
ಆನಂದಪುರ:ಕಷ್ಟ ಬಂದಾಗ ಮಾತ್ರ ದೇವರ ನೆನಯಬಾರದು, ಸದಾ ದೇವರ ನೆನೆಯುತ್ತಿದ್ದರೆ ಕಷ್ಟಗಳು ದೂರವಾಗುತ್ತವೆ ಎಂದು ಕೋಣಂದೂರು ಮಠದ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ತಿಳಿಸಿದರು.
ಇವರು ಇಂದು ಸಮೀಪದ ಕೆಂಜಿಗಾಪುರ ಗ್ರಾಮದ ಶ್ರೀ ವೀರಭದ್ರೇಶ್ವರ ದೇವರ ರಥೋತ್ಸವದ ಬಳಿಕ ನಡೆದ ಧರ್ಮಸಭೆಯಲ್ಲಿ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

“ಮಾನವ ಜೀವನ ಅಮೂಲ್ಯ. ನಮಗೆಲ್ಲ ಮನುಷ್ಯ ಜನ್ಮ ದೊರಕಿರುವುದು ನಮ್ಮೆಲ್ಲರ ಭಾಗ್ಯ. ಕೇವಲ ಸಂಕಷ್ಟದ ಸಮಯದಲ್ಲಿ ಮಾತ್ರ ದೇವರನ್ನು ನೆನೆದು, ಸುಖದ ಸಮಯದಲ್ಲಿ ಮರೆತರೆ ಅದು ಭಕ್ತಿಯಲ್ಲ. ಪ್ರತಿದಿನವೂ ಸತ್ಪ್ರವೃತ್ತಿ, ಸತ್ಕಾರ್ಯಗಳ ಮೂಲಕ ದೇವರನ್ನು ಆರಾಧಿಸಬೇಕು ಎಂದರು.
ಒಳ್ಳೆಯದನ್ನು ಬಯಸಿ, ಇತರರಿಗೆ ಒಳಿತು ಮಾಡುವ ಮನೋಭಾವ ಬೆಳೆಸಿದರೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ವೃದ್ಧಿಯಾಗುತ್ತದೆ,” ಎಂದು ಹೇಳಿದರು.
ಧರ್ಮದ ಮಾರ್ಗದಲ್ಲಿ ನಡೆದು, ಹಿರಿಯರ ಮಾತು ಕೇಳಿ, ಸನ್ಮಾರ್ಗದಲ್ಲಿ ಬದುಕಿದರೆ ಜೀವನ ಸಾರ್ಥಕವಾಗುತ್ತದೆ. ದ್ವೇಷ, ಅಹಂಕಾರವನ್ನು ತೊರೆದು ಪ್ರೀತಿ ಮತ್ತು ಸಹಕಾರದಿಂದ ಬದುಕುವುದು ಪ್ರತಿಯೊಬ್ಬರ ಕರ್ತವ್ಯ ಎಂದರು.

ಉಪತಾಸಿಲ್ದಾರ್ ಶಾಂತರಾಜ್ ಮಾತನಾಡಿ, “ಎಲ್ಲಿ ಗುರು ಇರುತ್ತಾರೋ ಅಲ್ಲಿ ಗುರಿ ಇರುತ್ತದೆ. ಅಂತಹ ಸತ್ಪುರುಷರ ಸಾನ್ನಿಧ್ಯವನ್ನು ಪಡೆದು ಅವರ ಮಾರ್ಗದರ್ಶನದಲ್ಲಿ ನಡೆಯುವ ಹೊಣೆಗಾರಿಕೆ ನಮ್ಮೆಲ್ಲರದಾಗಿದೆ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಿತಿಯ ಅಧ್ಯಕ್ಷ ಶಾಂತಪ್ಪಗೌಡ್ರು, ಸುರೇಶ್ ಗೌಡ್ರು , ಗಿರೀಶ್ ಗೌಡ್ರು,ವೀರಶೈವ ಲಿಂಗಾಯತ ಸಭಾದ ತಾಲೂಕು ಅಧ್ಯಕ್ಷ ಪ್ರವೀಣ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಚಂದ್ರ ಮೌಳಿ ಉಪಸ್ಥಿತರಿದ್ದರು.
✒️.. ಅಮಿತ್ ಆರ್ ಆನಂದಪುರ
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t








