Home Shivamogga “ಮಂತ್ರಿಗಿರಿ ಆಸೆಯಲ್ಲಿ ಕ್ಷೇತ್ರ ಮರೆತ ಶಾಸಕರು” : ರಸ್ತೆ ಸಮಸ್ಯೆ ಖಂಡಿಸಿ ರತ್ನಾಕರ ಹೊನಗೋಡು ವಾಗ್ದಾಳಿ..!!

“ಮಂತ್ರಿಗಿರಿ ಆಸೆಯಲ್ಲಿ ಕ್ಷೇತ್ರ ಮರೆತ ಶಾಸಕರು” : ರಸ್ತೆ ಸಮಸ್ಯೆ ಖಂಡಿಸಿ ರತ್ನಾಕರ ಹೊನಗೋಡು ವಾಗ್ದಾಳಿ..!!

0
21

✒️..ಅಮಿತ್ ಆರ್ ಆನಂದಪುರ

ಸಾಗರ,(ಆನಂದಪುರ): ಆನಂದಪುರ ಸಮೀಪದ ಯಡೇಹಳ್ಳಿ ರೈಲ್ವೆ ಕ್ರಾಸಿಂಗ್ ಬಳಿ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಗೆ ಸೂಕ್ತ ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ಸಂಚಾರ ಬಂದ್ ಮಾಡಿರುವುದರಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ ಎಂದು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರತ್ನಾಕರ ಹೊನಗೋಡು ಆಕ್ರೋಶ ವ್ಯಕ್ತಪಡಿಸಿದರು.

“ಶಾಸಕರು ಮಂತ್ರಿಗಿರಿ ಆಸೆಗೆ ಹೋಗಿ ಎರಡುವರೆ ತಿಂಗಳಾದರೂ ಕ್ಷೇತ್ರದ ಕಡೆ ಗಮನ ಹರಿಸುತ್ತಿಲ್ಲ. ಜನರು ರಸ್ತೆ ಸಂಚಾರಕ್ಕೆ ಪರದಾಡುವಂತ ಪರಿಸ್ಥಿತಿ ಎದುರಾಗಿದೆ” ಎಂದು ಅವರು ಆರೋಪಿಸಿದರು.

ಪರ್ಯಾಯ ಮಾರ್ಗವಾಗಿ ಕಲ್ಪಿಸಲಾಗಿರುವ ರೊಟ್ಟಿ ಫ್ಯಾಕ್ಟರಿ ರಸ್ತೆಯಲ್ಲಿ ಸಮರ್ಪಕ ಕಾಮಗಾರಿ ನಡೆಸದೆ, ಕೇವಲ ಒಂದೆರಡು ಲಾರಿ ತುಂಡುಗಲ್ಲುಗಳನ್ನು ಹಾಕಿ ಅವೈಜ್ಞಾನಿಕವಾಗಿ ರಸ್ತೆ ದುರಸ್ತಿ ಮಾಡಲಾಗಿದೆ. ಇದರಿಂದ ವಾಹನ ಸಂಚಾರ ಮತ್ತಷ್ಟು ದುಸ್ತರವಾಗಿದೆ ಎಂದು ಅವರು ದೂರಿದರು.

“ಶಾಸಕರು ₹10 ಲಕ್ಷ ಬಿಡುಗಡೆ ಮಾಡಿದ್ದೇನೆ, ನಾಳೆಯಿಂದಲೇ ಕಾಮಗಾರಿ ಆರಂಭವಾಗುತ್ತಿದೆ ಎಂದು ಸುದ್ದಿ ಬಂದಿತ್ತು ಆದರೆ ವಾಸ್ತವದಲ್ಲಿ ನಡೆದಿರುವ ಕಾಮಗಾರಿ ನೋಡಿದರೆ ಸಾರ್ವಜನಿಕರ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ. ಪ್ರತೀ ಬಾರಿ ಅಧಿಕಾರಕ್ಕೆ ಬಂದಾಗ ಮಂತ್ರಿಗಿರಿ, ಸರ್ಕಾರ ಎಂದು ಬ್ಯುಸಿಯಾಗುವ ಶಾಸಕರು ಸಾರ್ವಜನಿಕರ ಸಂಕಷ್ಟ ಅರಿಯುತ್ತಿಲ್ಲ. ಗುದ್ದಲಿ ಪೂಜೆ ಮಾಡಿ ಹಣ ಬಿಡುಗಡೆ ಮಾಡಿದ್ದೇನೆ ಎಂದು ಹೇಳುವುದು ಮಾತ್ರ ಅವರ ಹವ್ಯಾಸವಾಗಿದೆ” ಎಂದು ವಾಗ್ದಾಳಿ ನಡೆಸಿದರು.

