿ ತೆರವು!

ಸಾಗರದಲ್ಲಿ ಪ್ರಸಿದ್ಧ ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವ ನಡೆಯುತ್ತಿದೆ. ಆದರೆ ಸರ್ಕಾರಿ ಬಲ ಪ್ರದರ್ಶನದ ಮೂಲಕ ಹಳ್ಳಿಗಳಲ್ಲಿ ರೈತರನ್ನು ಅರಣ್ಯ ಕಾಯ್ದೆ ಹೆಸರಿನಲ್ಲಿ ಒಕ್ಕಲೆಬ್ಬಸುವಿಕೆ ಸದ್ದಿಲ್ಲದೆ ನಡೆಯುತ್ತಿರುವುದು ನಾಗರೀಕರ ಸಮಾಜ ತಲೆ ತಗ್ಗಿಸುವಂತಿದೆ ಎನ್ನುತ್ತಾರೆ ಇಲ್ಲಿನ ಗ್ರಾಮಸ್ಥರು.

ಇಂದು ರೈತರ ತೋಟ, ಮನೆ ತೆರವು:

ಶರಾವತಿ ಕಣಿವೆಯ ಕಾರಣಿ ಮೀಸಲು ಅಭಯಾರಣ್ಯದಲ್ಲಿ ಅರಣ್ಯ ಕಾಯ್ದೆ 1963 ರ ಸೆಕ್ಷನ್ 24ಜಿ ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತೆರವಿಗೆ ನೋಟಿಸ್ ನೀಡಿದ್ದಾರೆ.

ಫೆ 5 ರ ಒಳಗೆ ಇಲ್ಲಿನ ರೈತರ ಭೂಮಿ, ಮನೆ ತೆರವು ಮಾಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಫೆ 6 ರ ಬೆಳಗ್ಗೆ ಪೋಲಿಸ್ ಭದ್ರತೆಯಲ್ಲಿ ರೈತರನ್ನು ತೆರವಿಗೆ ಸಿದ್ಧತೆ ನಡೆದಿದೆ ಎನ್ನಲಾಗಿದೆ.

ಪರಿಸರದ ನಡುವೆಯೇ ಜೀವನ ಕಟ್ಟಿಕೊಂಡ ಅರಣ್ಯವಾಸಿಗಳ ಬದುಕಿನ ಜತೆ ಕಾನೂನಿನ ಹೆಸರಿನಲ್ಲಿ ಸರ್ಕಾರಗಳು ಚೆಲ್ಲಾಟವಾಡುತ್ತಿವೆ. ಈ ಒಳಸಂಚು ಸಾಮಾನ್ಯವಲ್ಲ. ಮಲೆನಾಡಿನಲ್ಲಿ ಹೆಚ್ಚಾಗಿ ಇಂತಹ ವಿಷವರ್ತುಲ ಹಬ್ಬಿದೆ. ಕೊಡಲೇ ಸರ್ಕಾರ ತೆರವು ಕಾರ್ಯಾಚರಣೆ ಸ್ಥಗಿತ ಗೊಳಿಸಿ ರೈತರ ಹಿತ ಕಾಪಾಡಬೇಕು ಎಂದು ತಿ ನಾ ಶ್ರೀನಿವಾಸ್, ಮಲೆನಾಡು ರೈತರ ಹೋರಾಟ ಸಮಿತಿ ತಿಳಿಸಿದ್ದಾರೆ.

ತೆರವಿಗೆ ನೋಟಿಸ್ ನೀಡಿರುವುದು ರೈತರಿಗೆ ಆತಂಕ ಮೂಡಿಸಿದೆ.

ಇಂದು ತೆರವಿಗೆ ಬಂದ ಅಧಿಕಾರಿಗಳು ಗ್ರಾಮಸ್ಥರ ತೀವ್ರ ವಿರೋಧದಿಂದ ಹಿಂದಿರುಗಿದ್ದಾರೆ ಎನ್ನಲಾಗಿದೆ. ತೆರವು ಸಂಬಂಧ ಮಾತನಾಡಿದ ವಲಯ ಅರಣ್ಯಾಧಿಕಾರಿ ಇಂದು ಯಾವುದೇ ತೆರವು ಮಾಡಿಲ್ಲ ಮುಂದಿನ ದಿನಗಳಲ್ಲಿ ಮೇಲಧಿಕಾರಿಗಳ ಸೂಚನೆ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರಾಘವೇಂದ್ರ ,ವಲಯ ಅರಣ್ಯಾಧಿಕಾರಿ ಕಾರ್ಗಲ್ ಹೇಳಿದ್ದಾರೆ.

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