Home Blog ಬಿದರೂರಿನಲ್ಲಿ ಭಗವಾನ್ ಶ್ರೀ 1008 ವರ್ಧಮಾನಸ್ವಾಮಿ ಜಿನಮಂದಿರದ ಪಂಚಕಲ್ಯಾಣ ಮಹೋತ್ಸವ..!!

ಬಿದರೂರಿನಲ್ಲಿ ಭಗವಾನ್ ಶ್ರೀ 1008 ವರ್ಧಮಾನಸ್ವಾಮಿ ಜಿನಮಂದಿರದ ಪಂಚಕಲ್ಯಾಣ ಮಹೋತ್ಸವ..!!

18
0

ಸಾಗರ ತಾಲ್ಲೂಕಿಗೆ ತನ್ನದೆಯಾದ ಇತಿಹಾಸವಿದ್ದು ಅದರಲ್ಲೂ ಜೈನಧರ್ಮದ ಇತಿಹಾಸಕ್ಕೆ ವಿಶೇಷವಾದ ಸ್ಥಾನವಿದೆ. ತಾಲ್ಲೂಕಿನ ಅನೇಕ ಪ್ರಮುಖ ಗ್ರಾಮಗಳಲ್ಲಿ ಪುರಾತನ ಜಿನಮಂದಿರಗಳಿದ್ದು ವಿಶ್ವ ವಿಖ್ಯಾತ ಜೋಗಜಲಪಾತದ ತಪ್ಪಲಿನಲ್ಲಿರುವ ಬಿದರೂರು ಗ್ರಾಮಕ್ಕೆ ಪುರಾತನ ಇತಿಹಾಸವಿದೆ.


ಇಲ್ಲಿನ ಭಗವಾನ್ ಶ್ರೀ 1008 ವರ್ಧಮಾನ ಸ್ವಾಮಿ ಜಿನಂದಿರವು 900 ವರ್ಷಗಳ ಇತಿಹಾಸವನ್ನು ಹೊಂದಿದೆ. ಹಾಡುವಳ್ಳಿಯ ಸಾಳುವ ಅರಸರು 12ರಿಂದ 16ನೇ ಶತಮಾನದವರೆಗೆ ಭಟ್ಕಳ, ಹಾಡುವಳ್ಳಿ,ವೇಣುಪುರ ಹಾಗೂ ತಾಲ್ಲೂಕಿನ ಕರೂರು ಬಾರಂಗಿ ಆವಿನಹಳ್ಳಿ ಹೋಬಳಿಯ ಕೆಲವು ಭಾಗಗಳನ್ನು ಒಳಗೊಂಡ ರಾಜ್ಯವನ್ನು ಪ್ರಮುಖ ರಾಜಕೀಯ ಶಕ್ತಿಯಾಗಿ ಆಳ್ವಿಕೆ ನಡೆಸಿದ್ದರು.
ಹಾಡುವಳ್ಳಿಯ ಸಂಗೀರಾಜನ ಮಗ ಇಂದಗರಸನು ಇಮ್ಮಡಿ ಸಾಳುವರಸನ ಮಾಂಡಳಿಕನಾಗಿದ್ದ ಇವನು ಬಿದಿರುನಾಡು ಮೊದಲಾದ ರಾಜ್ಯವನ್ನು ಆಳುತ್ತಿದ್ದನು. ಕ್ರಿ.ಶ.1491ರಲ್ಲಿ ಈ ಪುರಾತನ ಭಗವಾನ್ ಶ್ರೀ 1008 ವರ್ಧಮಾನ ಸ್ವಾಮಿ ದಿಗಂಬರ ಜಿನಮಂದಿರವು ಪ್ರಮುಖವಾಗಿ ನಿರ್ಮಿಸಲ್ಪಟ್ಟಿದೆ.


