ಮನೆ Blog ಆನಂದಪುರದಲ್ಲಿ ಕಡ್ಲೆ ಹಂಕ್ಲು ಮಾರಿಕಾಂಬಾ ದೇವಿ ಜಾತ್ರೆ ಇಂದಿನಿಂದ ಆರಂಭ – 7 ದಿನಗಳ ವೈಭವ..!!.

ಆನಂದಪುರದಲ್ಲಿ ಕಡ್ಲೆ ಹಂಕ್ಲು ಮಾರಿಕಾಂಬಾ ದೇವಿ ಜಾತ್ರೆ ಇಂದಿನಿಂದ ಆರಂಭ – 7 ದಿನಗಳ ವೈಭವ..!!.

26
0

ಆನಂದಪುರ, ಮಾ.10:
ಇತಿಹಾಸ ಪ್ರಸಿದ್ಧವಾದ ಶ್ರೀ ಕಡ್ಲೆ ಹಂಕ್ಲು ಮಾರಿಕಾಂಬಾ ದೇವಿ ಜಾತ್ರೆ ಮಂಗಳವಾರದಿಂದ ಆನಂದಪುರ ಪಟ್ಟಣದಲ್ಲಿ ಭಾರಿ ವೈಭವದಿಂದ ಆರಂಭವಾಗಿದ್ದು, ಏಳು ದಿನಗಳ ಕಾಲ ನಡೆಯಲಿದೆ.

ಮೂರು ವರ್ಷಕ್ಕೊಮ್ಮೆ ನಡೆಯುವ ಈ ಮಾರಿಕಾಂಬಾ ದೇವಿ ಜಾತ್ರೆ 35 ಗ್ರಾಮಗಳ ಗ್ರಾಮ ದೇವತೆಯಾಗಿ ಪ್ರಸಿದ್ಧಿಯಾಗಿದ್ದು, ಪಟ್ಟಣ ಹಾಗೂ ಸುತ್ತಮುತ್ತಲಿನ ಗ್ರಾಮಗಳು ಜಾತ್ರೆ ಸಂಭ್ರಮದಲ್ಲಿ ತೊಡಗಿಕೊಂಡಿವೆ.
ಮಂಗಳವಾರ ರಾತ್ರಿ ಗೋಧೂಳಿ ಲಗ್ನದಲ್ಲಿ ತಾಯಿ ಮಾರಿಕಾಂಬೆಯನ್ನು ತವರ ಮನೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

ಸಂಪ್ರದಾಯದಂತೆ ಯಡೇಹಳ್ಳಿಯ ಮಲವಕೊಪ್ಪ ಮನೆತನದವರು ತಾಯಿಯ ತವರು ಮನೆಯವರಾಗಿದ್ದು, ದೇವಿಯ ಆಭರಣಗಳನ್ನು ಮಂಗಳವಾದ್ಯದೊಂದಿಗೆ ತಂದು ದೇವಿಗೆ ಅರ್ಪಿಸುತ್ತಾರೆ.

ಮಲಂದೂರು ಪಟೇಲ್ ಮನೆತನದವರು ದೇವಿಯ ಗಂಡನ ಮನೆಯವರಾಗಿದ್ದು, ಇವರನ್ನು ಮಂಗಳವಾದ್ಯದೊಂದಿಗೆ ತವರು ಮನೆಗೆ ಕರೆತಂದ ಬಳಿಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರುತ್ತವೆ.

ಮಾರಿಕಾಂಬಾ ದೇವಿಯನ್ನು ತವರು ಮನೆಯಲ್ಲಿ ಬ್ರಾಹ್ಮಣರು ಸಂಪ್ರದಾಯಬದ್ಧವಾಗಿ ಪ್ರತಿಷ್ಠಾಪಿಸಿದ ನಂತರ ಸಾರ್ವಜನಿಕರ ಸಮ್ಮುಖದಲ್ಲಿ ದೇವಿಗೆ ಮಾಂಗಲ್ಯ ಧಾರಣೆ ನಡೆಯಲಿದೆ. ರಾತ್ರಿ 12 ಗಂಟೆಯವರೆಗೆ ತವರು ಮನೆಯಲ್ಲಿ ಪೂಜೆ ನಡೆಯಲಿದ್ದು, ಸಾವಿರಾರು ಭಕ್ತರು ದೇವಿಗೆ ಉಡಿ ತುಂಬುವ ಶಾಸ್ತ್ರದೊಂದಿಗೆ ತಾಯಿಯ ದರ್ಶನ ಪಡೆಯಲಿದ್ದಾರೆ.

