Home Shivamogga Sagara ಉನ್ನತ ಶಿಕ್ಷಣದತ್ತ ರಚನಾ ಹೆಜ್ಜೆ; ಅಮಿಟಿ ವಿಶ್ವವಿದ್ಯಾಲಯಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಗೆ ಸನ್ಮಾನ..!!

ಉನ್ನತ ಶಿಕ್ಷಣದತ್ತ ರಚನಾ ಹೆಜ್ಜೆ; ಅಮಿಟಿ ವಿಶ್ವವಿದ್ಯಾಲಯಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಗೆ ಸನ್ಮಾನ..!!

0
3

ಸಾಗರ (ಆನಂದಪುರ):ಸಾಮಾನ್ಯ ಕುಟುಂಬದಿಂದ ಬಂದು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡುತ್ತಿರುವ ರಾಜಶೇಖರ್ ಆಚಾರ್ ಹಾಗೂ ಪ್ರಾರ್ಥನಾ ದಂಪತಿಯ ಪುತ್ರಿ ರಚನಾ ಅವರು ದೆಹಲಿಯ ನೋಯ್ಡಾದಲ್ಲಿರುವ ಪ್ರತಿಷ್ಠಿತ ಅಮಿಟಿ ವಿಶ್ವವಿದ್ಯಾಲಯ (Amity University)ದಲ್ಲಿ ಉನ್ನತ ವ್ಯಾಸಂಗಕ್ಕೆ ಆಯ್ಕೆಯಾಗಿದ್ದು, ಅವರನ್ನು ಸ್ನೇಹಿತರ ಬಳಗ ಹಾಗೂ ಕುಟುಂಬಸ್ಥರು ಸನ್ಮಾನಿಸಿ ಗೌರವಿಸಿದರು.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿ.ಎಸ್ಸಿ. ಕ್ರಿಮಿನಾಲಜಿ ಮತ್ತು ಫೊರೆನ್ಸಿಕ್ ಸೈನ್ಸ್ (B.Sc. Criminology & Forensic Science) ವಿಭಾಗದಲ್ಲಿ ಅತ್ಯುನ್ನತ ದರ್ಜೆಯಲ್ಲಿ (Distinction) ತೇರ್ಗಡೆಯಾಗಿರುವ ರಚನಾ ಅವರು, ಮುಂದಿನ ಉನ್ನತ ಶಿಕ್ಷಣಕ್ಕಾಗಿ ನೋಯ್ಡಾಕ್ಕೆ ತೆರಳುತ್ತಿದ್ದಾರೆ.

ಈ ಸಂದರ್ಭದಲ್ಲಿ ಸ್ನೇಹಿತರ ಬಳಗದ ಪರವಾಗಿ ಬಿ.ಡಿ. ರವಿಕುಮಾರ್ ಅವರು ರಚನಾ ಅವರನ್ನು ಸನ್ಮಾನಿಸಿ ಮಾತನಾಡಿ, ಸಾಮಾನ್ಯ ಕುಟುಂಬದಿಂದ ಬಂದರೂ ಕಠಿಣ ಪರಿಶ್ರಮ, ಆತ್ಮವಿಶ್ವಾಸ ಹಾಗೂ ನಿರಂತರ ಪ್ರಯತ್ನದ ಮೂಲಕ ಉನ್ನತ ಶಿಕ್ಷಣದ ಅವಕಾಶವನ್ನು ಪಡೆದುಕೊಂಡಿರುವುದು ಹೆಮ್ಮೆಯ ಸಂಗತಿಯಾಗಿದೆ. ಅಮಿಟಿ ವಿಶ್ವವಿದ್ಯಾಲಯದಲ್ಲಿ ಉತ್ತಮ ವ್ಯಾಸಂಗ ಮಾಡಿ ಇನ್ನಷ್ಟು ಉನ್ನತ ಸಾಧನೆ ಮಾಡುವ ಮೂಲಕ ಕುಟುಂಬ, ಸಮಾಜ ಹಾಗೂ ರಾಜ್ಯಕ್ಕೆ ಕೀರ್ತಿ ತರಲಿ. ಅವರ ಭವಿಷ್ಯ ಉಜ್ವಲವಾಗಿರಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್ ಕುಮಾರ್ ಮಾತನಾಡಿ, “ಶಿಕ್ಷಣವೇ ವ್ಯಕ್ತಿಯ ಬದುಕನ್ನು ರೂಪಿಸುವ ಶಕ್ತಿಯಾಗಿದೆ. ರಚನಾ ಅವರು ತಮ್ಮ ಪ್ರತಿಭೆ ಮತ್ತು ಪರಿಶ್ರಮದ ಮೂಲಕ ಪ್ರತಿಷ್ಠಿತ ಅಮಿಟಿ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಕ್ಕೆ ಆಯ್ಕೆಯಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಅವರು ಉನ್ನತ ಶಿಕ್ಷಣ ಪೂರ್ಣಗೊಳಿಸಿ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸುವುದರೊಂದಿಗೆ ತಮ್ಮ ಕುಟುಂಬ, ಊರು ಹಾಗೂ ರಾಜ್ಯಕ್ಕೆ ಕೀರ್ತಿ ತರಲಿ. ಅವರ ಮುಂದಿನ ಶೈಕ್ಷಣಿಕ ಪಯಣ ಯಶಸ್ವಿಯಾಗಲಿ,” ಎಂದು ಶುಭ ಹಾರೈಸಿದರು.

ರಚನಾ ಅವರ ಅನಿಸಿಕೆ:

“ನನ್ನ ಶ್ರಮ ಮತ್ತು ಕನಸಿಗೆ ಬೆಂಬಲವಾಗಿ ನಿಂತ ಕುಟುಂಬದವರು ಹಾಗೂ ಹಿತೈಷಿಗಳ ನಂಬಿಕೆಯನ್ನು ಎಂದಿಗೂ ಹುಸಿಗೊಳಿಸುವುದಿಲ್ಲ. ಹೆಚ್ಚಿನ ವ್ಯಾಸಂಗ ಮಾಡಿ ಉತ್ತಮ ಸಾಧನೆ ಮಾಡುವ ಮೂಲಕ ಎಲ್ಲರ ಪ್ರೋತ್ಸಾಹಕ್ಕೆ ಸೂಕ್ತ ಗೌರವ ತರುತ್ತೇನೆ,” ಎಂದು ರಚನಾ ತಿಳಿಸಿದರು.

ಈ ಸಂದರ್ಭದಲ್ಲಿ ಸ್ನೇಹಿತರ ಬಳಗದ ರಮೇಶ್ ಶೆಟ್ಟಿ, ವೆಂಕಟೇಶ್ ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು.

NO COMMENTS