ಸಾಗರ:
ತ್ಯಾಗರ್ತಿ ಗ್ರಾಮದ ಕಾಡಿನ ಮಧ್ಯೆ ಪತ್ತೆಯಾದ ತಲೆ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆನಂದಪುರದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ತನಿಖೆ ನಡೆಸಿ ನಿಜಾಂಶವನ್ನು ಬಹಿರಂಗಪಡಿಸಿದ್ದಾರೆ.
ಮೃತ ವ್ಯಕ್ತಿಯನ್ನು ಬಸವರಾಜ್ (41) ಎಂದು ಗುರುತಿಸಲಾಗಿದೆ. ಇವರು ಸೊರಬ ತಾಲೂಕಿನ ಸಾರೆಮರೂರು ಗ್ರಾಮದ ನಿವಾಸಿ. ಕುಟುಂಬದ ಮೂಲಗಳ ಪ್ರಕಾರ, ಅಧಿಕ ಮದ್ಯಪಾನ ಮತ್ತು ಸಾಂಸಾರಿಕ ಕಲಹಗಳಿಂದ ಬಳಲುತ್ತಿದ್ದ ಬಸವರಾಜ್ ಅವರು 2024ರ ಜುಲೈ 16ರಂದು ತ್ಯಾಗರ್ತಿಯಲ್ಲಿರುವ ತಮ್ಮ ಅಕ್ಕ ದೇವಮ್ಮ ಅವರ ಮನೆಗೆ ಬಂದಿದ್ದರು. ಜುಲೈ 22ರ ಬೆಳಗಿನ ಜಾವದಿಂದ ಅವರು ಕಾಣೆಯಾಗಿದ್ದರು. ಈ ಕುರಿತು ಅವರ ಪತ್ನಿ ಆನಂದಪುರ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಪ್ರಕರಣ ದಾಖಲಿಸಿದ್ದರು.
ಸುಮಾರು ಒಂದು ವರ್ಷದ ನಂತರ, 2025ರ ನವೆಂಬರ್ 25ರಂದು ತ್ಯಾಗರ್ತಿ ಗ್ರಾಮದ ರವಿ ಎಂಬವರು ಕಾಡಿನಲ್ಲಿ ಕಟ್ಟಿಗೆ ಕಡಿಯುವಾಗ ತಲೆ ಬುರುಡೆ ಮತ್ತು ಕೆಲವು ಬಟ್ಟೆಗಳು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದರು.
ಸೂಚನೆ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ ಆನಂದಪುರ ಪೊಲೀಸ್ ಠಾಣೆಯ ಪಿ.ಎಸ್.ಐ ಪ್ರವೀಣ್ ಹಾಗೂ ಅವರ ತಂಡ, ಬಸವರಾಜ್ ಅವರ ಪತ್ನಿಯನ್ನು ಕರೆದುಕೊಂಡು ಪರಿಶೀಲನೆ ನಡೆಸಿದರು.ಸ್ಥಳದಲ್ಲಿದ್ದ ಬಟ್ಟೆಗಳನ್ನು ನೋಡಿ, ಅವು ತಮ್ಮ ಗಂಡನದೇ ಎಂದು ಪತ್ನಿ ಗುರುತಿಸಿದರು.

ಪ್ರಾಥಮಿಕ ತನಿಖೆಯಲ್ಲಿ, ಬಸವರಾಜ್ ಅವರು ವೈಯಕ್ತಿಕ ಮತ್ತು ಕುಟುಂಬ ಸಮಸ್ಯೆಗಳ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ವ್ಯಕ್ತವಾಗಿದೆ.
ಪ್ರಕರಣದ ಸತ್ಯಾಸತ್ಯತೆ ಖಚಿತಪಡಿಸಿಕೊಳ್ಳಲು ಅವರ ಮಗಳ ಡಿ.ಎನ್.ಎ ಮಾದರಿಯನ್ನು ಸಂಗ್ರಹಿಸಿ ತಲೆ ಬುರುಡೆಯನ್ನು ಶಿವಮೊಗ್ಗ, ಹುಬ್ಬಳ್ಳಿ ಹಾಗೂ ದಾವಣಗೆರೆ ಪ್ರಯೋಗಾಲಯಗಳಿಗೆ ಕಳುಹಿಸಲಾತ್ತು ಕೊನೆಯಲ್ಲಿ ಬಸವರಾಜ್ ಅವರದ್ದೇ ತಲೆ ಬುರುಡೆ ಎಂದು ದೃಢ ಪಟ್ಟಿದೆ.
ತನಿಖೆಯನ್ನು ಸಮಗ್ರವಾಗಿ ನಡೆಸಿ ಪ್ರಕರಣಕ್ಕೆ ತಾರ್ಕಿಕ ಅಂತ್ಯ ನೀಡಲು ಪಿ.ಎಸ್.ಐ ಪ್ರವೀಣ್ ಹಾಗೂ ಅವರ ತಂಡ ಮುಂದಾಗಿದೆ.
✒️..ಅಮಿತ್ ಆರ್ ಆನಂದಪುರ
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/IY9pAkaWjY80mynFTlPYHJ









