ಮನೆ Blog ವಿಭಜಕ ಶಕ್ತಿಗಳ ದೌರ್ಜನ್ಯಕ್ಕೆ ಉತ್ತರವಾಗಿದ್ದು “ವಂದೇ ಮಾತರಂ” – ನ.ನಾಗರಾಜ

ವಿಭಜಕ ಶಕ್ತಿಗಳ ದೌರ್ಜನ್ಯಕ್ಕೆ ಉತ್ತರವಾಗಿದ್ದು “ವಂದೇ ಮಾತರಂ” – ನ.ನಾಗರಾಜ

26
0

ಹೊಸನಗರ: ವಂದೇ ಮಾತರಂ ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಕಿಚ್ಚು ಹಚ್ಚಿದಂತಹ ಸಾಹಿತ್ಯ. ಬಂಗಾಳವನ್ನು ಒಡೆಯಬೇಕೆಂಬ ಸಂಚುರೂಪಿಸಿದವರ ಹುಟ್ಟಡಗಿಸಿ ವಿಭಜಕ ಶಕ್ತಿಗಳಿಗೆ ಉತ್ತರವಾಗಿದ್ದು ಬಂಕಿಮ ಚಂದ್ರ ಚಟರ್ಜಿ ಅವರು ರಚಿಸಿದ ವಂದೇ ಮಾತರಂ ಎಂದು ವಿಕ್ರಮ ವಾರಪತ್ರಿಕೆಯ ಗೌರವ ಸಂಪಾದಕ ನ.ನಾಗರಾಜ ಅವರು ಹೇಳಿದರು.

ಕಾರಣಗಿರಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಗ್ರಾಮೋತ್ಥಾನ ಮತ್ತು ರಾಷ್ಟ್ರೋತ್ಥಾನ ಬಳಗ ಮತ್ತು ಗ್ರಾಮಭಾರತಿ ಟ್ರಸ್ಟ್ ಇವರ ಸಹಯೋಗದಲ್ಲಿ ನಡೆದ ಸಾಹಿತ್ಯ ಸಂಸ್ಕೃತಿ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಂದೇ ಮಾತರಂ’ನ ಏರಿಳಿತಗಳೇ ನಮ್ಮ ರಾಷ್ಟ್ರಜೀವನದ ಏರಿಳಿತಗಳು. ಅದರ ನಲಿವು ರಾಷ್ಟ್ರದ ನಲಿವು; ಅದರ ಅಳಲು ರಾಷ್ಟ್ರದ ಅಳಲು. ಅದರ ಗೆಲುವು ರಾಷ್ಟ್ರದ ಗೆಲುವು; ಅದರ ಸೋಲು ರಾಷ್ಟ್ರದ ಸೋಲು. ಅದರ ಮರೆವು ರಾಷ್ಟ್ರದ ಮರೆವು; ಅದರ ವಿಭಜನೆ ರಾಷ್ಟ್ರದ ವಿಭಜನೆ. ಅದರ ಕಥೆ ರಾಷ್ಟ್ರದ ಕಥೆ; ಅದರ ವ್ಯಥೆ ರಾಷ್ಟ್ರದ ವ್ಯಥೆ ಎಂದು ಶಿವರಾಮು ಅವರ ‘ ಒಂದು ಕಥೆ ಒಂದು ವ್ಯಥೆ’ ಪುಸ್ತಕದ ಅವಲೋಕನವನ್ನು ಮಾಡಿ ಪ್ರತಿಯೊಬ್ಬರು ಈ ಪುಸ್ತಕವನ್ನು ಓದಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ ಮಾತನಾಡಿ ವಂದೇ ಮಾತರಂ ಗೆ 150 ವರ್ಷ ಪೂರ್ಣವಾಗುವ ವೇಳೆಯಲ್ಲಿ ಗ್ರಾಮೋತ್ಥಾನ,ರಾಷ್ಟ್ರೋತ್ಥಾನ ಬಳಗ ಮತ್ತು ಗ್ರಾಮಭಾರತಿ ಟ್ರಸ್ಟ್, ವಂದೇ ಮಾತರಂ ಗೋಷ್ಠಿ ಗಾಯನ ಕಾರ್ಯಕ್ರಮವನ್ನು ಆಯೋಜಿಸುವ ವೇಳೆಯಲ್ಲಿಯೇ ಅದೇನೋ ಗೊತ್ತಿಲ್ಲ ಈಗಿನ ಕೇಂದ್ರ ಸರ್ಕಾರವು ಕೂಡ ವಂದೇ ಮಾತರಂ ಗೀತೆಯನ್ನು ಕಡ್ಡಾಯಗೊಳಿಸಿ ಆದೇಶವನ್ನು ಹೊರತಂದಿರುವುದು ನಮ್ಮೆಲ್ಲರಿಗೂ ಖುಷಿ ತಂದಿದೆ. ವಂದೇ ಮಾತರಂ ಹಾಡುವ ಮೂಲಕ ಸ್ವತ್ವದ ಸಂದೇಶವನ್ನು ಮುಂದಿನ ಪೀಳಿಗೆಗೆ ರವಾನಿಸೋಣ ಎಂದರು.

