Home Shivamogga Sagara ಮಲೆನಾಡಿನಂತೆ ಕಂಗೊಳಿಸುತ್ತಿರುವ ಸಕಿಪ್ರಾಶಾಲೆ, ಬನಶಂಕರಿ ಬಡಾವಣೆ..!!

ಮಲೆನಾಡಿನಂತೆ ಕಂಗೊಳಿಸುತ್ತಿರುವ ಸಕಿಪ್ರಾಶಾಲೆ, ಬನಶಂಕರಿ ಬಡಾವಣೆ..!!

23
0

ಆನಂದಪುರ ಹೋಬಳಿಯ ಗೌತಮಪುರ ಸಮೀಪದ ಒಂದು ಹಳ್ಳಿ.. ಅದು ಗೌತಮಪುರದ ಬನಶಂಕರಿ ಬಡಾವಣೆ ಎನ್ನುವ ನಾಮಕರಣವಾಗಿದ್ದು ಇಲ್ಲೊಂದು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಆರಂಭಿಸಿ ಮಕ್ಕಳಿಗೆ ಶಿಕ್ಷಣ ನೀಡುವ ವ್ಯವಸ್ಥೆ ಇಲಾಖೆ ಹಾಗೂ ಸರ್ಕಾರ ಮಾಡಿದೆ ಇದು ಈ ಗ್ರಾಮದ ಅನೇಕರ ಹೋರಾಟದ ಫಲವು ಇದೆ ಎನ್ನುವುದನ್ನು ಮರೆಯುವಂತಿಲ್ಲ.

ಶಾಲೆ ನೋಡಬೇಕು ಎನ್ನುವ ಕುತೂಹಲ ನನ್ನದಾಗಿತ್ತು.ಇಲ್ಲಿಗೆ ಬೇಟಿ ಕೊಟ್ಟಾಗ ನನಗಂತೂ ತುಂಬಾ ಆಶ್ಚರ್ಯವಾಯಿತು.. ಶಾಲೆಯನ್ನು ಪ್ರವೇಶ ಮಾಡುತ್ತಿದ್ದಂತೆ ಶಾಲಾ ಆವರಣದೊಳಗೆ ನೋಡಿದರೆ ಅದೊಂದು ಮಲೆನಾಡಿನಂತೆ ಕಂಗೊಳಿಸುವ ಶಾಲಾ ಪರಿಸರ.ನನಗೆ ಸರ್ಕಾರಿ ಶಾಲೆ ಹಿಗೂ ಇರಲು ಸಾಧ್ಯವಾ ಎನ್ನುವ ಅನುಮಾನ ಕಾಡತೊಡಗಿತು , ಎಲ್ಲಿಲ್ಲದ ಖುಷಿ,ಎಲ್ಲಾ ಭಾಗದಿಂದ ಪೊಟೋ ಕ್ಲಿಕ್ಕಿಸಿದೆ,ಹೊರ ಭಾಗದಿಂದ ಪೊಟೋ ತೆಗೆಯುವಾಗ ಒಂದಷ್ಟು ಊರಿನವರು ಯಾರು ನೀವು ಏನೂ ಮಾಡುತ್ತಿದ್ದೀರಿ.. ಹೀಗೆ ಒಂದಷ್ಟು ಪ್ರಶ್ನೆಗಳನ್ನು ನಮ್ಮನ್ನು ಕೇಳತೊಡಗಿದರು.

