ಮನೆ ಶಿವಮೊಗ್ಗ ಜನರ ಸಮಸ್ಯೆ ತಾಳ್ಮೆಯಿಂದ ಆಲಿಸಿ, ಸ್ಪಂದಿಸಿ‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮ;

ಜನರ ಸಮಸ್ಯೆ ತಾಳ್ಮೆಯಿಂದ ಆಲಿಸಿ, ಸ್ಪಂದಿಸಿ‘ಮನೆ-ಮನೆಗೆ ಪೊಲೀಸ್’ ಕಾರ್ಯಕ್ರಮ;

231
0

ಶಿವಮೊಗ್ಗ: ‘ಮನೆ ಮನೆಗೆ ಪೊಲೀಸ್’ ಸೇವೆ ಒಂದು ಅತ್ಯುತ್ತಮ ಕಾರ್ಯಕ್ರಮ. ಪೊಲೀಸರು ಜನರ ಸಮಸ್ಯೆಗಳನ್ನು ತಾಳ್ಮೆಯಿಂದ ಆಲಿಸಿ ಸ್ಪಂದಿಸಬೇಕು. ಅವರೊಂದಿಗೆ ಸಹಕರಿಸಬೇಕು’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಂಜುನಾಥ ನಾಯಕ್ ತಿಳಿಸಿದರು.

