Home Blog ಅಣು ವಿದ್ಯುತ್ ಸ್ಥಾವರ ವಿರೋಧಿಸಿ ಬೇಸೂರಿನಿಂದ ಸಾಗರದವರೆಗೆ ಯಶಸ್ವಿಯಾದ ಪಾದಯಾತ್ರೆ..!!

ಅಣು ವಿದ್ಯುತ್ ಸ್ಥಾವರ ವಿರೋಧಿಸಿ ಬೇಸೂರಿನಿಂದ ಸಾಗರದವರೆಗೆ ಯಶಸ್ವಿಯಾದ ಪಾದಯಾತ್ರೆ..!!

20
0

✒️..ಅಮಿತ್ ಆರ್ ಆನಂದಪುರ

ಸಾಗರ:ಬೇಸೂರಿನಲ್ಲಿ ಪ್ರಸ್ತಾವಿತ ಅಣು ವಿದ್ಯುತ್ ಸ್ಥಾವರ ಯೋಜನೆ ವಿರೋಧಿಸಿ ಮಲೆನಾಡು ಅಣು ವಿದ್ಯುತ್ ವಿರೋಧಿ ಹೋರಾಟ ವೇದಿಕೆ ವತಿಯಿಂದ ಬುಧವಾರ ಬೇಸೂರಿನಿಂದ ಸಾಗರದವರೆಗೆ ಬೃಹತ್ ಪಾದಯಾತ್ರೆಗೆ ಚಾಲನೆ ನೀಡಲಾಯಿತು.

ಬೇಸೂರು ಬಸವಣ್ಣ ದೇವರ ದೇವಸ್ಥಾನ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೂಲೆಗದ್ದೆ ಮಠದ ಶ್ರೀ ಅಭಿನವ ಚನ್ನಬಸವ ಸ್ವಾಮೀಜಿ ಸ್ವಾಮೀಜಿ ಪಾದಯಾತ್ರೆಗೆ ಚಾಲನೆ ನೀಡಿದರು. ಬಳಿಕ ಹುಲಿದೇವರಬನ ವೃತ್ತದಲ್ಲಿ ಮಾತನಾಡಿದ ಅವರು, ಅಣು ವಿದ್ಯುತ್ ಸ್ಥಾವರ ವಿರೋಧದ ಹೋರಾಟವು ಪಕ್ಷಾತೀತವಾಗಿ ನಡೆಯುವ ಮೂಲಕವೇ ಯಶಸ್ಸು ಕಾಣಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ತಾಳಗುಪ್ಪ ಕೂಡಲಿ ಮಠದ ಸಿದ್ದವೀರ ಸ್ವಾಮೀಜಿ ಮಾತನಾಡಿ, ಪರಿಸರ ಸೂಕ್ಷ್ಮ ಪ್ರದೇಶವಾದ ಮಲೆನಾಡಿನಲ್ಲಿ ಅಣು ವಿದ್ಯುತ್ ಸ್ಥಾವರ ಯೋಜನೆ ಅನುಷ್ಠಾನಗೊಳಿಸುವುದು ಸೂಕ್ತವಲ್ಲ. ಈ ಯೋಜನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಮಾಜಿ ಶಾಸಕ ಸ್ವಾಮಿರಾವ್‌ ಮಾತನಾಡಿ, ಯಾವುದೇ ಕಾರಣಕ್ಕೂ ಅಣು ವಿದ್ಯುತ್ ಸ್ಥಾವರ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದರು.ಜನರ ಸಂಘಟಿತ ಹೋರಾಟದ ಮುಂದೆ ಯಾವುದೇ ಸರ್ಕಾರವೂ ನಿರ್ಧಾರ ಹೇರಲು ಸಾಧ್ಯವಿಲ್ಲ ಎಂದು ಹೇಳಿದರು.

ಆನಂದಪುರದ ಮುರುಘಾ ಮಠದ ಶ್ರೀ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ಪಾದಯಾತ್ರೆಯಲ್ಲಿ ಭಾಗವಹಿಸಿ ಯೋಜನೆ ಕುರಿತು ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು.

