✒️..ಅಮಿತ್ ಆರ್ ಆನಂದಪುರ
ಆನಂದಪುರ: ಸಮೀಪದ ದಾಸಕೊಪ್ಪ ಗ್ರಾಮದ ಜನವಸತಿ ಪ್ರದೇಶದಲ್ಲಿ ಮಂಗಳವಾರ ಬೃಹತ್ ಗಾತ್ರದ ನಾಗರಹಾವೊಂದು ಕಾಣಿಸಿಕೊಂಡು ಗ್ರಾಮಸ್ಥರಲ್ಲಿ ತೀವ್ರ ಆತಂಕ ಮೂಡಿಸಿತ್ತು. ಸ್ಥಳೀಯ ಉರಗ ಪ್ರೇಮಿಗಳ ಸಮಯಪ್ರಜ್ಞೆಯಿಂದ ಹಾವನ್ನು ಸುರಕ್ಷಿತವಾಗಿ ಸೆರೆಹಿಡಿಯಲಾಗಿದೆ.
ಘಟನೆಯ ವಿವರ:
ದಾಸಕೊಪ್ಪ ಗ್ರಾಮದ ಮನೆಯೊಂದರ ಬಳಿ ಸುಮಾರು 5 ಅಡಿಗೂ ಅಧಿಕ ಉದ್ದದ ‘ಗೋದಿ ಬಣ್ಣದ ನಾಗರಹಾವು’ ಸಂಚರಿಸುತ್ತಿರುವುದನ್ನು ಗಮನಿಸಿದ ನಿವಾಸಿಗಳು ಭಯಭೀತರಾಗಿದ್ದರು. ತಕ್ಷಣವೇ ಸ್ಥಳೀಯ ಉರಗ ಪ್ರೇಮಿಗಳಾದ ಅಕ್ಷಯ್ ಮತ್ತು ಅಣ್ಣಪ್ಪ ಸ್ಥಳಕ್ಕೆ ಧಾವಿಸಿದ ಇಬ್ಬರೂ ಯುವಕರು, ಯಾವುದೇ ಪ್ರಾಣಾಪಾಯ ಸಂಭವಿಸದಂತೆ ಅತ್ಯಂತ ಚಾಕಚಕ್ಯತೆಯಿಂದ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಅಕ್ಷಯ್ ಸಾಹಸಕ್ಕೆ ಮೆಚ್ಚುಗೆ:
ದಾಸಕೊಪ್ಪದ ಅಕ್ಷಯ್ ಅವರು ವನ್ಯಜೀವಿ ಸಂರಕ್ಷಣೆಯಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಈವರೆಗೆ ಸುಮಾರು 50ಕ್ಕೂ ಹೆಚ್ಚು ವಿವಿಧ ಜಾತಿಯ ಹಾವುಗಳನ್ನು ರಕ್ಷಿಸಿ ಅರಣ್ಯ ಇಲಾಖೆಯ ಸಹಕಾರದೊಂದಿಗೆ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ಅಕ್ಷಯ್ ಮತ್ತು ಅಣ್ಣಪ್ಪ ಅವರ ಈ ಸಾಹಸಮಯ ಕಾರ್ಯಕ್ಕೆ ಗ್ರಾಮಸ್ಥರು ಹಾಗೂ ಪರಿಸರ ಪ್ರೇಮಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಸೆರೆಹಿಡಿಯಲಾದ ನಾಗರಹಾವನ್ನು ನಂತರ ಜನವಸತಿ ಇಲ್ಲದ ದಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.
ನಿರಂತರ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ:https://chat.whatsapp.com/CnYYumPSez6AMYyw8cHG9A?mode=ac_t