ಅದಾದ ನಂತರ ದೇವಿಯನ್ನು ಗಂಡನ ಮನೆಗೆ ಕರೆದೊಯ್ಯುವ ಶಾಸ್ತ್ರ ನಡೆಯುತ್ತದೆ. ಈ ವೇಳೆ ಅಸಾದಿ ಜನಾಂಗದವರು ದೇವಿಯನ್ನು ಹೊಗಳಿಕೆ ಹಾಕುತ್ತಾ ಮೆರವಣಿಗೆಯಲ್ಲಿ ಸಾಗಿಸುತ್ತಾರೆ. ಜಾನಪದ ಕಲಾತಂಡಗಳೊಂದಿಗೆ ರಥೋತ್ಸವದ ಮೆರವಣಿಗೆ ಮೂಲಕ ದೇವಿಯನ್ನು ಗಂಡನ ಮನೆಗೆ ಕರೆದೊಯ್ಯಲಾಗುತ್ತದೆ. ಸಾವಿರಾರು ಭಕ್ತರು ದೇವಿಯ ಘೋಷಣೆಗಳೊಂದಿಗೆ ಮೆರವಣಿಗೆಯಲ್ಲಿ ಭಾಗವಹಿಸುತ್ತಾರೆ. ಬೆಳಗಿನ ಜಾವ ಸೂರ್ಯೋದಯಕ್ಕೂ ಮುನ್ನ ದೇವಿಯನ್ನು ಗಂಡನ ಮನೆಯ ಗದ್ದಿಗೆಯಲ್ಲಿ ಪ್ರತಿಷ್ಠಾಪಿಸಲಾಗುತ್ತದೆ.

ಏಳು ದಿನಗಳ ಜಾತ್ರಾ ಮಹೋತ್ಸವದ ಅಂಗವಾಗಿ ಪ್ರತಿದಿನ ರಾತ್ರಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಾ.14 ಮತ್ತು 15 ರಂದು ಪಟ್ಟಣದ ಕೆಪಿಎಸ್ ಶಾಲೆ ಮುಂಭಾಗದ ಮೈದಾನದಲ್ಲಿ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದೆ.

ಜಾತ್ರೆಯ ಅಂಗವಾಗಿ ತವರು ಮನೆ ಹಾಗೂ ಗಂಡನ ಮನೆ ದೇವಸ್ಥಾನದಲ್ಲಿ ವಿಶೇಷ ವಿದ್ಯುತ್ ದೀಪಾಲಂಕಾರ ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಆಕರ್ಷಕ ದೀಪಾಲಂಕಾರ ಅಳವಡಿಸಲಾಗಿದ್ದು, ಇಡೀ ಆನಂದಪುರ ಪಟ್ಟಣವೇ ಜಗಮಗಿಸುತ್ತಿದೆ.

ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿದ್ದು, ಟ್ರಾಫಿಕ್ ಸಮಸ್ಯೆ ತಪ್ಪಿಸಲು ಪೊಲೀಸರು ವಾಹನ ಪಾರ್ಕಿಂಗ್ ವ್ಯವಸ್ಥೆಗಳನ್ನು ಈಗಾಗಲೇ ಗುರುತಿಸಿದ್ದಾರೆ. ಮಾ.16 ರಂದು ಮಾರಿಕಾಂಬಾ ದೇವಿಯನ್ನು ವನಕ್ಕೆ ಕಳಿಸುವ ಮೂಲಕ ಜಾತ್ರೆ ಸಮಾಪನಗೊಳ್ಳಲಿದೆ.

✒️…ಅಮಿತ್ ಆರ್ ಆನಂದಪುರ

ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t