Home Blog ಹೆಲಿಕಾಪ್ಟರ್‌ನಲ್ಲಿ ಹಾರಿದ ಸರ್ಕಾರಿ ಶಾಲಾ ಮಕ್ಕಳು: ಕಡೆನಂದಿಹಳ್ಳಿಯಲ್ಲಿ ವಿಭಿನ್ನ ಸ್ವಾತಂತ್ರ್ಯೋತ್ಸವ..!!

ಹೆಲಿಕಾಪ್ಟರ್‌ನಲ್ಲಿ ಹಾರಿದ ಸರ್ಕಾರಿ ಶಾಲಾ ಮಕ್ಕಳು: ಕಡೆನಂದಿಹಳ್ಳಿಯಲ್ಲಿ ವಿಭಿನ್ನ ಸ್ವಾತಂತ್ರ್ಯೋತ್ಸವ..!!

41
0

ಶಿಕಾರಿಪುರ: ತಾಲೂಕಿನ ಕಡೆನಂದಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 80ನೇ ಸ್ವಾತಂತ್ರ್ಯೋತ್ಸವವನ್ನು ವಿನೂತನ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ವಿಶ್ವಗ್ರ ಫೌಂಡೇಶನ್ ವತಿಯಿಂದ ಶಾಲೆಯ 12 ವಿದ್ಯಾರ್ಥಿಗಳಿಗೆ ಹೆಲಿಕಾಪ್ಟರ್‌ನಲ್ಲಿ ವಿಹರಿಸುವ ಅಪರೂಪದ ಅವಕಾಶ ಕಲ್ಪಿಸಲಾಗಿದ್ದು, ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಯಿತು.

ಹೆಲಿಕಾಪ್ಟರ್ ವಿಹಾರ ನಡೆಸಿದ ವಿದ್ಯಾರ್ಥಿಗಳು ಅಪಾರ ಸಂತಸ ವ್ಯಕ್ತಪಡಿಸಿದರು. ಗ್ರಾಮೀಣ ಭಾಗದ ಸರ್ಕಾರಿ ಶಾಲಾ ಮಕ್ಕಳಿಗೆ ಇಂತಹ ವಿಶೇಷ ಅನುಭವ ಕಲ್ಪಿಸಿರುವುದು ಅವರಲ್ಲಿ ಹೊಸ ಉತ್ಸಾಹ, ಆತ್ಮವಿಶ್ವಾಸ ಹಾಗೂ ಸಾಧನೆಯ ಕನಸು ಮೂಡಿಸುವಂತಾಯಿತು. ವಿದ್ಯಾರ್ಥಿಗಳ ಈ ಅನುಭವವನ್ನು ಕಂಡ ಪೋಷಕರು ಹಾಗೂ ಗ್ರಾಮಸ್ಥರು ವಿಶ್ವಗ್ರ ಫೌಂಡೇಶನ್‌ನ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಲಿಕಾಪ್ಟರ್ ವಿಹಾರದ ಬಳಿಕ ವಿದ್ಯಾರ್ಥಿಗಳು ದೇಶಭಕ್ತಿ, ರಾಷ್ಟ್ರೀಯ ಐಕ್ಯತೆ, ಸ್ವಾತಂತ್ರ್ಯ ಹೋರಾಟ ಹಾಗೂ ಭಾರತೀಯ ಸಂಸ್ಕೃತಿಯ ವೈವಿಧ್ಯತೆಯನ್ನು ಪ್ರತಿಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿದರು. ದೇಶಭಕ್ತಿ ಗೀತೆ, ನೃತ್ಯ ಸೇರಿದಂತೆ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕುಮಾರ್ ಮತ್ತಿಮನೆ ಮಾತನಾಡಿ, ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ರಾಷ್ಟ್ರಪ್ರೇಮ ಹಾಗೂ ಜವಾಬ್ದಾರಿಯ ಪ್ರಜ್ಞೆ ಬೆಳೆಸಬೇಕು. ಬಲಿಷ್ಠ ಭಾರತ ನಿರ್ಮಾಣದಲ್ಲಿ ಪ್ರತಿಯೊಬ್ಬ ನಾಗರಿಕನ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.

