ಸಾಗರ: ಮಲೆನಾಡಿನ ಅಸ್ತಿತ್ವಕ್ಕೆ ಮಾರಕವಾಗಿರುವ ಕಸ್ತೂರಿ ರಂಗನ್ ವರದಿ ಜಾರಿ ಪ್ರಕ್ರಿಯೆಯನ್ನು ತಕ್ಷಣವೇ ಕೈಬಿಡಬೇಕು ಎಂದು ಆಗ್ರಹಿಸಿ ತಾಲೂಕಿನ ಕೋಳೂರು ಗ್ರಾಮ ಪಂಚಾಯಿತಿ ಕಚೇರಿ ಎದುರು ಮಂಗಳವಾರ ರೈತರು ಬೃಹತ್ ಪ್ರತಿಭಟನೆ ನಡೆಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ಧೋರಣೆಯನ್ನು ಖಂಡಿಸಿದ ಪ್ರತಿಭಟನಾಕಾರರು, ಕಳೆದ ಮೂರು ವರ್ಷಗಳಿಂದ ಜಿಲ್ಲೆಯಲ್ಲಿ ರೈತರಿಗೆ ಭೂಮಿ ಹಕ್ಕು ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು. ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ಜನವಿರೋಧಿ ಯೋಜನೆಗಳನ್ನು ಮುನ್ನೆಲೆಗೆ ತಂದು ಕೃಷಿಕರನ್ನು ನಿರಂತರ ಆತಂಕಕ್ಕೆ ತಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತ ಮುಖಂಡ ಅಶೋಕ ಜಂಬಳ್ಳಿ ಮಾತನಾಡಿ, ಕಸ್ತೂರಿ ರಂಗನ್ ವರದಿಯನ್ನು 2013ರಲ್ಲಿಯೇ ರೈತರು ಸಂಪೂರ್ಣವಾಗಿ ತಿರಸ್ಕರಿಸಿ ವಿರೋಧಿಸಿದ್ದರು. ರೈತರ ಮೂಲಭೂತ ಕೃಷಿ ಚಟುವಟಿಕೆಗಳಿಗೆ ನಿರ್ಬಂಧ ಹೇರುವ ಇಂತಹ ಯೋಜನೆ ಮಲೆನಾಡಿಗೆ ಅಗತ್ಯವಿಲ್ಲ. ಮಡೆನೂರು ಹಾಗೂ ಲಿಂಗನಮಕ್ಕಿ ಜಲಾಶಯ ಯೋಜನೆಗಳಿಂದ ಸಂತ್ರಸ್ತರಾದ ನೂರಾರು ಕುಟುಂಬಗಳಿಗೆ ದಶಕಗಳು ಕಳೆದರೂ ಭೂಮಿ ಹಕ್ಕು ದೊರೆತಿಲ್ಲ. ರೈತರ ತಾಳ್ಮೆಯನ್ನು ಸರ್ಕಾರಗಳು ಪರೀಕ್ಷಿಸಬಾರದು ಎಂದು ಎಚ್ಚರಿಸಿದರು.
ಜಾನಪದ ಕಲಾವಿದ ಅ.ನಾ. ಚಂದ್ರಶೇಖರ್ ಮಾತನಾಡಿ, ಸ್ವಾತಂತ್ರ್ಯ ಬಂದು ಎಂಟು ದಶಕಗಳು ಕಳೆದರೂ ರೈತರು ತಮ್ಮದೇ ಭೂಮಿಯ ಹಕ್ಕಿಗಾಗಿ ಸರ್ಕಾರದ ಮುಂದೆ ನಿಲ್ಲಬೇಕಾದ ಪರಿಸ್ಥಿತಿ ದುರದೃಷ್ಟಕರ. ವರದಿ ಜಾರಿಯಾದರೆ ರೈತರ ಕೃಷಿ ಚಟುವಟಿಕೆಗಳ ಮೇಲೆ ಹಲವು ನಿರ್ಬಂಧಗಳು ಎದುರಾಗುವ ಆತಂಕವಿದೆ. ರೈತರಿಗೆ ದೊರೆಯುವ ಸರ್ಕಾರದ ಆರ್ಥಿಕ ನೆರವು ಹಾಗೂ ಸಹಾಯಧನಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದ್ದು, ಈ ಬಗ್ಗೆ ರೈತರು ಜಾಗೃತರಾಗಬೇಕು ಎಂದರು.

ಸಮೀಪದ ಸಿಗಂದೂರು ಸೇತುವೆಯಿಂದ ಆರಂಭವಾದ ಬೈಕ್ ರ‍್ಯಾಲಿ ಕೋಳೂರು ಗ್ರಾಮ ಪಂಚಾಯಿತಿಗೆ ತಲುಪಿತು. ಬಳಿಕ ರೈತರು ಪ್ರತಿಭಟನೆ ನಡೆಸಿ ವರದಿ ಜಾರಿಗೆ ವಿರೋಧ ವ್ಯಕ್ತಪಡಿಸಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಅಶೋಕ ಜಂಬಳ್ಳಿ, ಅ.ನಾ. ಚಂದ್ರಶೇಖರ್, ಮಂಜಪ್ಪ ಆರನಬೈಲು, ಸುಗಂದ್ ರಾಜ್, ದಯಾನಂದ, ಕೃಷ್ಣಪ್ಪ, ಅಶೋಕ್ ಬೇಸೂರು, ರಾಮಪ್ಪ, ಪ್ರಕಾಶ್, ವಿರೇಂದ್ರ ಹಾಗೂ ರಾಘು ಸೋಗೆದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಅಣುಸ್ಥಾವರ ವಿರೋಧಿ ಮಾದರಿಯಲ್ಲಿ ಹೋರಾಟ: ಕಸ್ತೂರಿ ರಂಗನ್ ವರದಿ ವಿರುದ್ಧ ಗ್ರಾಮ ಪಂಚಾಯಿತಿಯಲ್ಲಿ ನಿರ್ಣಯ ಕೈಗೊಂಡು ವರದಿಯನ್ನು ಹಿಂಪಡೆಯುವಂತೆ ರೈತರು ಆಗ್ರಹಿಸಿದರು. ಬೇಡಿಕೆ ಈಡೇರದಿದ್ದರೆ ಬೇಸೂರು ಅಣುಸ್ಥಾವರ ವಿರೋಧಿ ಹೋರಾಟದ ಮಾದರಿಯಲ್ಲಿ ಮತ್ತೊಂದು ಪಾದಯಾತ್ರೆ ನಡೆಸಿ ಜನವಿರೋಧಿ ನೀತಿಯ ವಿರುದ್ಧ ಹೋರಾಟ ತೀವ್ರಗೊಳಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಜಾಹೀರಾತು












