

ಆನಂದಪುರ, ಮಾ.13:
ಎಲ್‌ಪಿಜಿ ಸಿಲಿಂಡರ್ ಪೂರೈಕೆ ಸಮಸ್ಯೆ ಕುರಿತು ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಪರಸ್ಪರ ಚರ್ಚಿಸಿ ಶೀಘ್ರ ಪರಿಹಾರ ಕಂಡುಕೊಳ್ಳಬೇಕು ಎಂದು ಮಾಜಿ ಸಚಿವ ಹರತಾಳು ಹಾಲಪ್ಪ ಹೇಳಿದರು.
ಗುರುವಾರ ಆನಂದಪುರದ ಕಡ್ಲೆ ಹಂಕ್ಲು ಮಾರಿಕಾಂಬಾ ಜಾತ್ರೆ ಪ್ರಯುಕ್ತ ದೇವಿ ದರ್ಶನ ಪಡೆದು ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ ಯುದ್ಧ ಪರಿಸ್ಥಿತಿಯೂ ಭಾರತಕ್ಕೆ ಪರೋಕ್ಷವಾಗಿ ಪರಿಣಾಮ ಬೀರಿದೆ ಎಂದು ತಿಳಿಸಿದರು. ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರ ಇಸ್ರೇಲ್ ಸೇರಿ ಇರಾನ್ ಮೇಲೆ ದಾಳಿ ನಡೆಸಿರುವುದು ವಿಶ್ವದ ಆರ್ಥಿಕ ವ್ಯವಸ್ಥೆಗೆ ಅಡಚಣೆ ಉಂಟುಮಾಡಿದ್ದು, ಅದರ ಪರಿಣಾಮ ದೇಶದಲ್ಲೂ ಕಂಡು ಬರುತ್ತಿದೆ ಎಂದು ಹೇಳಿದರು.

ಇಂತಹ ಸಂಕಷ್ಟಗಳು ದೂರವಾಗಲೆಂದು ನಮ್ಮ ಪೂರ್ವಜರು ದೇವರನ್ನು ಪ್ರಾರ್ಥಿಸುವ ಸಂಪ್ರದಾಯವನ್ನು ಮುಂದುವರೆಸಿದ್ದಾರೆ. ವಿಶ್ವಕ್ಕೆ ಎದುರಾಗಿರುವ ಈ ಸಂಕಟಗಳು ದೂರವಾಗಲಿ ಎಂದು ದೇವಿಗೆ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದರು.
ಎಲ್‌ಪಿಜಿ ಸಿಲಿಂಡರ್ ಕೊರತೆಯಿಂದ ಈಗಾಗಲೇ ಹೋಟೆಲ್ ಉದ್ಯಮದ ಮೇಲೆ ಪರಿಣಾಮ ಬಿದ್ದಿದ್ದು, ಮುಂದಿನ ದಿನಗಳಲ್ಲಿ ಜನಸಾಮಾನ್ಯರಿಗೂ ತೊಂದರೆ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ನಮ್ಮ ಲೋಕಸಭಾ ಸದಸ್ಯರು ಹಾಗೂ ಶಾಸಕರು ಹೆಚ್ಚಿನ ಗಮನಹರಿಸಿ, ಎರಡು ಸರ್ಕಾರಗಳು ಶೀಘ್ರವಾಗಿ ಚಿಂತನೆ ನಡೆಸಿ ಸಮಸ್ಯೆ ಬಗೆಹರಿಸಬೇಕು ಎಂದು ಅವರು ಒತ್ತಾಯಿಸಿದರು.

ಸಾಲಗಾರ ಸೀತಾರಾಮಯ್ಯ ಎಂದು ಟೀಕೆ..
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 17 ಬಾರಿ ಬಜೆಟ್ ಮಂಡನೆ ಮಾಡಿದ್ದು, ಪ್ರತಿ ಬಜೆಟ್‌ನಲ್ಲೂ ರಾಜ್ಯದ ಸಾಲ ಹೆಚ್ಚಿಸುತ್ತಾ ಬಂದಿದ್ದಾರೆ. ಈಗ ರಾಜ್ಯದ ಒಟ್ಟು ಸಾಲ ಸುಮಾರು ₹8 ಲಕ್ಷ 24 ಸಾವಿರ ಕೋಟಿ ತಲುಪಿದೆ. ಇದನ್ನು ಪ್ರಶ್ನಿಸಿದರೆ ಕೇಂದ್ರ ಸರ್ಕಾರವೂ ಸಾಲ ಮಾಡಿಲ್ಲವೇ ಎಂದು ಹೇಳುತ್ತಾರೆ. ಆದರೆ ಕೇಂದ್ರ ಸರ್ಕಾರದ ಆದಾಯ ಮತ್ತು ಖರ್ಚು ವ್ಯವಸ್ಥೆ ಬೇರೆ, ರಾಜ್ಯ ಸರ್ಕಾರದ ಆರ್ಥಿಕ ಸ್ಥಿತಿಯ ಬಗ್ಗೆ ಸ್ಪಷ್ಟನೆ ನೀಡಬೇಕು ಸಾಲಗಾರ ಸಿದ್ದರಾಮಯ್ಯನವರೆ ಎಂದು ಹರತಾಳು ಹಾಲಪ್ಪ ಪ್ರಶ್ನಿಸಿದರು.
ಇತ್ತೀಚೆಗೆ ಮಂಡನೆಯಾದ ಬಜೆಟ್‌ನಲ್ಲಿ ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಗೆ ಏನು ಅನುದಾನ ತಂದಿದ್ದೀರಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರಿಗೆ ಪ್ರಶ್ನೆ ಹಾಕಿದರು.

ರೈತರ ಸಮಸ್ಯೆ ಪರಿಹಾರಕ್ಕೆ ಹೋರಾಟ: ರತ್ನಾಕರ ಹೊನಗೋಡು
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು, ಸಾಗರ ತಾಲೂಕಿನಲ್ಲಿ ಅರಣ್ಯ ಹಾಗೂ ಬಗುರುಕುಂ ಸಮಸ್ಯೆಯಿಂದ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ , ಈ ಕುರಿತು ಶಾಸಕರು ರೈತರ ಪರವಾಗಿ ನಿಲ್ಲದೆ, ಅರಣ್ಯ ಇಲಾಖೆಯ ಮಾತುಗಳಿಗೆ ಮಾತ್ರ ಸ್ಪಂದಿಸುತ್ತಿದ್ದಾರೆ ಎಂದು ಆರೋಪಿಸಿದರು.
ರೈತರಿಗೆ ಯಾವುದೇ ರೀತಿಯ ಅನ್ಯಾಯ ಆಗದಂತೆ ನಾವು ಹೋರಾಟಕ್ಕೆ ಇಳಿಯುತ್ತೇವೆ. ರೈತರ ಹಕ್ಕುಗಳಿಗಾಗಿ ಮುಂದಿನ ದಿನಗಳಲ್ಲಿ ಸಂಘಟಿತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರು ಹಾಗೂ ದೇವಸ್ಥಾನದ ಸಮಿತಿಯವರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.
✒️..ಅಮಿತ್ ಆರ್ ಆನಂದಪುರ
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t










