✒️..ಅಮಿತ್ ಆರ್ ಆನಂದಪುರ
ಆನಂದಪುರ: ಪಟ್ಟಣದ ಮುಖ್ಯ ರಸ್ತೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸುವುದು ಹಾಗೂ ಇಳಿಸುವುದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟು ಕ್ರಮ ಕೈಗೊಳ್ಳಲಾಗಿದೆ ಎಂದು ಆನಂದಪುರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರವೀಣ್ ತಿಳಿಸಿದರು.
ಅವರು ಇಂದು ಆನಂದಪುರ ಬಸ್ ನಿಲ್ದಾಣದಲ್ಲಿ ಸಂಚರಿಸುತ್ತಿದ್ದ ಕೆ ಎ ಎಸ್ ಆರ್ ಟಿ ಸಿ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಪೊಲೀಸ್ ತಿಳುವಳಿಕೆ ಪತ್ರ ನೀಡುವ ಸಮಯದಲ್ಲಿ ಮಾತನಾಡಿದರು.

ಮುಖ್ಯ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಬಸ್‌ಗಳನ್ನು ನಿಲ್ಲಿಸುವುದೇ ಅಪಘಾತಗಳಿಗೆ ಪ್ರಮುಖ ಕಾರಣವಾಗುತ್ತಿದೆ ಎಂಬುದು ಗಮನಕ್ಕೆ ಬಂದಿದ್ದು, ಈ ಕುರಿತು ಸಾರ್ವಜನಿಕರಿಂದ ಆನಂದಪುರ ಪೊಲೀಸ್ ಠಾಣೆಗೆ ಅನೇಕ ದೂರುಗಳು ಬಂದಿದ್ದವು.
ಈ ಬಗ್ಗೆ ಈಗಾಗಲೇ ಶಿವಮೊಗ್ಗ ಹಾಗೂ ಸಾಗರ ಕೆಎಸ್‌ಆರ್‌ಟಿಸಿ ಡಿಪೋ ಅಧಿಕಾರಿಗಳಿಗೆ ಪತ್ರದ ಮೂಲಕ ಹಾಗೂ ಮೌಖಿಕವಾಗಿ ಮಾಹಿತಿ ನೀಡಲಾಗಿದ್ದರೂ, ಕೆಲ ಬಸ್ ಚಾಲಕರು ರಸ್ತೆಯಲ್ಲೇ ಬಸ್ ನಿಲ್ಲಿಸುವುದನ್ನು ಮುಂದುವರೆಸಿರುವುದು ಗಮನಕ್ಕೆ ಬಂದಿದೆ.
ಯಾವುದೇ ಕಾರಣಕ್ಕೂ ಮುಖ್ಯ ರಸ್ತೆಯಲ್ಲಿ ಬಸ್ ನಿಲ್ಲಿಸಬಾರದು,ಪ್ರಯಾಣಿಕರನ್ನು ಹತ್ತಿಸಲು ಅಥವಾ ಇಳಿಸಲು ಕಡ್ಡಾಯವಾಗಿ ಆನಂದಪುರ ಬಸ್ ನಿಲ್ದಾಣದೊಳಗೆ ಮಾತ್ರ ಬಸ್ ಕೊಂಡೊಯ್ಯಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.ಈ ಆದೇಶ ಉಲ್ಲಂಘಿಸಿ ಮುಖ್ಯ ರಸ್ತೆಯಲ್ಲಿ ಬಸ್ ನಿಲ್ಲಿಸಿದರೆ ಅಥವಾ ಇದರಿಂದ ಅಪಘಾತ ಸಂಭವಿಸಿದರೆ ಸಂಬಂಧಪಟ್ಟ ಚಾಲಕರು ಹಾಗೂ ನಿರ್ವಾಹಕರ ವಿರುದ್ಧ ಕಾನೂನುಬದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪಿಎಸ್‌ಐ ಪ್ರವೀಣ್ ತಿಳಿಸಿದ್ದಾರೆ.

ನಿಲ್ದಾಣದೊಳಗೆ ಬರದ ಬಸ್‌ಗೆ ತಡೆ:
ತಿಳುವಳಿಕೆ ಪತ್ರ ವಿತರಿಸುವ ಸಂದರ್ಭದಲ್ಲೇ ಸಾಗರದಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಒಂದು ಬಸ್ ನಿಲ್ದಾಣದೊಳಗೆ ಪ್ರವೇಶಿಸದೆ ಮುಖ್ಯ ರಸ್ತೆಯಲ್ಲೇ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಂಡು ತೆರಳಿತು. ತಕ್ಷಣವೇ ಪಿಎಸ್‌ಐ ಪ್ರವೀಣ್ ಬಸ್ ಅನ್ನು ಅಡ್ಡಗಟ್ಟಿ ಚಾಲಕ ಹಾಗೂ ನಿರ್ವಾಹಕರಿಗೆ ಎಚ್ಚರಿಕೆ ನೀಡಿ, ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಿದರು.