ಜಿಲ್ಲಾಧಿಕಾರಿಗಳ ಆದೇಶದ ಬಳಿಕ ಸೂಕ್ತ ಪರ್ಯಾಯ ರಸ್ತೆ ವ್ಯವಸ್ಥೆ ಕಲ್ಪಿಸಿ ನಂತರ ಕಾಮಗಾರಿ ಆರಂಭಿಸಬೇಕು ಎಂದು ಮನವಿ ಮಾಡಲು ನಿರ್ಧರಿಸಿದ್ದೆವು. ಆದರೆ ಸ್ಥಳೀಯ ಮುಖಂಡರು ಶಾಸಕರೊಂದಿಗೆ ಮಾತನಾಡಿದ ನಂತರ ಕಾಮಗಾರಿ ಆರಂಭವಾಗಲಿದೆ ಎಂದು ತಿಳಿಸಿದ್ದರಿಂದ ಸುಮ್ಮನಾದೆವು. ಇದೀಗ ರಸ್ತೆಯ ಸ್ಥಿತಿ ಮತ್ತಷ್ಟು ಹದಗೆಟ್ಟಿದ್ದು, ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಹೇಳಿದರು.

ಕನಿಷ್ಠ ₹3 ರಿಂದ ₹4 ಲಕ್ಷ ವೆಚ್ಚದಲ್ಲಿ ರಸ್ತೆಗೆ ಗ್ರಾವೆಲ್ ಹಾಕಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿಕೊಡಬಹುದಿತ್ತು. ಆದರೆ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು.

ಸಂಬಂಧಪಟ್ಟ ಅಧಿಕಾರಿಗಳಾದ ಎಸಿ ಹಾಗೂ ತಹಶೀಲ್ದಾರ್ ಅವರಿಗೆ ದೂರವಾಣಿ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ. ಅಧಿಕಾರಿಗಳು ಕಚೇರಿಯಲ್ಲೇ ಕುಳಿತು ಸಾರ್ವಜನಿಕರ ಸಮಸ್ಯೆಗಳನ್ನು ಕಡೆಗಣಿಸುತ್ತಿದ್ದಾರೆ. ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು.

ಸಾರ್ವಜನಿಕರಿಗೆ ತೊಂದರೆಯಾಗದಂತೆ ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರ್ಯಾಯ ರಸ್ತೆಯನ್ನು ದುರಸ್ತಿಗೊಳಿಸಬೇಕು. ಇಲ್ಲವಾದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ನಾವೇ ಸ್ವಂತ ವೆಚ್ಚದಲ್ಲಿ ರಸ್ತೆ ಸರಿಪಡಿಸುತ್ತೇವೆ. ಆಡಳಿತದ ನಿರ್ಲಕ್ಷ್ಯ ಧೋರಣೆಯನ್ನು ಖಂಡಿಸಿ ನಾಳೆ ಬೆಳಿಗ್ಗೆ ಜಿಲ್ಲಾಧಿಕಾರಿ (DC) ಹಾಗೂ ಉಪವಿಭಾಗಾಧಿಕಾರಿ (AC) ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ರತ್ನಾಕರ ಹೊನಗೋಡು ಎಚ್ಚರಿಸಿದರು.

ಸ್ಥಳೀಯ ಮುಖಂಡ ದೇವರಾಜ ಮಾತನಾಡಿ, “ಕಾಂಗ್ರೆಸ್‌ನ ಸ್ಥಳೀಯ ನಾಯಕರು ಶಾಸಕರೊಂದಿಗೆ ಮಾತನಾಡಿ, ನಾಳೆಯಿಂದಲೇ ₹10 ಲಕ್ಷ ಅನುದಾನದಲ್ಲಿ ಪರ್ಯಾಯ ರಸ್ತೆ ಕಾಮಗಾರಿ ಆರಂಭಿಸಲಾಗುವುದು ಎಂದು ಭರವಸೆ ನೀಡಿದ್ದರು. ಆದರೆ ಇಂದು ರಸ್ತೆಯ ದುಸ್ಥಿತಿ ಮುಂದುವರಿದಿದ್ದರೂ, ಆ ಮಾತು ಹೇಳಿದ ನಾಯಕರು ಹಾಗೂ ಬೆಂಬಲಿಗರು ಯಾರೂ ಸ್ಥಳದಲ್ಲಿ ಕಾಣಿಸುತ್ತಿಲ್ಲ. ಸಾರ್ವಜನಿಕರು ಸಂಕಷ್ಟ ಅನುಭವಿಸುತ್ತಿದ್ದರೂ ಅವರ ಬಗ್ಗೆ ಯಾರೂ ಕಾಳಜಿ ವಹಿಸುತ್ತಿಲ್ಲ,” ಎಂದು ಆರೋಪಿಸಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಶಿವಾನಂದ ಗೇರುಬೀಸು, ನಾರಿ ಲೋಕಪ್ಪ, ಗಣಪತಿ, ಆನಂದ, ರವಿ ಶೆಟ್ಟಿ ಇನ್ನಿತರರು ಇದ್ದರು.

ಜಾಹೀರಾತು

NO COMMENTS