ಸೊರಬ: ತಾಲ್ಲೂಕಿನ ಬಸ್ತಿಕೊಪ್ಪ ಗ್ರಾಮದ ವ್ಯಾಪ್ತಿಯ ಸರ್ಕಾರಿ ಗೋಮಾಳದಲ್ಲಿ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಸಿ, ಸ್ಫೋಟಕ ವಸ್ತುಗಳನ್ನು ಬಳಕೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದ ಪ್ರಕರಣವನ್ನು ಸೊರಬ ಪೊಲೀಸರು ಪತ್ತೆಹಚ್ಚಿದ್ದಾರೆ.
ಮೇ 15ರಂದು ಮಧ್ಯಾಹ್ನ ಗಸ್ತಿನಲ್ಲಿದ್ದ ಸೊರಬ ಪೊಲೀಸ್ ಠಾಣೆಯ ಪಿಎಸ್‌ಐ ನವೀನ್ ಎಂ.ಎಚ್. ಅವರಿಗೆ, ಬಸ್ತಿಕೊಪ್ಪ ಗ್ರಾಮದ ಸರ್ವೆ ನಂ.24ರ ಸರ್ಕಾರಿ ಗೋಮಾಳದಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು, ಕಲ್ಲು ಬಂಡೆ ಸ್ಫೋಟಕ್ಕೆ ಅಕ್ರಮವಾಗಿ ಸ್ಫೋಟಕ ವಸ್ತುಗಳನ್ನು ಬಳಸಲಾಗುತ್ತಿದೆ ಎಂಬ ಮಾಹಿತಿ ಲಭಿಸಿತು.
ಈ ಹಿನ್ನೆಲೆಯಲ್ಲಿ ಚಂದ್ರಗುತ್ತಿ ದೇವಸ್ಥಾನದ ಬಂದೋಬಸ್ತ್ ಕರ್ತವ್ಯದಲ್ಲಿದ್ದ ಎಎಸ್‌ಐ ತೋಟಪ್ಪ ಹಾಗೂ ಸಿಬ್ಬಂದಿಯೊಂದಿಗೆ ಪೊಲೀಸರು ಸಂಜೆ ಸ್ಥಳಕ್ಕೆ ದಾಳಿ ನಡೆಸಿದರು.
ತಪಾಸಣೆ ವೇಳೆ ರಾಣೆಬೆನ್ನೂರು ತಾಲ್ಲೂಕಿನ ಹಳೇಕೋಟೆ ನಿವಾಸಿ ರಾಜಾಸಾಬ್ ಬಿನ್ ಯಮನೂರು ಸಾಬ್ (42) ಸ್ಥಳದಲ್ಲೇ ಪತ್ತೆಯಾಗಿದ್ದಾರೆ. ವಿಚಾರಣೆ ವೇಳೆ ಆತ ತಾನು ಕೂಲಿ ಕೆಲಸ ಮಾಡುತ್ತಿರುವುದಾಗಿ ತಿಳಿದು ಬಂದಿದೆ.

ಕ್ವಾರೆಯ ಮಾಲೀಕರಾದ ಹುಲುಗಪ್ಪ ಎಂಬುವರು ಕಲ್ಲು ಒಡೆಯುವ ಕೆಲಸಕ್ಕಾಗಿ ಶಿವಮೊಗ್ಗದ ಸುರೇಶ್ ಎಂಬಾತನನ್ನು ಕರೆಸಿಕೊಂಡಿದ್ದು, ಆತ ಕಲ್ಲು ಬಂಡೆಗಳಿಗೆ ರಂಧ್ರ ಕೊರೆದು ಎಲೆಕ್ಟ್ರಿಕಲ್ ಡಿಟೋನೇಟರ್ ಹಾಗೂ ಜೆಲಟಿನ್ ಕಡ್ಡಿಗಳನ್ನು ಅಳವಡಿಸಿ ಹೋಗಿದ್ದಾನೆ ಎಂದು ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ಸ್ಥಳದಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಅಪಾಯಕಾರಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿಟ್ಟಿರುವುದು ಕಂಡುಬಂದಿದೆ. ಬಳಕೆಯಾಗದ ಕೆಲವು ಜೆಲಟಿನ್ ಕಡ್ಡಿಗಳನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸ್ಫೋಟಕಗಳನ್ನು ನಿಷ್ಕ್ರಿಯಗೊಳಿಸುವವರೆಗೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದ್ದು, ಸ್ಥಳದ ಭದ್ರತೆಗೆ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಈ ಕುರಿತು ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














