Home Shivamogga Sagara ನಿರಂತರ ಶ್ರಮದಿಂದ ಸಾಧನೆ ಸಾಧ್ಯ: ಬಿಇಒ ಸದಾನಂದ ಸ್ವಾಮಿ ಸಿ..!!

ನಿರಂತರ ಶ್ರಮದಿಂದ ಸಾಧನೆ ಸಾಧ್ಯ: ಬಿಇಒ ಸದಾನಂದ ಸ್ವಾಮಿ ಸಿ..!!

50
0

✒️..ಅಮಿತ್ ಆರ್ ಆನಂದಪುರ


ಆನಂದಪುರ, ಏ.26: ಸತತ ಪರಿಶ್ರಮ ಮತ್ತು ಸರಿಯಾದ ಮಾರ್ಗದರ್ಶನದಿಂದ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬಹುದು ಎಂದು ಬಿಇಒ ಸದಾನಂದ ಸ್ವಾಮಿ ಸಿ. ಹೇಳಿದರು.

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಸಾಗರ ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ಆಚಾಪುರ ಕ್ರಿಯೇಟಿವ್ ಶಾಲೆಯ ವಿದ್ಯಾರ್ಥಿನಿ, ಕೆರೆಹಿತ್ತಲು ಗ್ರಾಮದ ವಾನೀಶ್–ಪಟೇಲ್ ದಂಪತಿಯ ಪುತ್ರಿ ಪೂರ್ವ ವಿ. ಪಟೇಲ್ ಅವರನ್ನು ಅವರ ನಿವಾಸದಲ್ಲಿ ಇಲಾಖೆ ವತಿಯಿಂದ ಅಭಿನಂದಿಸಿ ಅವರು ಮಾತನಾಡಿದರು.

ಮಕ್ಕಳ ಶೈಕ್ಷಣಿಕ ಭವಿಷ್ಯ ರೂಪಿಸುವಲ್ಲಿ ಪೋಷಕರ ಮತ್ತು ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಪ್ರಾರಂಭದಲ್ಲಿಯೇ ಉತ್ತಮ ಮಾರ್ಗದರ್ಶನ ನೀಡಿದರೆ ವಿದ್ಯಾರ್ಥಿಗಳು ಉನ್ನತ ಮಟ್ಟದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ. ಮನೆಗಳಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡುವ ಜವಾಬ್ದಾರಿ ಪೋಷಕರ ಮೇಲಿದೆ ಎಂದರು.

ಪ್ರತಿಭೆ ಯಾರೊಬ್ಬರ ಸ್ವತ್ತು ಅಲ್ಲ; ಪರಿಶ್ರಮವೇ ಯಶಸ್ಸಿನ ಮೂಲವಾಗಿದೆ. ಸಾಗರ ತಾಲೂಕು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿದ್ದು, ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಹಾಗೂ ಜನಪ್ರತಿನಿಧಿಗಳ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಹೇಳಿದರು.

ತಾಲೂಕಿನ 58 ಶಾಲೆಗಳಲ್ಲಿ 45 ಶಾಲೆಗಳು ಶೇಕಡಾ 100 ಫಲಿತಾಂಶ ದಾಖಲಿಸಿರುವುದು ವಿಶೇಷವಾಗಿದ್ದು, ಇದು ಶಿಕ್ಷಣದ ಗುಣಮಟ್ಟವನ್ನು ಪ್ರತಿಬಿಂಬಿಸುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಟಿಪಿಇಓ ರಮೇಶ್, ಶಿಕ್ಷಣ ಸಂಯೋಜಕರಾದ ದಿನೇಶ್ ಕುಮಾರ್, ಕುಮಾರಸ್ವಾಮಿ ಹಾಗೂ ಪೋಷಕರು ಉಪಸ್ಥಿತರಿದ್ದರು.