

✒️..ಅಮಿತ್ ಆರ್ ಆನಂದಪುರ
ಆನಂದಪುರ:ಕುಸ್ತಿ ಕ್ರೀಡೆಗೆ ಸುಮಾರು ಐದು ಸಾವಿರ ವರ್ಷಗಳ ಇತಿಹಾಸವಿದ್ದು, ರಾಜರು ಹಾಗೂ ಮಹಾರಾಜರ ಕಾಲದಲ್ಲಿ ಈ ಕ್ರೀಡೆಗೆ ಅಪಾರ ಪ್ರಾಮುಖ್ಯತೆ ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅನೇಕ ಇತರ ಕ್ರೀಡೆಗಳ ಬೆಳವಣಿಗೆಯಿಂದ ಕುಸ್ತಿಯ ಮಹತ್ವ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತಿದೆ ಎಂದು ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ತಿಳಿಸಿದರು.
ಇವರು ಆನಂದಪುರದ ಕಡ್ಲೆ ಹಂಕ್ಲು ಮಾರಿಕಾಂಬ ಜಾತ್ರಾ ಸಮಿತಿಯಿಂದ ಆಯೋಜಿಸಲಾದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.

ಜಾತ್ರೆ ಹಾಗೂ ವಿಶೇಷ ಕ್ರೀಡಾ ಕಾರ್ಯಕ್ರಮಗಳ ಸಂದರ್ಭದಲ್ಲಿ ಕುಸ್ತಿ ಪಂದ್ಯಾವಳಿಗಳನ್ನು ಆಯೋಜಿಸುವ ಮೂಲಕ ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಅಗತ್ಯವಾಗಿದೆ ಎಂದರು.
ನವಯುಗ ಒಲಂಪಿಕ್ಸ್ 1896ರಿಂದ ಆರಂಭವಾದ ನಂತರ ಭಾರತವು ಕುಸ್ತಿ ವಿಭಾಗದಲ್ಲಿ ಹಲವು ಪದಕಗಳನ್ನು ಗಳಿಸಿದೆ. ವಿಶೇಷವಾಗಿ ಹರಿಯಾಣ ರಾಜ್ಯದಲ್ಲಿ ಹೆಚ್ಚಿನ ಕುಸ್ತಿಪಟುಗಳನ್ನು ಕಾಣಬಹುದು ಎಂದರು.

ಪ್ರಮುಖರಾದ ಲಿಂಗರಾಜ್ ಗೇರುಬೀಸ್ ಮಾತನಾಡಿ , ಕುಸ್ತಿ ಮಾನಸಿಕ ಹಾಗೂ ದೈಹಿಕವಾಗಿ ಆರೋಗ್ಯವನ್ನು ಕಾಪಾಡುವ ಅತ್ಯುತ್ತಮ ಕ್ರೀಡೆಯಾಗಿದೆ. ಇತ್ತೀಚಿನ ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ನಮ್ಮ ದೇಶೀಯ ಕ್ರೀಡೆಗಳು ನಿಧಾನವಾಗಿ ನಶಿಸುವ ಸ್ಥಿತಿಗೆ ಬರುತ್ತಿವೆ. ಗ್ರಾಮಾಂತರ ಮಟ್ಟದಲ್ಲಿ ದೇಶೀಯ ಕ್ರೀಡೆಗಳನ್ನು ಪ್ರೋತ್ಸಾಹಿಸುವ ಮೂಲಕ ಅವುಗಳನ್ನು ಉಳಿಸಿ ಬೆಳೆಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಹೇಳಿದರು.
ಕುಸ್ತಿ ಸಮಿತಿಯ ಅಧ್ಯಕ್ಷ ವೇಣಾಕ್ಷ ಮಾತನಾಡಿ ಭಾರತದ ಸಾಂಪ್ರದಾಯಿಕ ಕ್ರೀಡೆಯಾದ ಕುಸ್ತಿ ನಶಿಸುವ ಹಂತದಲ್ಲಿದೆ ಇದನ್ನು ಬೆಳೆಸುವಂತಹ ಕೆಲಸವಾಗಬೇಕಾಗಿದೆ ಎಂದರು.

ಭಾಗವಹಿಸಲು ಮಹಾರಾಷ್ಟ್ರ ಪಂಜಾಬ್ ಕರ್ನಾಟಕದ ಧಾರವಾಡ ಮೈಸೂರು ಮಾಸೂರು ಶಿರಾಳಕೊಪ್ಪ ಹಿರೇಕೆರೂರು ಹರಿಹರ ಭಾಗದಿಂದ ರಾಜ್ಯ ಮತ್ತು ರಾಷ್ಟ್ರಮಟ್ಟದ ಕುಸ್ತಿ ಕ್ರೀಡಾಪಟುಗಳು ಕುಸ್ತಿಯಲ್ಲಿ ಭಾಗವಹಿಸಿದ್ದರು .
ಈ ಸಂದರ್ಭದಲ್ಲಿ ಜಾತ್ರಾ ಸಮಿತಿಯ ಅಧ್ಯಕ್ಷ ವೆಂಕಟೇಶ್ ನಾಗರಾಜ್ , ಕೆ ಟಿ ತಿಮ್ಮೇಶ್, ರವಿಕುಮಾರ್ ಎಲ್ಐಸಿ ,ಆನಂದ ಹರಟೆ,ಕಾರ್ತಿಕ್, ವೀರಪ್ಪ ,ಜಯದೇವಪ್ಪ ಗೌಡ , ರಂಗನಾಥ್ , ಚಂದ್ರಶೇಖರ್ , ರವಿಕುಮಾರ್ ,ಶರಣ್ ,ಹಾಗೂ ತೀರ್ಪುಗಾರರಾದ ಬಸವರಾಜ್ ,ಲೋಕೇಶ್, ಸುಂದರ್ ಸಿಂಗ್ ಹಾಗೂ ಜಾತ್ರಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t










