✒️..ಅಮಿತ್ ಆರ್ ಆನಂದಪುರ
ಆನಂದಪುರ: ಕಡ್ಲೆ ಹಂಕ್ಲು ಮಾರಿಕಾಂಬ ಜಾತ್ರೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ ನಡೆಸಿದ ವಿಚಾರಕ್ಕೆ ಕೆಲವರು ಟೀಕೆ-ಟಿಪ್ಪಣಿ ಮಾಡುತ್ತಿದ್ದಾರೆ. ಅವರಿಗೆ ಇದೇ ಉದ್ಯೋಗವಾಗಿದ್ದು, ಸ್ವಲ್ಪ ಜ್ಞಾನೋದಯ ಕಡಿಮೆ ಇರಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿರುಗೇಟು ನೀಡಿದರು.
ಆನಂದಪುರದ ದಾಸಕೊಪ್ಪದ ಅಂಬೇಡ್ಕರ್ ವೃತ್ತದಲ್ಲಿ 5.5 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಹೈ ಮಾಸ್ಕ್ ಲೈಟ್ ಉದ್ಘಾಟನೆ ನೆರವೇರಿಸಿ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ಕಡ್ಲೆ ಹಂಕ್ಲು ಮಾರಿಕಾಂಬ ಜಾತ್ರೆ ಅದ್ದೂರಿಯಾಗಿ ಹಾಗೂ ಯಾವುದೇ ಸಮಸ್ಯೆ ಇಲ್ಲದೆ ನಡೆಯಬೇಕೆಂಬ ಉದ್ದೇಶದಿಂದ ಪೂರ್ವಭಾವಿಯಾಗಿ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಕರೆಸಿ ಸಭೆ ನಡೆಸಿ ಅಗತ್ಯ ಮಾರ್ಗದರ್ಶನ ನೀಡಲಾಗಿದೆ. ಜನರಿಂದ ಆಯ್ಕೆಯಾದ ಪ್ರತಿನಿಧಿಯಾಗಿ ನನ್ನ ಕರ್ತವ್ಯವನ್ನು ನಾನು ಮಾಡಿದ್ದೇನೆ. ಇದರ ಬಗ್ಗೆ ಕೆಲವರು ಟೀಕೆ-ಟಿಪ್ಪಣಿ ಮಾಡುತ್ತಿರುವುದು ಸರಿಯಲ್ಲ. “ನಾನು ಇದ್ದೇನೆ” ಎಂಬುದನ್ನು ತೋರಿಸಿಕೊಳ್ಳಲು ಕೆಲವರು ಈ ರೀತಿಯಾಗಿ ಮಾತನಾಡುತ್ತಿರಬಹುದು. ಇಂತಹ ಕೆಟ್ಟ ಭಾವನೆಗಳನ್ನು ಬಿಡಬೇಕು. ಯಾರ ಟೀಕೆ-ಟಿಪ್ಪಣಿಗೂ ನಾನು ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ದಾಸಕೊಪ್ಪ ಸರ್ಕಲ್‌ನಲ್ಲಿ ಐದು ದಿನಗಳೊಳಗೆ ಹೈ ಮಾಸ್ಕ್ ಲೈಟ್ ಅಳವಡಿಸಲಾಗಿದೆ. ಇದೇ ರೀತಿಯಲ್ಲಿ ಎಡೇಹಳ್ಳಿ ಸರ್ಕಲ್‌ನಲ್ಲಿಯೂ ಹೈ ಮಾಸ್ಕ್ ಲೈಟ್ ಹಾಕಲಾಗುವುದು. ಕೆಂಜಿಗಾಪುರ ದೇವಸ್ಥಾನದ ಬಳಿಯೂ ಇತ್ತೀಚೆಗೆ ಹೈ ಮಾಸ್ಕ್ ಲೈಟ್ ಅಳವಡಿಸಲಾಗಿದೆ ಎಂದು ತಿಳಿಸಿದರು.

ಆನಂದಪುರದ ಜಾತ್ರೆ ಮುಗಿದ ಬಳಿಕ ಹೆದ್ದಾರಿ ರಸ್ತೆಯ ಕಾಮಗಾರಿಯೂ ಆರಂಭಗೊಳ್ಳಲಿದೆ. ಜೊತೆಗೆ ಗಾಣಿಗನಕೆರೆ ಪ್ರದೇಶದಲ್ಲಿ ವಾಕಿಂಗ್ ಪಾರ್ಕ್ ನಿರ್ಮಾಣಕ್ಕೆ ಒಂದು ಕೋಟಿ ರೂಪಾಯಿ ಮೀಸಲಿಟ್ಟಿದ್ದು, ಅದನ್ನು ಕೂಡ ಶೀಘ್ರದಲ್ಲೇ ಕಾರ್ಯರೂಪಕ್ಕೆ ತರಲಾಗುತ್ತದೆ. ಅಭಿವೃದ್ಧಿ ಕಾರ್ಯಗಳಲ್ಲಿ ಯಾವುದೇ ಹಿನ್ನಡೆ ಇಲ್ಲ; ಸದಾ ಜನಪರವಾಗಿ ಕೆಲಸ ಮಾಡುತ್ತೇನೆ. ಕೆಲವರ ಟೀಕೆ-ಟಿಪ್ಪಣಿಗಳಿಗೆ ನಾನು ಹೆದರುವುದಿಲ್ಲ ಎಂದು ಶಾಸಕರು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
✒️… ಅಮಿತ್ ಆರ್ ಆನಂದಪುರ
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t












