Home Shivamogga ಆ.19ರಂದು ಶಿಕಾರಿಪುರ ಬಂದ್: ಪ್ರತಿಭಟನೆಗೆ ಕಾರಣವೇನು?

ಆ.19ರಂದು ಶಿಕಾರಿಪುರ ಬಂದ್: ಪ್ರತಿಭಟನೆಗೆ ಕಾರಣವೇನು?

38
0

ಶಿವಮೊಗ್ಗ, ಆ.17: ಶಿಕಾರಿಪುರದಲ್ಲಿ ಬಜರಂಗದಳದ ಕಾರ್ಯಕರ್ತರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಆ.19ರಂದು ಸ್ವಯಂಪ್ರೇರಿತ ಶಿಕಾರಿಪುರ ಬಂದ್‌ಗೆ ವಿಶ್ವ ಹಿಂದೂ ಪರಿಷತ್‌ (ವಿಹಿಂಪ) ಹಾಗೂ ಬಜರಂಗದಳ ಕರೆ ನೀಡಿವೆ. ಅಂದು ಶಿಕಾರಿಪುರದಲ್ಲಿ ಉಗ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ವಿಹಿಂಪ ವಿಭಾಗ ಸಹ ಕಾರ್ಯದರ್ಶಿ ರಾಜೇಶ್ ಗೌಡ ತಿಳಿಸಿದರು.

 ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲಾದ್ಯಂತ ಗೋ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಆರೋಪಿಸಿದರು.

ಹೊಸನಗರ ತಾಲ್ಲೂಕಿನ ಹರತಾಳು ಗ್ರಾಮದಲ್ಲಿ ಆ.16ರ ಬೆಳಗಿನ ಜಾವ ಗೋ ಕಳ್ಳತನಕ್ಕೆ ಯತ್ನ ನಡೆದಿದ್ದು, ತಡರಾತ್ರಿ ಬಂದ ಕಳ್ಳರು ಕೊಟ್ಟಿಗೆಯಲ್ಲಿ ಕಟ್ಟಿದ್ದ ಜಾನುವಾರುಗಳನ್ನು ವಾಹನಕ್ಕೆ ತುಂಬಿಕೊಂಡು ಪರಾರಿಯಾಗಲು ಯತ್ನಿಸಿದ್ದಾರೆ. ಜಾನುವಾರುಗಳ ಸದ್ದು ಕೇಳಿ ಎಚ್ಚೆತ್ತ ಮನೆಯವರು ಬಜರಂಗದಳದ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದರು ಎಂದು ಹೇಳಿದರು.

ಮಾಹಿತಿ ಪಡೆದ ಕಾರ್ಯಕರ್ತರು ಕಾರಿನಲ್ಲಿ ಕಳ್ಳರ ವಾಹನವನ್ನು ಹಿಂಬಾಲಿಸಿದ್ದಾರೆ. ಮಾರ್ಗಮಧ್ಯೆ ಗೋ ಕಳ್ಳರ ಗುಂಪು ಮತ್ತೊಂದು ವಾಹನವನ್ನು ಕರೆಸಿಕೊಂಡು ಪೂರ್ವನಿಯೋಜಿತ ರೀತಿಯಲ್ಲಿ ಕಾರ್ಯಕರ್ತರ ಕಾರಿಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದ್ದು, ಕಾರಿನಿಂದ ಇಳಿದ ಕಾರ್ಯಕರ್ತರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಮೂವರು ಕಾರ್ಯಕರ್ತರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ರಾಜೇಶ್ ಗೌಡ ತಿಳಿಸಿದರು.

ಈ ಕುರಿತು ಶಿಕಾರಿಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ವಿಹಿಂಪ ಸಾಗರ ಜಿಲ್ಲಾ ಘಟಕದ ಅಧ್ಯಕ್ಷೆ ಪ್ರತಿಮಾ ಜೋಗಿ ಮಾತನಾಡಿ, ಸಾಗರ ವಿಭಾಗ ಸೇರಿದಂತೆ ಜಿಲ್ಲೆಯಲ್ಲಿ ಗೋ ಕಳ್ಳತನ ಪ್ರಕರಣಗಳು ಹೆಚ್ಚುತ್ತಿವೆ. ಗೋವುಗಳನ್ನು ಕಳ್ಳತನ ಮಾಡಿಕೊಂಡು ಹೋಗುವುದಷ್ಟೇ ಅಲ್ಲದೆ, ಅದನ್ನು ತಡೆಯಲು ಮುಂದಾಗುವ ಕಾರ್ಯಕರ್ತರ ಮೇಲೂ ಹಲ್ಲೆ ನಡೆಸಲಾಗುತ್ತಿದೆ ಎಂದು ಆರೋಪಿಸಿದರು.

ದೂರು ನೀಡಿದರೂ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿದ ಅವರು, ಅಕ್ರಮ ಗೋ ಸಾಗಾಣಿಕೆದಾರರನ್ನು ಕೂಡಲೇ ಬಂಧಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಆ.19ರಂದು ನಡೆಯಲಿರುವ ಶಿಕಾರಿಪುರ ಬಂದ್‌ಗೆ ಅಲ್ಲಿನ ಶಾಸಕರ ಬೆಂಬಲವೂ ಇದೆ. ಅವರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮುಖಂಡರು ತಿಳಿಸಿದರು. ಶಿಕಾರಿಪುರದ ವರ್ತಕರು ಸ್ವಯಂಪ್ರೇರಿತವಾಗಿ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ವಿಹಿಂಪ ಪ್ರಾಂತೀಯ ಸಾಮರಸ್ಯ ಪ್ರಮುಖ್ ರಮೇಶ್ ಬಾಬು, ಬಜರಂಗದಳದ ಜಿಲ್ಲಾ ಸಂಯೋಜಕ ಸಂತೋಷ್ ಶಿವಾಜಿ, ಪ್ರಮುಖರಾದ ನವೀನ್, ಯೋಗೀಶ್, ಸೋಮಶೇಖರ್ ಹಾಗೂ ಕೀರ್ತಿ ಉಪಸ್ಥಿತರಿದ್ದರು.