✒️..ಅಮಿತ್ ಆರ್ ಆನಂದಪುರ
ಸಾಗರ: ತಾಲೂಕಿನ ಆನಂದಪುರ ಹೋಬಳಿಯ ತ್ಯಾಗರ್ತಿ ಗ್ರಾಮದಲ್ಲಿ ಅಡಿಕೆ ತೋಟಕ್ಕೆ ನೀರು ಹಾಯಿಸಲು ಹೋಗಿದ್ದ ಸಂದರ್ಭದಲ್ಲಿ ವಿದ್ಯುತ್ ಸ್ಪರ್ಶಿಸಿ ರೈತರೊಬ್ಬರು ಸಾವನ್ನಪ್ಪಿದ ಘಟನೆ ಇಂದು ನಡೆದಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಮೃತರ ಮನೆಗೆ ಭೇಟಿ ನೀಡಿ ಮೃತ ಪಟ್ಟ ವ್ಯಕ್ತಿಯನ್ನು ನೋಡಿ ಸಂತಾಪ ಸೂಚಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

ಘಟನೆಯ ಹಿನ್ನೆಲೆ:
ತ್ಯಾಗರ್ತಿ ಗ್ರಾಮದ ನಿವಾಸಿ ಸುರೇಶ್ ಪಿ. ತಂದೆ ಪರಶಪ್ಪ (49) ಇಂದು ಬೆಳಿಗ್ಗೆ ತಮ್ಮ ಅಡಿಕೆ ತೋಟದಲ್ಲಿ ಪಂಪ್ ಸೆಟ್ ಆನ್ ಮಾಡಿ ನೀರು ಹಾಯಿಸಲು ಹೋದಾಗ, ಅಕಸ್ಮಿಕವಾಗಿ ವಿದ್ಯುತ್ ತಗುಲಿ ಸ್ಥಳದಲ್ಲೇ ಕುಸಿದು ಬಿದ್ದಿದ್ದರು.
ತಕ್ಷಣವೇ ಅವರನ್ನು ಸಾಗರ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತಾದರೂ, ಅಷ್ಟರಲ್ಲೇ ಅವರು ಮೃತಪಟ್ಟಿದ್ದಾಗಿ ತಿಳಿದು ಬಂದಿದೆ.

ಶಾಸಕರ ಭೇಟಿ ಮತ್ತು ಭರವಸೆ:
ದುರ್ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಮೃತರ ಮನೆಗೆ ಶಾಸಕ ಗೋಪಾಲಕೃಷ್ಣ ಬೇಳೂರು ಅವರು ಬೇಟಿ ನೀಡಿ, ಮೃತ ಸುರೇಶ್ ಅವರ ಕುಟುಂಬಕ್ಕೆ ಧೈರ್ಯ ತುಂಬಿದರು.
ಬಳಿಕ ಮಾತನಾಡಿದ ಶಾಸಕರು, “ಕಷ್ಟಪಟ್ಟು ದುಡಿಯುವ ರೈತ ಈ ರೀತಿ ಅಕಸ್ಮಿಕವಾಗಿ ಸಾವನ್ನಪ್ಪಿರುವುದು ಅತ್ಯಂತ ನೋವಿನ ಸಂಗತಿ. ಕುಟುಂಬಕ್ಕೆ ಎದುರಾಗಿರುವ ಈ ಸಂಕಷ್ಟದ ಸಮಯದಲ್ಲಿ ನಾವು ಜೊತೆಗಿದ್ದೇವೆ. ಸರ್ಕಾರದಿಂದ ಮೃತರ ಕುಟುಂಬಕ್ಕೆ ಸಿಗಬೇಕಾದ ಗರಿಷ್ಠ ಪರಿಹಾರ ಧನವನ್ನು ಆದಷ್ಟು ಬೇಗ ದೊರಕಿಸಿಕೊಡಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ” ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ನಿರ್ದೇಶನ ನೀಡಿದರು.