ಅದಕ್ಕೆ ಸಮಂಜಸವಾದ ಉತ್ತರ ನೀಡಿದ ನಂತರ ಮುಖ್ಯ ಶಿಕ್ಷಕರನ್ನು ಕೇಳಿದೆ ಈ ಶಾಲೆಯ ಬಗ್ಗೆ ಊರಿನವರಿಗೆ ಇರುವ ಕಾಳಜಿ ನನಗಂತೂ ಆನಂದವಾಯಿತು. ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಿಗಿರುವ ಕಾಳಜಿ, ಆಸಕ್ತಿ, ಭಾಗವಹಿಸುವಿಕೆ. ತಮ್ಮದೆ ಬಿಡುವಿನ ಸಮಯದಲ್ಲಿ ಶಾಲೆಗಾಗಿ ದುಡಿಯವ ಈ ಊರಿನ ಜನರ ಶೈಕ್ಷಣಿಕ ಆಸಕ್ತಿ ನಿಜವಾಗಿಯೂ ಮೆಚ್ಚುವಂತಹದ್ದು ಹೀಗೆ ಎಲ್ಲಾ ಊರಿನಲ್ಲೂ ಇದ್ದರೆ ಶಾಲೆಗಳ ಚಿತ್ರಣವೆ ಬದಲಾಗುತ್ತವೆ ಅಲ್ಲವೇ..?

ಶಿಕ್ಷಕರ ಪೋಷಕರ, ಸಾರ್ವಜನಿಕರ ಸಂಪೂರ್ಣ ತೊಡಗಿಸಿಕೊಳ್ಳುವಿಕೆ ಇದ್ದರೆ ಸರ್ಕಾರಿ ಶಾಲೆಗಳನ್ನು ಸುಂದರವಾದ ತಾಣಗಳನ್ನಾಗಿಸಬಹುದು ಎನ್ನುವುದಕ್ಕೆ ಗೌತಮಪುರ ಸಮೀಪದ ಬನಶಂಕರಿ ಬಡಾವಣೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯೆ ಮಾದರಿಯಾಗಿದೆ.

ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವವರೆ ಹೆಚ್ಚು. ಆದರೆ ಸರ್ಕಾರಿ ಶಾಲೆಗಳು ಸಹ ಖಾಸಗಿ ಶಾಲೆಗಳನ್ನು ಮೀರಿಸುವಂತೆ ವ್ಯವಸ್ಥೆ ಹಾಗೂ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಮುಂದಿವೆ ಎನ್ನುವುದನ್ನು ನಾವು ಸಾಕಷ್ಟು ಗಮನಿಸುತ್ತಿರುತ್ತೇವೆ.

ಇನ್ನೂ ಶಾಲೆಯೊಳಗೆ ನೋಡಿದರೆ ವಾಪಾಸ್ ಬರಲು ಮನಸ್ಸೆ ಬರುವುದಿಲ್ಲ ಇರುವ ಶಾಲಾ ಜಾಗದಲ್ಲಿ ಸುಂದರವಾದ ವನವನ್ನು ನಿರ್ಮಿಸಲಾಗಿದ್ದು, ಇಲ್ಲಿ ಮಾವು, ಹಲಸು ಹೀಗೆ ವಿವಿಧ ಜಾತಿಯ ಹಣ್ಣಿನ ಗಿಡಗಳು, ನುಗ್ಗೆ ಗಿಡ, ಪಪ್ಪಾಯಿ, ತರಕಾರಿ ಹೀಗೆ ಒಂದಕ್ಕಿಂತ ಒಂದು ವಿಭಿನ್ನ,ನಮಗೂ ಶಾಲಾ ಹಣ್ಣಿನ ರುಚಿಯನ್ನು ತೋರಿಸಿದರು.

ಇಲ್ಲಿ 26 ಮಕ್ಕಳಿದ್ದು ಎರಡು ಜನ ಶಿಕ್ಷಕರು ಕೆಲಸ ಮಾಡುತ್ತಿದ್ದು ಮುಖ್ಯ ಶಿಕ್ಷಕರಾದ ಸೋಮಪ್ಪ ಅವರ ಕಾರ್ಯ ವಿಶೇಷವಾಗಿ ಎದ್ದು ಕಾಣುತ್ತಿತ್ತು ಅವರಲ್ಲಿರುವ ಲವ ಲವಿಕೆ.. ಆಸಕ್ತಿ, ತೊಡಗಿಸಿಕೊಳ್ಳುವಿಕೆ ಸಿದ್ದತೆ, ಬದ್ದತೆ, ಕಾಳಜಿ, ಸಮಯಕ್ಕು ಮೀರಿದ ಕಾರ್ಯ. ಗುಣಾತ್ಮ ಶಿಕ್ಷಣ. ಮಕ್ಕಳ ಕ್ರಿಯಾಶೀಲತೆ ಮನೆ ಮಾದರಿಯ ಬಿಸಿಯೂಟ ನಿರ್ವಹಣೆ ವಿಶೇವಾಗಿತ್ತು.

