ಶಿವಮೊಗ್ಗ, ಆ. 4: ಪರಿಸರ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಶಿಪ್ರಾಸ್ ಗ್ರೀನ್ ಪ್ರಾಡಕ್ಟ್ಸ್ ಸಂಸ್ಥೆಯು ಪರಿಸರ ಸ್ನೇಹಿ ಬಿದಿರಿನ ಹಲ್ಲುಜ್ಜುವ ಬ್ರಷ್ ಅನ್ನು ಜೆಕಾಂ ಸಭೆಯಲ್ಲಿ ಬಿಡುಗಡೆಗೊಳಿಸಿತು.
ಶಿವಮೊಗ್ಗದಲ್ಲಿ ಜೆಕಾಂ ವಲಯ ಅಧ್ಯಕ್ಷ ಸಿಎ ರುದ್ರೇಶ್ ಕೋರಿ ಅವರು ಉತ್ಪನ್ನವನ್ನು ಬಿಡುಗಡೆಗೊಳಿಸಿ ಮಾತನಾಡಿ, ಪ್ರತಿದಿನ ಬಳಕೆಯಾಗುವ ಪ್ಲಾಸ್ಟಿಕ್ ಹಲ್ಲುಜ್ಜುವ ಬ್ರಷ್ಗಳಿಂದ ಪರಿಸರಕ್ಕೆ ಉಂಟಾಗುತ್ತಿರುವ ಹಾನಿಯನ್ನು ತಗ್ಗಿಸುವ ಉದ್ದೇಶದಿಂದ ನೈಸರ್ಗಿಕ ಬಿದಿರಿನಿಂದ ತಯಾರಿಸಲಾದ ಈ ಬ್ರಷ್ ಅನ್ನು ಪರಿಚಯಿಸಲಾಗಿದೆ ಎಂದು ತಿಳಿಸಿದರು. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸಿ ಪರಿಸರ ಸ್ನೇಹಿ ಜೀವನಶೈಲಿಯನ್ನು ಉತ್ತೇಜಿಸುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದರು.

ಜೆಸಿಐ ಸಂಸ್ಥೆಯ ಅಂಗಸಂಸ್ಥೆಯಾದ ಜೆಕಾಂ ವ್ಯಾಪಾರ ಮತ್ತು ವಾಣಿಜ್ಯ ಕ್ಷೇತ್ರದ ಯುವ ಉದ್ಯಮಿಗಳಿಗೆ ಸಂಪರ್ಕ ವೃದ್ಧಿ, ವ್ಯವಹಾರ ಅಭಿವೃದ್ಧಿ ಹಾಗೂ ನಾಯಕತ್ವ ಬೆಳೆಸಲು ವೇದಿಕೆಯನ್ನು ಒದಗಿಸುತ್ತಿದ್ದು, ಇದೇ ವೇದಿಕೆಯಲ್ಲಿ ಪರಿಸರ ಸ್ನೇಹಿ ಉತ್ಪನ್ನಗಳ ಪ್ರೋತ್ಸಾಹದ ಭಾಗವಾಗಿ ಬಿದಿರಿನ ಹಲ್ಲುಜ್ಜುವ ಬ್ರಷ್ ಅನ್ನು ಬಿಡುಗಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಶಿಪ್ರಾಸ್ ಗ್ರೀನ್ ಪ್ರಾಡಕ್ಟ್ಸ್ ಸಂಸ್ಥೆಯ ಮಾಲೀಕರಾದ ಜಗದೀಶ್ ಶಿಪ್ರಾ ಮಾತನಾಡಿ, ಪರಿಸರ ಸಂರಕ್ಷಣೆಯ ಕುರಿತು ಜಾಗೃತಿ ಮೂಡಿಸುವ ಹಾಗೂ ಪ್ಲಾಸ್ಟಿಕ್ಗೆ ಪರ್ಯಾಯವಾದ ಹಸಿರು ಉತ್ಪನ್ನಗಳನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪರಿಸರ ಸ್ನೇಹಿ ಉತ್ಪನ್ನಗಳನ್ನು ಪರಿಚಯಿಸುವ ಯೋಜನೆ ಹೊಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜೆಕಾಂ ಕೋಚ್ ಕಲ್ಪತರು ಮೋಹನ್, ಜೆಕಾಂ ಕೋಚ್ ಸುನೀಲ್ ಕುಮಾರ್, ಟೇಬಲ್ ಅಧ್ಯಕ್ಷ ಚಂದ್ರಹಾಸ್ ಶೆಟ್ಟಿ, ಸಿಎ ಗೌರೀಶ್ ಭಾರ್ಗವ್, ಸಂದೇಶ್ ಸೇರಿದಂತೆ ಹಲವಾರು ಸದಸ್ಯರು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9353570891
ಜಾಹೀರಾತು












