Home Shivamogga Sagara ಆನಂದಪುರದಲ್ಲಿ ಗಣಿ ಭೂವಿಜ್ಞಾನ ಇಲಾಖೆ ಮಿಂಚಿನ ಕಾರ್ಯಾಚರಣೆ: ಅಕ್ರಮ ಜಂಬಿಟ್ಟಿಗೆ ದಂಧೆ ಬಯಲಿಗೆ..!!

ಆನಂದಪುರದಲ್ಲಿ ಗಣಿ ಭೂವಿಜ್ಞಾನ ಇಲಾಖೆ ಮಿಂಚಿನ ಕಾರ್ಯಾಚರಣೆ: ಅಕ್ರಮ ಜಂಬಿಟ್ಟಿಗೆ ದಂಧೆ ಬಯಲಿಗೆ..!!

55
0

✒️ಅಮಿತ್ ಆರ್ ಆನಂದಪುರ

ಸಾಗರ : ತಾಲೂಕಿನ ಆನಂದಪುರದ ಗೌತಮಪುರ ಗ್ರಾಮದ ಖಾಸಗಿ ಜಮೀನಿನಲ್ಲಿ ನಿಯಮ ಬಾಹಿರವಾಗಿ ನಡೆಯುತ್ತಿದ್ದ ಅಕ್ರಮ ಜಂಬಿಟ್ಟಿಗೆ ಗಣಿಗಾರಿಕೆ ಅಡ್ಡೆಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ದಾಳಿಯ ವೇಳೆ ಲಕ್ಷಾಂತರ ರೂಪಾಯಿ ಮೌಲ್ಯದ ಜಂಬಿಟ್ಟಿಗೆ ಕಲ್ಲುಗಳನ್ನು ಹಾಗೂ ಕಲ್ಲು ಕತ್ತರಿಸುವ ಯಂತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ.

ಘಟನೆಯ ವಿವರ:

ಗೌತಮಪುರ ಗ್ರಾಮದ ಸರ್ವೆ ನಂಬರ್ 302, 303 ಮತ್ತು 304(ಪಿ) ರ ಖಾಸಗಿ ಜಮೀನುಗಳಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಗಣಿಗಾರಿಕೆ ನಡೆಯುತ್ತಿದೆ ಎಂಬ ದೂರು ಸಾರ್ವಜನಿಕರಿಂದ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಉಪವಿಭಾಗಾಧಿಕಾರಿಗಳ ಸೂಚನೆಯಂತೆ, ಶಿವಮೊಗ್ಗ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂವಿಜ್ಞಾನಿ ಪ್ರವೀಣ್ ಕುಮಾರ್ ಬಿ.ಕೆ. ಅವರು ಹಾಗೂ ಕಂದಾಯ ನಿರೀಕ್ಷಕರು ಜಂಟಿಯಾಗಿ ಕಾರ್ಯಾಚರಣೆ ನಡೆಸಿದರು.

ಬೃಹತ್ ಪ್ರಮಾಣದ ಕಲ್ಲು ದಂದೆ:

ಸ್ಥಳ ಪರಿಶೀಲನೆಯ ವೇಳೆ ಎರಡು ಕಡೆಗಳಲ್ಲಿ ಗಣಿಗಾರಿಕೆ ನಡೆಸಿರುವುದು ಪತ್ತೆಯಾಗಿದೆ.
ಮೊದಲನೇ ಹೊಂಡದಲ್ಲಿ ಅಂದಾಜು 5,580 ಮೆಟ್ರಿಕ್ ಟನ್ ಜಂಬಿಟ್ಟಿಗೆ ತೆಗೆಯಲಾಗಿದ್ದು, ಇದರ ಮೌಲ್ಯ ಸುಮಾರು 3.90 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಎರಡನೇ ಹೊಂಡದಲ್ಲಿ 4,636 ಮೆಟ್ರಿಕ್ ಟನ್ ಕಲ್ಲು ತೆಗೆಯಲಾಗಿದ್ದು, ಇದರ ಮೌಲ್ಯ 3.24 ಲಕ್ಷ ರೂ. ಎನ್ನಲಾಗಿದೆ.

ಒಟ್ಟಾರೆಯಾಗಿ ಸರ್ಕಾರದ ಯಾವುದೇ ಅನುಮತಿ ಇಲ್ಲದೆ ಕೋಟ್ಯಂತರ ರೂಪಾಯಿ ಮೌಲ್ಯದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿ ಸರ್ಕಾರಕ್ಕೆ ನಷ್ಟ ಉಂಟುಮಾಡಿರುವುದು ಕಂಡುಬಂದಿದೆ.

ಪರಾರಿಯಾದ ಆರೋಪಿಗಳು:

ಅಧಿಕಾರಿಗಳು ದಾಳಿ ನಡೆಸುತ್ತಿದ್ದಂತೆಯೇ ಸ್ಥಳದಲ್ಲಿದ್ದ ಕೆಲಸಗಾರರು ಪರಾರಿಯಾಗಿದ್ದಾರೆ. ಘಟನಾ ಸ್ಥಳದಲ್ಲಿದ್ದ ಒಂದು ಜಂಬಿಟ್ಟಿಗೆ ಕತ್ತರಿಸುವ ಯಂತ್ರ ಹಾಗೂ ಎರಡು ಟಿಲ್ಲರ್‌ಗಳನ್ನು ಅಧಿಕಾರಿಗಳು ಜಪ್ತಿ ಮಾಡಿ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ. ಜಮೀನಿನ ಮಾಲೀಕ ವೆಂಕಟಾಚಲ ಅಯ್ಯಂಗಾರ್ ಎಂಬುದಾಗಿ ತಿಳಿದು ಬಂದಿದೆ ಈ ಕುರಿತು ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.