ಉದ್ದೇಶಿತ ಯೋಜನೆ ಕೈಬಿಡುವುದಾಗಿ ಲಿಖಿತವಾಗಿ ಸರ್ಕಾರ ಭರವಸೆ ನೀಡುವ ವರೆಗೆ ಹೋರಾಟ ನಿರಂತರವಾಗಿ ನೆಡೆಯಲಿದೆ.ಮೇ 27 ಕ್ಕೆ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಯೋಜನೆ ವಿರೋಧಿಸಿ ಬೃಹತ್ ಪ್ರತಿಭಟನೆ ನಡೆಲಾಗುವುದು ಎಂದು ಬೇಸೂರು ಅಣು ವಿದ್ಯುತ್ ಸ್ಥಾವರ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ಇಂಧೂಧರ ಗೌಡ ಹೇಳಿದರು.

ಏಸೂರು ಕೊಟ್ಟರು ಬೇಸೂರು ಕೊಡೆವು ಹಾಗೂ ಊರಿಗಾಗಿ, ನೀರಿಗಾಗಿ, ಉಸಿರಿಗಾಗಿ ಹಾಗೂ ಬದುಕಿಗಾಗಿ ಎಂಬ ಘೋಷಣೆ ಯೊಂದಿಗೆ ಆರಂಭವಾದ ಪಾದಯಾತ್ರೆಯು ಬೇಸೂರು, ಹುಲಿ ದೇವರಬನ, ಗೆಣಸಿನಕುಣಿ, ಆವಿನಹಳ್ಳಿ, ಕಾಗೇಹಳ್ಳ, ಹೊಸೂರು, ಚಿಪ್ಲಿ ಶಾಲೆ, ಇಕ್ಕೇರಿ ಸರ್ಕಲ್ ಹಾಗೂ ಸುಭಾಹಿತ್ ಬಿಲ್ಲಿಂಗ್ ಮಾರ್ಗ ವಾಗಿ ಸಾಗರ ತಲುಪಿತು.

ಹೋರಾಟಗಾರರು ಅಧಿಕ ಸಂಖ್ಯೆಯಲ್ಲಿ ಸೇರಿ ಎಸಿ ಕಚೇರಿ ಮುಂಭಾಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಲಿಕಟ್ಟಿ ರವರಿಗೆ ಮನವಿ ಸಲ್ಲಿಸಿದರು.

ಮನವಿ ಸಲ್ಲಿಸುವ ವೇಳೆ ಶಾಸಕರ ಗೋಪಾಲಕೃಷ್ಣ ಬೇಳೂರು ,ಸಂಸದರಾದ ಬಿ ವೈ ರಾಘವೇಂದ್ರ ,ಮಾಜಿ ಶಾಸಕ ಹರತಾಳು ಹಾಲಪ್ಪ ,ವಿಧಾನ ಪರಿಷತ್ ಸದಸ್ಯರಾದ ಡಾ. ಧನಂಜಯ್ ಸರ್ಜಿ ,ನಗರ ಸಭಾ ಅಧ್ಯಕ್ಷೆ ಮೈತ್ರಿ ಪಾಟೀಲ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಹಾಗೂ ಪಾದಯಾತ್ರೆಯಲ್ಲಿ ಹೋರಾಟಗಾರರಾದ ತೀ.ನಾ. ಶ್ರೀನಿವಾಸ, ಸೀತಾರಾಮ್ ಕುರುವರಿ, ಜಿ.ಟಿ ಸತ್ಯನಾರಾಯಣ,ದಿನೇಶ್ ಶಿರವಾಳ, ನಾಗೇಂದ್ರ ಸಾಗರ, ಬಂದಗದ್ದೆ ರಾಧಾಕೃಷ್ಣ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಚರಕ ಸಂಸ್ಥೆಯ ಪ್ರತಿನಿಧಿಗಳು, ರೈತರು, ಪರಿಸರಾಸಕ್ತರು ಹಾಗೂ ಗ್ರಾಮಸ್ಥರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು. ಸಾರ್ವಜನಿಕರು ವಿವಿಧ ಸ್ಥಳಗಳಲ್ಲಿ ಪಾದಯಾತ್ರೆಗೆ ಸೇರ್ಪಡೆಗೊಂಡು ಬೆಂಬಲ ವ್ಯಕ್ತಪಡಿಸಿದರು.