ದತ್ತು ಸಮಿತಿ ಅಧ್ಯಕ್ಷ ಕುಮಾರಸ್ವಾಮಿ ಆರಾಧ್ಯ ಮಠ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗವನ್ನು ಸದಾ ಸ್ಮರಿಸಬೇಕು. ದೇಶದ ಭವಿಷ್ಯ ರೂಪಿಸುವ ಜವಾಬ್ದಾರಿ ಇಂದಿನ ವಿದ್ಯಾರ್ಥಿಗಳ ಮೇಲಿದೆ. ಉತ್ತಮ ಶಿಕ್ಷಣ, ಶಿಸ್ತು ಹಾಗೂ ದೇಶಭಕ್ತಿಯೊಂದಿಗೆ ಮುನ್ನಡೆಯಬೇಕು ಎಂದು ಕರೆ ನೀಡಿದರು.

ವಿಶ್ವಗ್ರ ಗ್ರೂಪ್ ಆಫ್ ಕಂಪನೀಸ್ ಸಂಸ್ಥಾಪಕ ಡಾ. ಶಿವಕುಮಾರ್ ಎ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಮನಸಾಕ್ಷಿ ಫೌಂಡೇಶನ್, ಗೋಕಾಕ ಸಂಸ್ಥಾಪಕ ಮಲ್ಲಿಕಾರ್ಜುನ ಕರಜಗಿ ಮಠ ಮಾತನಾಡಿ, ವಿದ್ಯಾರ್ಥಿಗಳು ಆತ್ಮವಿಶ್ವಾಸ, ಶಿಸ್ತು ಹಾಗೂ ದೇಶಭಕ್ತಿಯೊಂದಿಗೆ ತಮ್ಮ ಗುರಿ ಸಾಧಿಸುವತ್ತ ಮುನ್ನಡೆಯಬೇಕು ಎಂದು ಸಲಹೆ ನೀಡಿದರು. ವಿಶ್ವಗ್ರ ಫೌಂಡೇಶನ್ ನಿರ್ದೇಶಕಿ ಅರ್ಚನಾ ಶಿವಕುಮಾರ್ ಉಪಸ್ಥಿತರಿದ್ದು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.

ಕಾರ್ಯಕ್ರಮ ವೀಕ್ಷಿಸಲು ವಿವಿಧೆಡೆಯಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಶಾಲೆಯ ಮುಖ್ಯೋಪಾಧ್ಯಾಯರು, ಶಾಲಾ ಅಭಿವೃದ್ಧಿ ಸಮಿತಿ ಹಾಗೂ ದತ್ತು ಸಮಿತಿ ಸದಸ್ಯರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಪೋಷಕರು, ಗುರುಕುಲದ ವಿದ್ಯಾರ್ಥಿಗಳು ಸೇರಿದಂತೆ ಹಲವು ಗಣ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಹೆಲಿಕಾಪ್ಟರ್ ವಿಹಾರ, ದೇಶಭಕ್ತಿ ಗೀತೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕಡೆನಂದಿಹಳ್ಳಿ ಸರ್ಕಾರಿ ಶಾಲೆಯಲ್ಲಿ ನಡೆದ 80ನೇ ಸ್ವಾತಂತ್ರ್ಯೋತ್ಸವವು ವಿದ್ಯಾರ್ಥಿಗಳಿಗೆ ಸ್ಮರಣೀಯ ಅನುಭವ ನೀಡುವುದರೊಂದಿಗೆ ಗ್ರಾಮದಲ್ಲಿ ವಿಶೇಷ ಗಮನ ಸೆಳೆಯಿತು.