ಲೇಖಕ ತಿರುಪತಿ ನಾಯಕ್ ಮಾತನಾಡಿ ರಾಷ್ಟ್ರೋತ್ಥಾನ ಬಳಗ,ಗ್ರಾಮಭಾರತಿ ಟ್ರಸ್ಟ್ ಸಾಮಾಜಿಕ ಕಾರ್ಯಕ್ರಮಗಳನ್ನು ಅನೇಕ ವರ್ಷಗಳಿಂದ ನಿಸ್ವಾರ್ಥ ಭಾವದಿಂದ ನಡೆಸಿಕೊಂಡು ಬಂದಿದೆ. ಸ್ವತಃ ನಾನೇ ಹತ್ತಿರದಿಂದ ಗಮನಿಸಿದ್ದೇನೆ ಅದರಲ್ಲೂ ಹನಿಯ ರವಿಯಂತಹ ಪ್ರಾಮಾಣಿಕ, ನಿಸ್ವಾರ್ಥ ಮನಸ್ಸಿನಿಂದ ಸಮಾಜದ ಕೆಲಸ ಮಾಡುವಂತಹ ವ್ಯಕ್ತಿಗಳು ಈ ಸಂಸ್ಥೆಗಳಲ್ಲಿ ಇರುವುದರಿಂದ ಅದ್ಭುತ ಕಾರ್ಯಕ್ರಮಗಳು ನಡೆಯುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ನಿತ್ಯಾನಂದ ಹೆಬ್ಬಾರ್ ಮತ್ತು ನಿವೃತ್ತ ಶಿಕ್ಷಕ ಮತ್ತು ಲೇಖನರಾದ ತಿರುಪತಿ ನಾಯಕ ಅವರನ್ನು ಸನ್ಮಾನಿಸಲಾಯಿತು.

ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದ ಮುಂಭಾಗದಲ್ಲಿ ನೂರಾರು ಕಂಠಗಳಿಂದ ಸಾಮೂಹಿಕ ವಂದೇ ಮಾತರಂ ಗಾಯನ ಕಾರ್ಯಕ್ರಮದೊಂದಿಗೆ ಭರತನಾಟ್ಯ ಪ್ರದರ್ಶನವು ನಡೆಯಿತು. ಕೆ. ಎಸ್ ವಿನಾಯಕ ಅವರ ವಂದೇ ಮಾತರಂ ಕುರಿತು ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಕಲಾ ಭಾರತಿ ನೃತ್ಯ ಶಾಲೆಯ ಕಾರಣಗಿರಿ ಇವರಿಂದ ವಿದುಷಿ ಶ್ರೀಮತಿ ಆರತಿ ಮಹೇಶ್ ನಿರ್ದೇಶನದ ಭರತನಾಟ್ಯ ಪ್ರದರ್ಶನ ಕಾರ್ಯಕ್ರಮವು ಕಾರ್ಯಕ್ರಮದ ಮೆರಗು ಹೆಚ್ಚಿಸಿತು.

ಈ ಸಂದರ್ಭದಲ್ಲಿ ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳೀನ್ ಚಂದ್ರ ಕೆ.ಎಸ್, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಗರ್ತಿಕೆರೆ ರಾಘವೇಂದ್ರ ಉಪಸ್ಥಿತರಿದ್ದರು.

ಶೃತಿ ಶರತ್ ನಿರೂಪಿಸಿದರು, ವಿನಾಯಕ ಪ್ರಭು ಸ್ವಾಗತಿಸಿದರು, ಕು.ಧನ್ಯಶ್ರೀ ವಂದಿಸಿದರು.

✒️..ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ನ್ಯೂಸ್ ಚಾನೆಲ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