ಈ ಶಾಲೆಯಲ್ಲಿ ಬರಿ ಶಾಲಾ ವನ ಮಾತ್ರವಲ್ಲ ಶಾಲಾ ಕೊಠಡಿಯೊಳಗಿನ ಆಕರ್ಷಣೆ ಕಲಿಕಾ ಕ್ರಮಗಳು, ಕಾರ್ಯಕ್ರಮಗಳು ,ಆಧುನಿಕತೆಪೋಷಕರ ಪಾಳ್ಗೊಳ್ಳುವಿಕೆ.ಸಾರ್ವಜನಿಕರ ಸಹಕಾರ, ಗ್ರಾಮಸ್ಥರ ಭಾಗವಹಿಸುವಿಕೆ, ಜನಪ್ರತಿನಿಧಿಗಳ ಪ್ರೋತ್ಸಾಹ, ಇಲಾಖೆಯ ಮಾರ್ಗದರ್ಶನ ನಿಜವಾಗಿಯೂ ವಿಶೇಷವಾಗಿ ಕಂಡು ಬಂದಿತು.

ಆರಂಭದಲ್ಲಿ ಅನೇಕ ಸವಾಲುಗಳಿದ್ದವು ಎನ್ನುವುದು ಸಹಜವಾದ ಸಂಗತಿ ಅವುಗಳನ್ನೆಲ್ಲ ಎದುರಿಸಿ ಕಟ್ಟುವ ಕೆಲಸ ಸಾಮಾನ್ಯವಾದ ಸಂಗತಿಯೇನಲ್ಲ. ಇಂತಹ ಸರ್ಕಾರಿ ಶಾಲೆಗಳು ನಮ್ಮ ಸುತ್ತಮುತ್ತ ಸಾಕಷ್ಟಿವೆ. ಇಂತಹ ಶಾಲೆಗಳನ್ನು ಕಟ್ಟುವಲ್ಲಿ ಶೈಕ್ಷಣಿಕ ಸಹ ಭಾಗಿಗಳ ಪಾತ್ರ ಅತಿ ಮುಖ್ಯ ಎನ್ನುದನ್ನು ಇಲ್ಲಿ ದೃಡೀಕರಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಸರ್ಕಾರದ ಶೈಕ್ಷಣಿಕ ಆಶಯದಂತೆ ಮಕ್ಕಳ ಗುಣಾತ್ಮಕ ಶಿಕ್ಷಣಕ್ಕೆ ವಿಶೇಷವಾದ ಗಮನ ಹರಿಸಿ ಸುಂದರವಾದ ಶಾಲೆಯನ್ನಾಗಿಸುವ ಕೆಲಸ ಮಾಡಿದ ಇಲ್ಲಿನ ಶಿಕ್ಷಕರು, ಎಸ್.ಡಿ.ಎಂ.ಸಿಯವರು, ಪೋಷಕರು, ಊರಿನವರು, ಜನಪ್ರತಿನಿಧಿಗಳು ಕಾರ್ಯ ಅಭಿನಂದನಿಯವಾಗಿದೆ.