ಸಮುದಾಯದೊಂದಿಗೆ ಸ್ನೇಹಪರ ಸಂಬಂಧ ಬೆಸೆದು ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲು ಪೊಲೀಸ್ ಇಲಾಖೆಯಿಂದ ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಲ್ಲಿ ಗುರುವಾರ ಏರ್ಪಡಿಸಿದ್ದ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.‘ಪೊಲೀಸರು ಮನೆಗೆ ಬರುವುದು, ಜನರು ಪೊಲೀಸ್ ಠಾಣೆಗೆ ಹೋಗುವುದನ್ನು ಯಾರೂ ಅಪೇಕ್ಷಿಸುವುದಿಲ್ಲ. ಇಂತಹ ಸನ್ನಿವೇಶದಲ್ಲಿ ಪೊಲೀಸ್ ವ್ಯವಸ್ಥೆಯನ್ನು ಜನಸ್ನೇಹಿ ಮತ್ತು ಆಡಳಿತ ಸ್ನೇಹಿಯಾಗಿಸಲು ಸರ್ಕಾರ ಮುಂದಾಗಿದೆ’ ಎಂದರು.‘ಪೊಲೀಸ್ ವ್ಯವಸ್ಥೆ ಬಗ್ಗೆ ಜನರಲ್ಲಿರುವ ಹೆದರಿಕೆ ತೊಡೆದು ಹಾಕಬೇಕು. ಯೋಜನೆಯಡಿ ಸ್ಥಳೀಯ ಪೊಲೀಸ್ ಸಿಬ್ಬಂದಿ ಮನೆ ಮನೆಗೆ ಬಂದು ಜನರೊಂದಿಗೆ ಸಂವಾದ ನಡೆಸುವುದು ಸ್ವಾಗತಾರ್ಹ. ಮನೆಗಳಿಗೆ ಭೇಟಿ ನೀಡುವ ವೇಳೆ ಸಮವಸ್ತ್ರ ಧರಿಸದಿದ್ದರೆ ಉತ್ತಮ. ಮಕ್ಕಳೊಂದಿಗೆ ಸ್ನೇಹದಿಂದ ಮಾತನಾಡಿ ವಿಶ್ವಾಸಕ್ಕೆ ತೆಗೆದುಕೊಳ್ಳಿ. ಜನರ ಮಾತನ್ನು ತಾಳ್ಮೆಯಿಂದ ಆಲಿಸಿ, ಸ್ಪಂದಿಸಬೇಕು’ ಎಂದರು.‘ಪೊಲೀಸರು ಎಂದರೆ ಜನರಲ್ಲಿ ಮೊದಲಿನಿಂದಲೂ ಒಂದು ರೀತಿಯ ಭಯ ಮತ್ತು ಅಸಡ್ಡೆ ಇದೆ. ಇದಕ್ಕೆ ಕಾರಣ ಸ್ವಾತಂತ್ರ‍್ಯ ಹೋರಾಟದ ಸಮಯದಲ್ಲಿ ಬ್ರಿಟಿಷರು ಜನರ ಮೇಲೆ ನಿಯಂತ್ರಣ ಸಾಧಿಸಲು ಅನುಸರಿಸುತ್ತಿದ್ದ ಕ್ರಮ. ಆ ಬ್ರಿಟಿಷ್ ಆಡಳಿತದ ಭಯ ಈಗಲೂ ಇದೆ. ಇದನ್ನು ಹೋಗಲಾಡಿಸಲು ಸರ್ಕಾರ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ’ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದರು.‘ಸಿನಿಮಾ ಮತ್ತು ಧಾರಾವಾಹಿ ಗಳಲ್ಲಿ ಪೊಲೀಸ್ ವ್ಯವಸ್ಥೆ ನೋಡಿದವರಲ್ಲಿ ಇಲಾಖೆ ಬಗ್ಗೆ ಕೆಟ್ಟ ಅಭಿಪ್ರಾಯವೂ ಸಾಕಷ್ಟಿದೆ’ ಎಂದು ಹೇಳಿದರು.‘ಈ ಮುಂಚೆಯೂ ಬೀಟ್ ಮತ್ತು ಸಬ್ ಬೀಟ್ ವ್ಯವಸ್ಥೆ ಇತ್ತು. ಜನರು ಮತ್ತು ಪೊಲೀಸರು ಸ್ಥಳೀಯವಾಗಿ ನಡೆಯುವ ಹಲವಾರು ಸಮಸ್ಯೆಗಳ ಬಗ್ಗೆ ಮಾತನಾಡಿದರೆ ಅರಿವು ಮೂಡುತ್ತದೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆಯಿಂದ ಜನರಲ್ಲಿ ಸುರಕ್ಷತಾ ಭಾವ ಸೃಷ್ಟಿಯಾಗು ತ್ತದೆ’ ಎಂದರು.‘ಜನರ ಸಮಸ್ಯೆಗಳನ್ನು ಅರಿತು ಸ್ಪಂದಿಸಲು ಇಲಾಖೆ ನಗರ ಪ್ರದೇಶದಲ್ಲಿ ಮೊಹಲ್ಲಾ ಸಭೆ, ಗ್ರಾಮಗಳಲ್ಲಿ ಬೀಟ್ ಮಾಡುತ್ತಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ‘ಮನೆ ಮನೆಗೆ ಪೊಲೀಸ್’ ಕಾರ್ಯಕ್ರಮವನ್ನು ಆರಂಭಿಸಿದೆ’ ಎಂದು ಎಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ ತಿಳಿಸಿದರು. ‘ಈ ಯೋಜನೆಯನ್ವಯ 50-60 ಮನೆಗಳ ಸಮೂಹ ರಚಿಸಿ, ಪ್ರತಿ ಬೀಟ್ ಪೊಲೀಸ್‌ಗೆ ಆಯಾ ಜವಾಬ್ದಾರಿ ನೀಡಿ, ಸಾರ್ವಜನಿಕರೊಂದಿಗೆ ಸಂವಾದ ಮಾಡಲಾಗುತ್ತದೆ. ಓಣಿ ಓಣಿಗೆ ಪೊಲೀಸರು ಬಂದು ಮಾತನಾಡುತ್ತಾರೆ. ಸಮಸ್ಯೆಗಳಿದ್ದರೆ ಠಾಣಾ ವ್ಯಾಪ್ತಿ, ಉಪವಿಭಾಗ ಹೀಗೆ ವಿವಿಧ ಹಂತಗಳಲ್ಲಿ ಇತ್ಯರ್ಥಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.ಹಿರಿಯ ಸಿವಿಲ್ ನ್ಯಾಯಾಧೀಶ ಸಂತೋಷ್ ಎಂ.ಎಸ್., ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕಾರ್ಯಪ್ಪ, ರಾಮಣ್ಣ ಶ್ರೇಷ್ಠಿ ಗಣಪತಿ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಹನುಮಂತಪ್ಪ ಪಾಲ್ಗೊಂಡಿದ್ದರು.