✒️..ಅಮಿತ್ ಆರ್ ಆನಂದಪುರ
ಸಾಗರ: ಸರ್ಕಾರಿ ಶಾಲೆಗಳಲ್ಲಿನ ಮಧ್ಯಾಹ್ನದ ಬಿಸಿಯೂಟದ ಗುಣಮಟ್ಟ ಹಾಗೂ ಮಕ್ಕಳೊಂದಿಗೆ ಆತ್ಮೀಯ ಒಡನಾಟಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಸಾಗರ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಓ) ಸದಾನಂದ ಸ್ವಾಮಿ ಸಿ. ಅವರು ತಾಲ್ಲೂಕಿನ ಮತ್ತಿಕೊಪ್ಪ ಸರ್ಕಾರಿ ಶಾಲೆಗೆ ಭೇಟಿ ನೀಡಿ ಮಕ್ಕಳೊಂದಿಗೆ ಕುಳಿತು ಮಧ್ಯಾಹ್ನದ ಬಿಸಿಯೂಟ ಸವಿದರು.
ಶಾಲಾ ಭೇಟಿಯ ವೇಳೆ ಮಕ್ಕಳೊಂದಿಗೆ ಬೆರೆತು ಶೈಕ್ಷಣಿಕ ವಿಷಯಗಳ ಕುರಿತು ಸಂವಾದ ನಡೆಸಿದ ಅವರು, ಬಿಸಿಯೂಟದ ರುಚಿ, ಗುಣಮಟ್ಟ ಹಾಗೂ ವ್ಯವಸ್ಥೆಯ ಕುರಿತು ಮಕ್ಕಳ ಅಭಿಪ್ರಾಯವನ್ನು ಆಲಿಸಿದರು. ಅಲ್ಲದೆ, ತಯಾರಿಸಲಾದ ಆಹಾರವನ್ನು ಸ್ವತಃ ಸವಿದು ಅಗತ್ಯವಿರುವ ಕಡೆ ಸಿಬ್ಬಂದಿಗೆ ಸೂಕ್ತ ಮಾರ್ಗದರ್ಶನ ನೀಡಿದರು.

ಸರ್ಕಾರಿ ಶಾಲೆಗಳಲ್ಲಿನ ಬಿಸಿಯೂಟ ಯೋಜನೆ ಮಕ್ಕಳ ಪೌಷ್ಟಿಕತೆ ಮತ್ತು ಶಿಕ್ಷಣಕ್ಕೆ ಪೂರಕವಾಗಿರುವ ಮಹತ್ವದ ಯೋಜನೆಯಾಗಿದೆ. ಇಂತಹ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಅಧಿಕಾರಿಗಳು ಶಾಲೆಗಳಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಸಮಯ ಕಳೆಯುವುದು ಹಾಗೂ ಆಹಾರದ ಗುಣಮಟ್ಟವನ್ನು ನೇರವಾಗಿ ಪರಿಶೀಲಿಸುವುದು ಉತ್ತಮ ಆಡಳಿತದ ಮಾದರಿಯಾಗಿದೆ.
ಮಕ್ಕಳೊಂದಿಗೆ ಒಂದಾಗಿ ಊಟ ಮಾಡುವ ಮೂಲಕ ಅವರಲ್ಲಿರುವ ಮುಜುಗರ ದೂರವಾಗಲು ಸಹಕಾರಿಯಾಗುತ್ತದೆ. ಸಾಗರ ಬಿಇಓ ಸದಾನಂದ ಸ್ವಾಮಿ ಅವರ ಈ ಸರಳ, ಸಜ್ಜನಿಕೆಯ ನಡೆ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರವಾಗಿದ್ದು, ಇತರ ಅಧಿಕಾರಿಗಳಿಗೂ ಮಾದರಿಯಾಗಿದೆ.
ಜಾಹೀರಾತು