ಮುಖ್ಯ ಶಿಕ್ಷಕರಾದ ಸೋಮಪ್ಪ ಹೆಚ್. ಸಹ ಶಿಕ್ಷಕಿ ಭಾಗ್ಯಲಕ್ಷ್ಮೀ ಹಾಗೂ ಶಾಲಾಬೀವೃದ್ಧಿ ಸಮಿತಿಯ ಅಧ್ಯಕ್ಷರಾದ ಪ್ರಶಾಂತ್ ಹಾಗೂ ಅವರ ತಂಡ ಗ್ರಾಮಸ್ಥರ ವಿಶೇಷವಾಗಿ ಕಾರ್ಯ ನಿರ್ವಹಣೆಯೆ, ಸಿ.ಆರ್.ಪಿ ಭರಮಗೌಡರ ಮಾರ್ಗದರ್ಶನ ಈ ಶಾಲೆ ಮಾದರಿಯಾಗಿ ಹೊರ ಹೊಮ್ಮಿದೆ.

ಊರಿನ ಶಾಲೆಗಳೆಂದರೆ ಅದೊಂದು ಶೈಕ್ಷಣಿಕ ಪರಂಪರೆಯನ್ನು ಬಿಂಬಿಸುತ್ತದೆ. ಸಾವಿರಾರು ವಿದ್ಯಾರ್ಥಿಗಳ ಜೀವನ ರೂಪಗೊಳ್ಳುವುದೇ ಶಾಲೆಗಳಲ್ಲಿ ಇನ್ನೂ ಊರಿನ ಆಕರ್ಷಕ ಕೇಂದ್ರವೆಂದರೆ ಶಾಲೆ. ಹಾಗಾಗಿ ಶಾಲೆಯನ್ನು ದೇವಾಲಯಕ್ಕಿಂತ ಹೆಚ್ಚಿನದಾಗಿ ಕಾಣಬೇಕಾಗಿರುವುದು ಪ್ರತಿಯೊಬ್ಬ ನಾಗರೀಕನ ಜವಾಬ್ದಾರಿಯಾಗಿದೆ. ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳು ಒಂದಾದರೆ ಸಾಕು ಊರಿನ ಸರ್ಕಾರಿನ ಶಾಲೆಯನ್ನು ಆಕರ್ಷಕವಾಗಿ ರೂಪಿಸಬಹುದು.

ಬನ್ನಿ ನಮ್ಮ ಶಾಲೆ ನಮ್ಮ ಹೆಮ್ಮೆ..ಯಾಗಿಸೋಣ..

ನಮ್ಮ ಸರ್ಕಾರಿ ಶಾಲೆಗಳು ತಾಲ್ಲೂಕಿನಲ್ಲಿ ಉತ್ತಮವಾಗಿದ್ದು ಅನೇಕ ಶಾಲೆಗಳು ಅತ್ಯಂತ ಆಕರ್ಷಕವಾಗಿವೆ. ಗುಣಾತ್ಮಕ ಶಿಕ್ಷಣದಲ್ಲಿಯೂ ಮುಂಚೂಣಿಯಲ್ಲಿವೆ ಎನ್ನುವುದಕ್ಕೆ ಈ ಶಾಲೆ ಉದಾಹರಣೆಯಾಗಿದೆ ,ಶಾಲೆಗಾಗಿ ಶ್ರಮಿಸಿದ ಎಲ್ಲಾರಿಗೂ ಅಭಿನಂದನೆಗಳು.. ಸದಾನಂದಸ್ವಾಮಿ ಸಿ. ಬಿಇಓ ಸಾಗರ

ಲೇಖನ:
ವಿ.ಟಿ.ಸ್ವಾಮಿ
ಶಿಕ್ಷಣ ಸಂಯೋಜಕರು, ಸಾಗರ
ಎಂ.ಎ.ಕನ್ನಡ, ಎಂ.ಎ.ಪ್ರಾಕೃತ
ಪಿ.ಜಿ.ಡಿಪ್ಲಮೋ ಇನ್ ಜರ್ನಲಿಸಂ
ಎಂ.ಎ.ಎಂ.ಸಿ.ಜೆ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ
ಮೊ: 9480916635