
ಶಿವಮೊಗ್ಗ, ಮಾ.13:
ಸಾಗರ ತಾಲ್ಲೂಕಿನ ಕಾರ್ಗಲ್ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಂತಿ-ಬೇಧಿ ಪ್ರಕರಣಗಳು ಹೆಚ್ಚಾಗಿದ್ದು, 150 ಕ್ಕೂ ಹೆಚ್ಚು ಜನರು ಬಳಲುತ್ತಿದ್ದಾರೆ. ಈ ನಡುವೆ ಗುರುವಾರ ಮಹಿಳೆಯೊಬ್ಬರು ಮೃತಪಟ್ಟಿದ್ದು, ಆರೋಗ್ಯ ಇಲಾಖೆ ಅಧಿಕಾರಿಗಳು ಕಾಲರಾ ಶಂಕೆ ವ್ಯಕ್ತಪಡಿಸಿದ್ದಾರೆ.
ಕಾರ್ಗಲ್, ಜೋಗ, ಲಿಂಗನಮಕ್ಕಿ, ಅರಳಗೋಡು, ಹೆನ್ನಿ ಹಾಗೂ ಇಡುವಾಣಿ ಗ್ರಾಮಗಳಲ್ಲಿ ಕಳೆದ ನಾಲ್ಕು-ಐದು ದಿನಗಳಿಂದ ನಿವಾಸಿಗಳಲ್ಲಿ ಹೊಟ್ಟೆನೋವು, ವಾಂತಿ, ಬೇಧಿ, ತಲೆನೋವು ಹಾಗೂ ಜ್ವರ ಲಕ್ಷಣಗಳು ಕಾಣಿಸಿಕೊಂಡಿವೆ. ಅಸ್ವಸ್ಥಗೊಂಡ ಹಲವರನ್ನು ಕಾರ್ಗಲ್ ಹಾಗೂ ಸಾಗರದ ಆಸ್ಪತ್ರೆಗಳಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ವಾಂತಿ-ಬೇಧಿಯಿಂದ ಅಸ್ವಸ್ಥಗೊಂಡ ಕಾರ್ಗಲ್ ಸರ್ಕಾರಿ ಶಾಲೆಯ 15ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಬುಧವಾರ ಕೆಪಿಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದುಬಂದಿದೆ.
ಮಹಿಳೆ ಸಾವು:
ಕಾರ್ಗಲ್ ಪಟ್ಟಣ ಪಂಚಾಯ್ತಿ ಮಾಜಿ ಅಧ್ಯಕ್ಷ ಎಂ. ರಾಜು ಅವರ ತಾಯಿ ಜಯಲಕ್ಷ್ಮಿ (55) ಅವರು ಜ್ವರ, ವಾಂತಿ ಹಾಗೂ ಬೇಧಿಯಿಂದ ಅಸ್ವಸ್ಥಗೊಂಡಿದ್ದು, ಮೊದಲಿಗೆ ಸಾಗರದ ವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಕರೆತರಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಗುರುವಾರ ಮೃತಪಟ್ಟಿದ್ದಾರೆ.
ಆರೋಗ್ಯ ಇಲಾಖೆಯ ಎಚ್ಚರಿಕೆ:
ಕಾರ್ಗಲ್ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಆರೋಗ್ಯ ಇಲಾಖೆ ಸರ್ವೇಕ್ಷಣಾಧಿಕಾರಿ ಡಾ. ಎಲ್. ನಾಗರಾಜ ನಾಯ್ಕ ಮಾತನಾಡಿ, “ಶರಾವತಿ ಕೊಳ್ಳದ ನಿವಾಸಿಗಳು ಕಡ್ಡಾಯವಾಗಿ ನೀರನ್ನು ಕುದಿಸಿ ತಣಿಸಿ ಕುಡಿಯಬೇಕು. ಜಾತ್ರೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹಣ್ಣು, ಐಸ್ ಕ್ರೀಮ್, ಆಲೂಗಡ್ಡೆ ರೋಲ್, ಪಾನಿಪುರಿ, ಗೋಬಿ ಮಂಚೂರಿ ಸೇರಿದಂತೆ ಹೊರಗಿನ ತಿನಿಸುಗಳನ್ನು ಸೇವಿಸಬಾರದು” ಎಂದು ಮನವಿ ಮಾಡಿದ್ದಾರೆ.
✒️..ಅಮಿತ್ ಆರ್ ಆನಂದಪುರ











