ಸಾಗರ: ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಉತ್ತಮ ಶಿಕ್ಷಣಕ್ಕಾಗಿ ಪ್ರೋತ್ಸಾಹ ನೀಡುವುದು ಅತ್ಯವಶ್ಯಕ ಎಂದು ರಾಷ್ಟ್ರೀಯ ಮೀನುಗಾರರ ಸಂಘ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ ಡಿ ರವಿಕುಮಾರ್ ಹೇಳಿದರು.
ರಾಷ್ಟ್ರೀಯ ಮೀನುಗಾರರ ಸಂಘ ಕರ್ನಾಟಕ ವತಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ಆನಂದಪುರ ಸಮೀಪದ ಹೊಸೂರಿನ ಶಶಿಕುಮಾರ್ ಹಾಗೂ ರೇಖಾ ದಂಪತಿಯ ಪುತ್ರರಾದ ವಿದ್ಯಾರ್ಥಿ ಧನುಷ್ ಅವರನ್ನು ಅಭಿನಂದಿಸಿ ಮಾತನಾಡಿದರು.

ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸುವುದರ ಜೊತೆಗೆ ಅವರ ಭವಿಷ್ಯಕ್ಕೆ ಅಗತ್ಯವಾದ ಮಾರ್ಗದರ್ಶನ ನೀಡುವ ಕಾರ್ಯವನ್ನು ರಾ.ಮಿ.ಸಂ ಪ್ರಾಮಾಣಿಕವಾಗಿ ಮಾಡುತ್ತಿದೆ. ಪ್ರತಿ ವರ್ಷ ಪರೀಕ್ಷೆಗೆ ಮುನ್ನ ಹಾಗೂ ಫಲಿತಾಂಶದ ನಂತರ ರಾಜ್ಯದ ವಿಶೇಷ ಶಿಕ್ಷಣ ತಜ್ಞರೊಂದಿಗೆ ವಿದ್ಯಾರ್ಥಿಗಳು ಮತ್ತು ಪೋಷಕರ ನಡುವೆ ಮುಕ್ತ ಚರ್ಚೆ ಹಾಗೂ ಸಂವಾದ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದರ ಮೂಲಕ ವಿದ್ಯಾರ್ಥಿಗಳಲ್ಲಿರುವ ಪರೀಕ್ಷಾ ಭಯವನ್ನು ನಿವಾರಿಸುವುದರ ಜೊತೆಗೆ, ಅವರ ಸಾಮರ್ಥ್ಯಕ್ಕೆ ಅನುಗುಣವಾಗಿ ಮುಂದಿನ ವಿದ್ಯಾಭ್ಯಾಸ ಆಯ್ಕೆ ಮಾಡಿಕೊಳ್ಳಲು ಮಾಹಿತಿ ನೀಡಲಾಗುತ್ತಿದೆ ಎಂದು ಹೇಳಿದರು.
ಯಡೆಹಳ್ಳಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ಶಿವಾನಂದ್ ಗೇರಬೀಸ್ ಮಾತನಾಡಿ, ಸಮಾಜದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಶ್ಲಾಘನೀಯವಾಗಿದೆ. ಸಮಾಜದ ಸಹಕಾರದಿಂದ ಉನ್ನತ ಹುದ್ದೆಗಳನ್ನು ಪಡೆದವರು ಸಮಾಜದ ಹಿತಾಸಕ್ತಿಗಾಗಿ ಕೆಲಸ ಮಾಡಬೇಕು. ಅದುವೇ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ರಾ.ಮಿ.ಸಂ ರಾಜ್ಯ ಪ್ರಮುಖರಾದ ವೆಂಕಟೇಶ್ ಚಂದಹಳ್ಳಿ, ಗಣಪತಿ ಯಡೆಹಳ್ಳಿ, ಛೇತನ್ ರಾಘವೇಂದ್ರ, ಹುಚ್ಚರಾಯಪ್ಪ, ಶಾಂತಮ್ಮ, ರಾಘವೇಂದ್ರ, ಚಂದ್ರಶೇಖರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
















