Home ರಾಜ್ಯ ಶಾಲಾ ಕ್ರೀಡಾಕೂಟಗಳಿಗೆ ಹೈಕೋರ್ಟ್ ತಡೆ: ಅಂಡರ್‌-14 ವಯೋಮಿತಿ ನಿಯಮದ ಗೊಂದಲ, ಕಾರಣವೇನು..?

ಶಾಲಾ ಕ್ರೀಡಾಕೂಟಗಳಿಗೆ ಹೈಕೋರ್ಟ್ ತಡೆ: ಅಂಡರ್‌-14 ವಯೋಮಿತಿ ನಿಯಮದ ಗೊಂದಲ, ಕಾರಣವೇನು..?

53
0

✒️..ಅಮಿತ್ ಆರ್ ಆನಂದಪುರ

ಬೆಂಗಳೂರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವತಿಯಿಂದ 2026–27ನೇ ಸಾಲಿನಲ್ಲಿ ಆಯೋಜಿಸಲಾಗುತ್ತಿದ್ದ ಶಾಲಾ ಮಟ್ಟದ ಕ್ರೀಡಾಕೂಟಗಳಿಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿರುವ ಹಿನ್ನೆಲೆಯಲ್ಲಿ, ರಾಜ್ಯಾದ್ಯಂತ ನಡೆಯುತ್ತಿದ್ದ ಕ್ರೀಡಾಕೂಟಗಳನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ.

ಕ್ರೀಡಾಕೂಟಗಳ ಆಯೋಜನೆಗೆ ಸಂಬಂಧಿಸಿದಂತೆ ಇಲಾಖೆ ಹೊರಡಿಸಿದ್ದ ಸುತ್ತೋಲೆಯನ್ನು ಪ್ರಶ್ನಿಸಿ ಪೋಷಕರು ಹೈಕೋರ್ಟ್ ಮೆಟ್ಟಿಲೇರಿದ್ದರು. 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 14 ವರ್ಷದೊಳಗಿನ ವಿದ್ಯಾರ್ಥಿಗಳಿಗೆ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಬೇಕು ಎಂಬುದು ಅರ್ಜಿದಾರರ ಪ್ರಮುಖ ಮನವಿಯಾಗಿದೆ.

ಅಂಡರ್‌-14 ನಿಯಮವೇ ವಿವಾದಕ್ಕೆ ಕಾರಣ

ರಾಷ್ಟ್ರೀಯ ಮಟ್ಟದಲ್ಲಿ School Games Federation of India (SGFI) ನಿಯಮಗಳ ಪ್ರಕಾರ ಕ್ರೀಡಾಕೂಟಗಳನ್ನು ಮುಖ್ಯವಾಗಿ ವಯೋಮಿತಿ ಆಧಾರದಲ್ಲಿ ನಡೆಸಲಾಗುತ್ತದೆ. ಆದರೆ ರಾಜ್ಯದಲ್ಲಿ ತರಗತಿ ಆಧಾರಿತ ವಿಭಾಗೀಕರಣಕ್ಕೆ ಸಂಬಂಧಿಸಿದಂತೆ ಉಂಟಾದ ಗೊಂದಲದಿಂದಾಗಿ 8ನೇ ತರಗತಿಯ 14 ವರ್ಷದೊಳಗಿನ ವಿದ್ಯಾರ್ಥಿಗಳ ಭಾಗವಹಿಸುವಿಕೆ ಕುರಿತು ವಿವಾದ ಉಂಟಾಗಿದೆ.
ಈ ಹಿನ್ನೆಲೆಯಲ್ಲಿ ಇಲಾಖೆಯು ಪ್ರಸಕ್ತ ಶೈಕ್ಷಣಿಕ ಸಾಲಿನ ಕ್ರೀಡಾಕೂಟಗಳಿಗೆ ಸಂಬಂಧಿಸಿದಂತೆ ಹೊಸ ನಿಯಮಾವಳಿಯನ್ನು ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಪೋಷಕರು ನ್ಯಾಯಾಲಯದ ಮೊರೆ ಹೋಗಿದ್ದರು.

ಕ್ರೀಡಾಕೂಟಗಳಿಗೆ ತಾತ್ಕಾಲಿಕ ಬ್ರೇಕ್

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌ನ ನಿರ್ದೇಶನದ ಹಿನ್ನೆಲೆಯಲ್ಲಿ, ಇಲಾಖೆ ಈ ಹಿಂದೆ ಹೊರಡಿಸಿದ್ದ ಕ್ರೀಡಾ ಸುತ್ತೋಲೆಯನ್ನು ಸದ್ಯ ಜಾರಿಗೆ ತರದಂತೆ ಸೂಚಿಸಲಾಗಿದೆ. ಪರಿಣಾಮವಾಗಿ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ನಡೆಯುತ್ತಿದ್ದ ಮತ್ತು ಮುಂದುವರಿಯಬೇಕಿದ್ದ ಕ್ರೀಡಾಕೂಟಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.

ಆಗಸ್ಟ್ 6ರಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯಿಂದ ಈ ಕುರಿತು ಅಧಿಕೃತ ಸುತ್ತೋಲೆ ಹೊರಡಿಸಲಾಗಿದ್ದು, ರಾಜ್ಯದ ಎಲ್ಲಾ ಜಿಲ್ಲಾ ಉಪನಿರ್ದೇಶಕರು ಹಾಗೂ ದೈಹಿಕ ಶಿಕ್ಷಣಾಧಿಕಾರಿಗಳಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ.

ಹೊಸ ನಿಯಮದ ನಿರೀಕ್ಷೆ

ನ್ಯಾಯಾಲಯದ ಮುಂದಿನ ಆದೇಶದ ಬಳಿಕ ಅಂಡರ್‌-14 ವಯೋಮಿತಿಯ ವಿದ್ಯಾರ್ಥಿಗಳ ಭಾಗವಹಿಸುವಿಕೆ ಸೇರಿದಂತೆ ಕ್ರೀಡಾಕೂಟಗಳ ಆಯೋಜನೆಗೆ ಸಂಬಂಧಿಸಿದಂತೆ ಹೊಸ ಮಾರ್ಗಸೂಚಿ ಅಥವಾ ಸುತ್ತೋಲೆ ಹೊರಬರುವ ನಿರೀಕ್ಷೆಯಿದೆ. ನಂತರ ಸ್ಥಗಿತಗೊಂಡಿರುವ ಕ್ರೀಡಾಕೂಟಗಳನ್ನು ಪರಿಷ್ಕೃತ ನಿಯಮಾವಳಿಗಳ ಅನ್ವಯ ಮರುಆಯೋಜಿಸುವ ಸಾಧ್ಯತೆ ಇದೆ.ಇದರಿಂದ ರಾಜ್ಯದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಗೂ ಕ್ರೀಡಾ ಶಿಕ್ಷಕರು ಮುಂದಿನ ಆದೇಶದ ನಿರೀಕ್ಷೆಯಲ್ಲಿದ್ದಾರೆ.

ಜಾಹೀರಾತು