✒️..ಅಮಿತ್ ಆರ್ ಆನಂದಪುರ
ಶಿವಮೊಗ್ಗ, ಏ.2: ಗಂಗಾ ಕಲ್ಯಾಣ ಯೋಜನೆಯಡಿ ಸೌಲಭ್ಯ ಒದಗಿಸಲು ಫಲಾನುಭವಿಯಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಅಧಿಕಾರಿಗೆ ಶಿವಮೊಗ್ಗದ ನ್ಯಾಯಾಲಯವು ಜೈಲು ಶಿಕ್ಷೆಹಾಗೂ ದಂಡ ವಿಧಿಸಿ ಇಂದು ತೀರ್ಪು ನೀಡಿದೆ.
ಸಾಗರ ತಾಲ್ಲೂಕಿನ ಹೊಸಗುಂದ ಗ್ರಾಮದ ನಿವಾಸಿ ಹೆಚ್.ಎಸ್. ಜನಾರ್ದನ್ ಎಂಬುವವರು 2015-16ನೇ ಸಾಲಿನಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ‘ಗಂಗಾ ಕಲ್ಯಾಣ‘ ಯೋಜನೆಯಡಿ ಕೊಳವೆ ಬಾವಿ ಕೊರೆಸಲು ಆಯ್ಕೆಯಾಗಿದ್ದರು. ಈ ಸೌಲಭ್ಯ ಮಾಡಿಕೊಡಲು ಅಂದಿನ ಜಿಲ್ಲಾ ವ್ಯವಸ್ಥಾಪಕರಾದ ಆರ್.ಎಸ್. ಪರಮೇಶ್ವರಪ್ಪ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ದಿನಾಂಕ 13-07-2017 ರಂದು ತಮ್ಮ ಕಚೇರಿಯಲ್ಲಿ ದೂರುದಾರರಿಂದ 10,000/- ರೂ. ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ಕಾರ್ಯಾಚರಣೆ ನಡೆಸಿ ಅಧಿಕಾರಿಯನ್ನು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದರು. ಅಂದಿನ ಪೊಲೀಸ್ ಉಪಾಧೀಕ್ಷಕರಾದ ಎ. ಚಂದ್ರಪ್ಪ ಅವರು ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಶಿವಮೊಗ್ಗದ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶರು ಇಂದು ಮಹತ್ವದ ಆದೇಶ ನೀಡಿದ್ದರು. ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿ ಆರ್.ಎಸ್. ಪರಮೇಶ್ವರಪ್ಪ ಅವರಿಗೆ 2 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 40,000/- ರೂ. ದಂಡ ವಿಧಿಸಲಾಗಿದೆ. ಸರ್ಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕರಾದ ಎಂ.ಡಿ. ಸುಂದರ್ ರಾಜ್ ಅವರು ವಾದ ಮಂಡಿಸಿದ್ದರು.
ಹೆಚ್ಚಿನ ಸುದ್ದಿಗಾಗಿ ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ;https://chat.whatsapp.com/CnYYumPSez6AMYyw8cHG9A?mode=ac_t









