
ಆನಂದಪುರ: ಕಷ್ಟಪಟ್ಟು ದುಡಿದು ಗಳಿಸಿದ ಆದಾಯದ ಒಂದು ಭಾಗವನ್ನು ಸಮಾಜಕ್ಕೆ ಅರ್ಪಿಸುವ ಮಹತ್ತರ ಗುಣ ರತ್ನಾಕರ ಹೊನಗೋಡು ಅವರಲ್ಲಿದೆ ಎಂದು ಮುರುಘ ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ಶ್ಲಾಘಿಸಿದರು.
ಇಂದು ಆನಂದಪುರದ ವೀರಾಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ಅವರಿಂದ ಉಚಿತವಾಗಿ ಸಮಾಜಕ್ಕೆ ನೀಡಲಾದ “ಮುಕ್ತಿ ವಾಹಿನಿ”ಗೆ ಚಾಲನೆ ನೀಡಿ ಅವರು ಮಾತನಾಡಿದರು.

ನಮ್ಮ ಭಾಗದಲ್ಲಿ ಮುಕ್ತಿ ವಾಹಿನಿಯ ಅವಶ್ಯಕತೆ ಹೆಚ್ಚಿದ್ದು, ಅದನ್ನು ಮನಗಂಡು ಉಚಿತ ಸೇವೆಯಾಗಿ ಸಮಾಜಕ್ಕೆ ಅರ್ಪಿಸಿರುವ ರತ್ನಾಕರ ಹೊನಗೋಡು ಅವರ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು. ಇಂತಹ ದಾನಶೀಲತೆ ಸಮಾಜಕ್ಕೆ ಮಾದರಿಯಾಗಿದೆ ಎಂದು ಅವರು ಹೇಳಿದರು.
ಆನಂದಪುರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಡೆಯುವ ಸಾರ್ವಜನಿಕ ಮತ್ತು ಸಮಾಜಮುಖಿ ಕಾರ್ಯಕ್ರಮಗಳಿಗೆ ರತ್ನಾಕರ ಹೊನಗೋಡು ಅವರ ಸಹಕಾರ ಸದಾ ಲಭ್ಯವಿರುತ್ತದೆ. ಸಮಾಜ ಸೇವೆಯಲ್ಲಿ ಅವರು ನಮ್ಮ ಭಾಗದ ಮುಂಚೂಣಿ ನಾಯಕರಾಗಿದ್ದಾರೆ ಎಂದು ಪ್ರಶಂಸಿಸಿದರು.

ಮಾಜಿ ಶಾಸಕ ಹರತಾಳು ಹಾಲಪ್ಪ ಮಾತನಾಡಿ, ಬಡತನದಿಂದ ಬೆಳೆದು ಹಗಲು-ರಾತ್ರಿ ಶ್ರಮಿಸಿ ಸಮಾಜದಲ್ಲಿ ಮಾದರಿಯಾಗಿರುವ ಉತ್ತಮ ವ್ಯಕ್ತಿತ್ವದವರಾದ ರತ್ನಾಕರ ಹೊನಗೋಡು ಅವರು ಈ ಬಾರಿ ಮುಕ್ತಿ ವಾಹಿನಿಯನ್ನು ಉಚಿತವಾಗಿ ನೀಡಿರುವುದು ಸಂತೋಷದ ಸಂಗತಿ. ದೇವರು ಅವರಿಗೆ ಇನ್ನಷ್ಟು ದಾನಧರ್ಮ ಮಾಡುವ ಶಕ್ತಿ ನೀಡಲಿ ಎಂದು ಹಾರೈಸಿದರು.
ಸಾಗರ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಬಿ.ಆರ್. ಜಯಂತ್ ಮಾತನಾಡಿ, ರತ್ನಾಕರ ಅವರ ಈ ಕಾರ್ಯ ನಿಜಕ್ಕೂ ಶ್ಲಾಘನೀಯ. ಸಮಾಜಕ್ಕೆ ಇವರಿಂದ ಇನ್ನಷ್ಟು ಸೇವಾ ಕಾರ್ಯಗಳು ನಡೆಯಲಿ, ಸಾರ್ವಜನಿಕ ಕೊಡುಗೆಗಳು ಮುಂದುವರಿಯಲಿ ಎಂದು ಆಶಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರತ್ನಾಕರ ಹೊನಗೋಡು, ಸಮಾಜದ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು “ಮುಕ್ತಿ ವಾಹಿನಿ”ಯನ್ನು ಉಚಿತವಾಗಿ ನೀಡಲಾಗಿದೆ. ತುರ್ತು ಸಂದರ್ಭಗಳಲ್ಲಿ ಹಾಗೂ ಜನಸಾಮಾನ್ಯರಿಗೆ ನೆರವಾಗುವ ಉದ್ದೇಶದಿಂದ ಈ ಸೇವೆಯನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಸಾವಿರಾರು ಅನಾಥ ಶವಗಳ ಸಂಸ್ಕಾರ ಮಾಡಿದ ಕೊಪ್ಪ ಕುಮಾರ ಗೌಡರು ಆನಂದಪುರದ ಸ್ಮಶಾನಗಳ ಸ್ವಚ್ಛತೆಯನ್ನ ಪ್ರತಿನಿತ್ಯ ಮಾಡುವ ಮಧುಸೂದನ್ ಬೇಕಲ್ ಹಾಗೂ ಸಾಮಾಜಿಕ ಕಾರ್ಯಕರ್ತ ಶಾಂತಕುಮಾರ್ ಅವರನ್ನು ಗೌರವಿಸಿ ಅಭಿನಂದಿಸಲಾಯಿತು
ಈ ಸಂದರ್ಭದಲ್ಲಿ ವೀರಾಂಜನೇಯ ಟ್ರಸ್ಟ್ ಅಧ್ಯಕ್ಷ ಹಾಲಪ್ಪ.. ಕಾರ್ಯದರ್ಶಿ ಜಗನ್ನಾಥ್ ಆರ್ ಸೇರಿದಂತೆ ಹಲವು ಸಂಘ ಸಂಸ್ಥೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.

✒️…ಅಮಿತ್ ಆರ್ ಆನಂದಪುರ
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ









