Home Shivamogga ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ: ತಹಶೀಲ್ದಾರ್ ದಿಢೀರ್ ದಾಳಿ..!!

ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆ: ತಹಶೀಲ್ದಾರ್ ದಿಢೀರ್ ದಾಳಿ..!!

40
0

ಶಿವಮೊಗ್ಗ /ಸಾಗರ: ತಾಲೂಕಿನಲ್ಲಿ ಕಾನೂನುಬಾಹಿರವಾಗಿ ರಾಜಾರೋಷವಾಗಿ ನಡೆಯುತ್ತಿದ್ದ ಜಂಬಿಟ್ಟಿಗೆ ಗಣಿಗಾರಿಕೆಯ ಮೇಲೆ ತಸಿಲ್ದಾರ್ ಡಾ. ಪ್ರತಿಭಾ ಆರ್ ಗುರುವಾರ ದಿಡೀರನೆ ದಾಳಿ ನಡೆಸಿದ್ದಾರೆ.

ತಾಲೂಕಿನ ತ್ಯಾಗರ್ತಿ ಭಾಗದ ಬೊಮ್ಮತ್ತಿ ಸಮೀಪದ ಬ್ರಾಹ್ಮಣ ಮಂಚಾಲೆಯಲ್ಲಿ ಕಾನೂನುಬಾಹಿರವಾಗಿ ನಡೆಯುತ್ತಿದ್ದ ಜಂಬಿಟ್ಟಿಗೆ ಗಣಿಗಾರಿಕೆ ಅಡ್ಡೆಗಳ ಮೇಲೆ ತಹಶೀಲ್ದಾರ್ ಡಾ. ಪ್ರತಿಭಾ ಆರ್. ಅವರು ದಿಢೀರ್ ದಾಳಿ ನಡೆಸಿ ಅಕ್ರಮವಾಗಿ ಜಂಬಿಟ್ಟಿಗೆ ಸಾಗಿಸುತ್ತಿದ್ದ ಲಾರಿಯೊಂದನ್ನು ಮುಟ್ಟುಗೋಲು ಹಾಕಿಕೊಂಡು, ಸಾಗರ ಗ್ರಾಮಾಂತರ (Rural) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬ್ರಾಹ್ಮಣ ಮಂಚಾಲೆ ಗ್ರಾಮದ ಸರ್ವೇ ನಂಬರ್ 107ರಲ್ಲಿ ಯಾವುದೇ ಅಧಿಕೃತ ಅನುಮತಿ ಇಲ್ಲದೆ, ಅಕ್ರಮವಾಗಿ ಜಂಬಿಟ್ಟಿಗೆ ಗಣಿಗಾರಿಕೆ ನಡೆಸಿ ಲಾರಿಗೆ ತುಂಬಿಸಿ ಸಾಗಿಸಲಾಗುತ್ತಿತ್ತು. ಈ ಕುರಿತು ಖಚಿತ ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾದ ತಹಶೀಲ್ದಾರ್ ಡಾ. ಪ್ರತಿಭಾ ಆರ್. ಅವರು ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ನಡೆಸಿದ್ದಾರೆ. ಜಂಬಿಟ್ಟಿಗೆ ತುಂಬಿದ್ದ ಲಾರಿಯನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು, ಸಾಗರ ರೂರಲ್ ಪೊಲೀಸ್ ಸ್ಟೇಷನ್‌ನಲ್ಲಿ ಪ್ರಥಮ ಮಾಹಿತಿ ವರದಿ (FIR) ದಾಖಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ತ್ಯಾಗರ್ತಿ ವಲಯದ ಬೊಮ್ಮತ್ತಿ ಹಾಗೂ ಬ್ರಾಹ್ಮಣ ಮಂಚಾಲೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಹಳ ದಿನಗಳಿಂದಲೂ ಯಾವುದೇ ಪರವಾನಗಿ ಇಲ್ಲದೆ ನಿರಂತರವಾಗಿ ಅಕ್ರಮ ಗಣಿಗಾರಿಕೆ ನಡೆಸಿ, ಜಂಬಿಟ್ಟಿಗೆಯನ್ನು ಸಾಗಿಸಲಾಗುತ್ತಿದೆ ಎಂಬ ವ್ಯಾಪಕ ದೂರುಗಳು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದ್ದವು. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆಯು ಈ ಪ್ರಮುಖ ಕ್ರಮ ಕೈಗೊಂಡಿದೆ.

ಯಶಸ್ವಿ ದಾಳಿಯ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರಾದ (ರೆವಿನ್ಯೂ ಇನ್ಸ್ಪೆಕ್ಟರ್) ಗುರುರಾಜ್ ಹಾಗೂ ಗ್ರಾಮ ಆಡಳಿತಾಧಿಕಾರಿ (VA) ನಂದೀಶ್ ಅವರು ಉಪಸ್ಥಿತರಿದ್ದು, ಕಾರ್ಯಾಚರಣೆಗೆ ಸಾಥ್ ನೀಡಿದರು.

ಸಾಗರ ತಾಲೂಕಿನಲ್ಲಿ ದೀರ್ಘಕಾಲದಿಂದ ಯಾವುದೇ ಭಯವಿಲ್ಲದೆ ರಾಜಾರೋಷವಾಗಿ ನಡೆಯುತ್ತಿದ್ದ ಅಕ್ರಮ ಜಂಬಿಟ್ಟಿಗೆ ಮತ್ತು ಮರಳು ಸಾಗಾಟಕ್ಕೆ ಕಠಿಣ ಕಾನೂನು ಕ್ರಮಗಳ ಮೂಲಕ ಕಡಿವಾಣ ಹಾಕಲಾಗುವುದು ಎಂದು ತಹಶೀಲ್ದಾರ್ ಡಾಕ್ಟರ್ ಪ್ರತಿಭಾ ಆರ್ ಅವರು ಸ್ಪಷ್ಟಪಡಿಸಿದ್ದಾರೆ. ಇಂತಹ ಕಾನೂನುಬಾಹಿರ ಚಟುವಟಿಕೆಗಳನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಅವರು ಕಡಕ್ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಅವರು, “ಬೊಮ್ಮತ್ತಿ ಭಾಗದ ಬ್ರಾಹ್ಮಣ ಮಂಚಾಲೆ ಗ್ರಾಮದ ಸರ್ವೇ ನಂಬರ್ 107ರಲ್ಲಿ ಅಧಿಕಾರಿಗಳ ತಂಡವು ಜಂಟಿಯಾಗಿ ದಿಢೀರ್ ದಾಳಿ ನಡೆಸಿ, ಅಕ್ರಮ ಗಣಿಗಾರಿಕೆ ಮತ್ತು ಸಾಗಾಟವನ್ನು ಯಶಸ್ವಿಯಾಗಿ ತಡೆದಿದೆ. ದಾಳಿಯ ವೇಳೆ ಅಕ್ರಮ ಸಾಗಾಟಕ್ಕೆ ಬಳಸುತ್ತಿದ್ದ ಲಾರಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಧಿಕೃತವಾಗಿ ಎಫ್‌ಐಆರ್ (FIR) ದಾಖಲಿಸಲಾಗಿದೆ,” ಎಂದು ತಿಳಿಸಿದರು.

ಈ ಕುರಿತು ಮಾತನಾಡಿದ ತಹಶೀಲ್ದಾರ್, “ಈ ಕ್ರಮವು ತಾಲೂಕಿನಲ್ಲಿ ಅಕ್ರಮ ದಂಧೆ ನಡೆಸುವವರಿಗೆ ಕಠಿಣ ಎಚ್ಚರಿಕೆಯ ಗಂಟೆಯಾಗಬೇಕು. ಭವಿಷ್ಯದಲ್ಲಿ ಸಾಗರ ತಾಲೂಕಿನ ಯಾವುದೇ ಭಾಗದಲ್ಲಿ ಇಂತಹ ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ, ತಪ್ಪಿತಸ್ಥರ ವಿರುದ್ಧ ಯಾವುದೇ ದಾಕ್ಷಿಣ್ಯವಿಲ್ಲದೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು,” ಎಂದು ದೃಢವಾಗಿ ಹೇಳಿದ್ದಾರೆ.

ಜಾಹೀರಾತು