ಪುರಾತನ ಪ್ರಸಿದ್ದವಾದ ಈ ಮಂದಿರವು ತಾಲ್ಲೂಕಿಗೆ ಮಾತ್ರವಲ್ಲ ಶಿವಮೊಗ್ಗ ಹಾಗೂ ಉತ್ತರಕನ್ನಡ ಜಿಲ್ಲೆಯ ಕೆಲಸವು ಭಾಗಗಳಿಗೆ ಸೀಮೆ ಬಸದಿಯಾಗಿತ್ತು ಎನ್ನುವುದನ್ನು ಇತಿಹಾಸದಿಂದ ತಿಳಿಯಬಹುದಾಗಿದೆ. ಶರಾವತಿ ಹಿನ್ನೀರ ಪ್ರದೇಶದಲ್ಲಿಯೂ ಸಹ ಅನೇಕ ಗ್ರಾಮಗಳಲ್ಲಿದ್ದ ಜಿನಮಂದಿರಗಳು ಸಹ ಮುಳುಗಡೆಯಾಗಿವೆ. ಅಳಿದುಳಿದ ಜಿನಂಮಂದಿರಗಳಿಗೆ ಕಾಯಕಲ್ಪ ನೀಡುವಲ್ಲಿ ಸಾಕಷ್ಟು ಪ್ರಯತ್ನ ನಡೆದಿದೆ.


ಬಿದರೂರಿನ ಜಿನಮಂದಿರವನ್ನು 1964ರಲ್ಲಿ ಜೀರ್ಣೋದ್ದಾರ ಮಾಡಿ ಜಿನಬಿಂಬಗಳ ಪುನರ್‌ಪ್ರತಿಷ್ಠಾಪನೆ ಮಾಡಲಾಗಿದೆ ನಂತರ ನಿರಂತರವಾಗಿ ಪೂಜೆ ಆರಾಧನೆಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಬಿದರೂರು ಜಿನಮಂದಿರವು ಸ್ವಾದಿ ದಿಗಂಬರ ಜೈನ ಸಂಸ್ಥಾನ ಮಠದ ವ್ಯಾಪ್ತಿಗೆ ಬರುತ್ತಿದೆ ಎನ್ನುವುದು ವಿಶೇಷವಾದ ಸಂಗತಿಯಾಗಿದೆ.


ಬಿದರೂರಿಗೆ ವೇಣುಪುರ ಎನ್ನುವ ಪ್ರಾಚೀನ ಹೆಸರಿದ್ದು ಇದಕ್ಕೆ ತನ್ನದೆಯಾದ ಇತಿಹಾಸವನ್ನು ಹೊಂದಿದೆ. ಈ ಭಾಗದಲ್ಲಿ ಜೈನಧರ್ಮದ ಪ್ರಭಾವ ಹೆಚ್ಚಾಗಿದ್ದು ಒಂದು ಕಾಲದಲ್ಲಿ ಸಾಗರ ತಾಲ್ಲೂಕು ಜೈನ ಪರಂಪರೆಯ ಶ್ರೀಮಂತಿಕೆಯನ್ನು ಹೊಂದಿತ್ತು ಎನ್ನುವುದನ್ನು ಇತಿಹಾಸದ ಪುಟಗಳಿಂದ ತಿಳಿಯಬಹುದಾಗಿದೆ. ಈಗಲೂ ತಾಲ್ಲೂಕಿನ ಅನೇಕ ಭವ್ಯಜೀವಿಗಳು ರಾಜ್ಯದ ಅನೇಕ ಜೈನಮಠಗಳ ಸ್ವಾಮಿಗಳಾಗಿದ್ದಾರೆ ಹಾಗೂ ದಿಗಂಬರ ಮುನಿಪರಂಪರೆಯಲ್ಲಿ ಸಾಗಿದ್ದಾರೆ ಎನ್ನುವುದನ್ನು ನಾವು ಕಾನುತ್ತಿದ್ದೇವೆ.


ಇಂತಹ ಪುರಾತನ ಇತಿಹಾಸ ಇರುವ ಬಿದರೂರಿನ ಭಗವಾನ್ ಶ್ರೀ1008 ವರ್ಧಮಾನ ಸ್ವಾಮಿ ಜಿನಂದಿರದ ಪಂಚಕಲ್ಯಾಣ ಮಹೋತ್ಸವವನ್ನು ಇದೇ ಏಪ್ರಿಲ್ 23 ರಿಂದ 29ರವರೆಗೆ ಸಂಭ್ರಮದಿಂದ ನೆರವೇರಲಿದೆ. ಆಚಾರ್ಯಶ್ರೀ108 ಪುಣ್ಯಸಾಗರ ಮಹಾರಾಜರ ದಿವ್ಯ ಸಾನ್ನಿಧ್ಯ ಹಾಗೂ ಸ್ವಾದಿ ಜೈನ ಮಠದ ಅಕಲಂಕ ಕೇಸರಿ ಭಟ್ಟಾಕಲಂಕ ಸ್ವಾಮಿಗಳ ಮಾರ್ಗದರ್ಶನದಲ್ಲಿ ಮತ್ತು ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರಾದಿ ಹದಿಮೂರು ಜೈನಮಠದ ಶ್ರೀಗಳ ಘನ ಉಪಸ್ಥಿತಿಯಲ್ಲಿ ಏಳು ದಿನಗಳ ಕಾಲ ನೆರವೇರಲಿದೆ.


ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಧಾರ್ಮಿಕ ಪೂಜಾ ವಿಧಿ ವಿಧಾನಗಳು ನಡೆಯಲಿವೆ ಮಧ್ಯಾಹ್ನ 3ಗಂಟೆಗೆ ಆಚಾರ್ಯ ಮುನಿಮಹಾರಾಜರಿಂದ ಆಶೀರ್ವಚನ ಸಂಜೆ 6 ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 8 ಗಂಟೆಯಿಂದ ವಿವಿಧ ಕಲಾವಿದರಿಂದ ವೈವಿಧ್ಯಮಯವಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.


ಪ್ರತಿದಿನ ನಡೆಯುವ ಕಾರ್ಯಕ್ರಮಕ್ಕೆ ಅನೇಕ ಗಣ್ಯರನ್ನು, ಜನಪ್ರತಿನಿಧಿಗಳನ್ನು, ಧಾರ್ಮಿಕ ಮುಖಂಡರನ್ನು, ಆಹ್ವಾನಿಸಲಾಗಿದೆ.
ಇದೊಂದು ಐತಿಹಾಸಿಕ ಕಾರ್ಯಕ್ರಮ ಇದಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಊಟ, ಉಪಹಾರ ಹಾಗೂ ದೂರದ ಊರುಗಳಿಂದ ಬಂದವರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ.

ವಿಶೇಷ ಬಸದಿ ನಿರ್ಮಾಣ
ಸುಮಾರು 2 ಕೋಟಿ ವೆಚ್ಚದಲ್ಲಿ ಅತ್ಯಾಕರ್ಷಕ ಭಗವಾನ್ ಶ್ರೀ ವರ್ಧಮಾನ ಜಿನ ಮಂದಿರವನ್ನು ಶಿಲಾಮಯವಾಗಿ ನಿರ್ಮಾಣ ಮಾಡಿದ್ದು ಅದರಲ್ಲೂ ಬಸದಿ ಮುಂಭಾಗದಲ್ಲಿರುವ ಮಾನಸ್ತಂಭ ವಿಶೇಷವಾಗಿದೆ. ಅಪರೂಪದ ಜೈನ ಮಂದಿರವನ್ನು ನಿರ್ಮಾಣ ಮಾಡಲಾಗಿದ್ದು ದಿನಮಂದಿರದ ಹಂಚ ಕಲ್ಯಾಣ ಮಹೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

ಈ ಕಾರ್ಯಕ್ರಮಕ್ಕೆ ಕಳೆದ ಅನೇಕ ದಿನಗಳಿಂದ ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಶ್ರಮಿಸುತ್ತಿದ್ದು ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಲಾಗಿದೆ ಇಂತಹ ಅಪರೂಪದ ಪಂಚಕಲ್ಯಾಣ ಮಹೋತ್ಸವಕ್ಕೆ ಜೈನ ಧರ್ಮಿಯರು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬಿದರೂರು ಜಿನಮಂದಿರದ ಸಮಿತಿಯವರ ಆಹ್ವಾನವಾಗಿದೆ.

ವಿ.ಟಿ.ಸ್ವಾಮಿ,ಕವಿತೋಟ
ಸಾಗರ-577401