ಸಾಗರ: ಗ್ರಾಮೀಣ ಭಾಗದ ಶಾಲಾ ಮಕ್ಕಳ ಬೌದ್ಧಿಕ ಹಾಗೂ ಸಾಂಸ್ಕೃತಿಕ ವಿಕಾಸಕ್ಕೆ ಪೂರಕವಾಗುವ ಉದ್ದೇಶದಿಂದ ಶ್ರೀ ಕ್ಷೇತ್ರ ಸಿಗಂದೂರಿನಲ್ಲಿ “ಶ್ರೀ ಕ್ಷೇತ್ರ ಸಿಗಂದೂರಿನ ಚಿತ್ತ, ರಂಗಶಿಕ್ಷಣದತ್ತ” ಎಂಬ ನೂತನ ಯೋಜನೆಗೆ ಚಾಲನೆ ನೀಡಲಾಗಿದೆ.
ಶ್ರೀ ಕ್ಷೇತ್ರ ಸಿಗಂದೂರಿನ ಧರ್ಮದರ್ಶಿಗಳಾದ ಪೂಜ್ಯಶ್ರೀ ಡಾ. ರಾಮಪ್ಪನವರ ಬಹುದಿನದ ಕನಸಿನಂತೆ ರೂಪುಗೊಂಡಿರುವ ಈ ಯೋಜನೆಯನ್ನು ಶ್ರೀ ಸಿಗಂದೂರು ಎಜುಕೇಷನ್ ಅಂಡ್ ಚಾರಿಟೇಬಲ್ ಟ್ರಸ್ಟ್ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದೆ. ಯೋಜನೆಯಡಿ ಸಿಗಂದೂರು ಸುತ್ತಮುತ್ತಲಿನ ಹತ್ತು ಶಾಲೆಗಳನ್ನು ಆಯ್ಕೆ ಮಾಡಲಾಗಿದ್ದು, ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿಶೇಷ ಆದ್ಯತೆ ನೀಡಲಾಗಿದೆ.
ಶ್ರೀ ಸಿಗಂದೂರು ಚಾರಿಟೇಬಲ್ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಹೆಚ್.ಆರ್. ಅವರ ಮಾರ್ಗದರ್ಶನ ಹಾಗೂ ಸಲಹೆಯಂತೆ ಸ್ಥಳೀಯ ನೆಲದ ಬರಹಗಾರರ ಕಥೆಗಳು, ಜಾನಪದ ಕಥನಗಳು ಮತ್ತು ಸ್ಥಳೀಯ ಇತಿಹಾಸವನ್ನು ಆಧರಿಸಿ ನಾಟಕಗಳನ್ನು ರೂಪಿಸುವ ವಿನೂತನ ಪ್ರಯತ್ನ ಕೈಗೊಳ್ಳಲಾಗಿದೆ.

ರಂಗಶಿಕ್ಷಣವು ಮಕ್ಕಳಲ್ಲಿ ಆತ್ಮವಿಶ್ವಾಸ, ಸಂವಹನ ಕೌಶಲ, ನಾಯಕತ್ವ, ತಂಡದ ಮನೋಭಾವ ಹಾಗೂ ಸೃಜನಶೀಲ ಚಿಂತನೆಯನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವೇದಿಕೆಯ ಮೇಲೆ ಅಭಿನಯಿಸುವ ಮೂಲಕ ಮಕ್ಕಳಲ್ಲಿರುವ ಹಿಂಜರಿಕೆ ಹಾಗೂ ಭಯ ಕಡಿಮೆಯಾಗಿ, ಸ್ಪಷ್ಟ ಉಚ್ಚಾರಣೆ ಮತ್ತು ಮುಕ್ತ ಸಂವಹನ ಕೌಶಲ ಅಭಿವೃದ್ಧಿಯಾಗಲು ಸಹಕಾರಿಯಾಗುತ್ತದೆ.
ಅಲ್ಲದೆ, ಸ್ಥಳೀಯ ಕಥೆ, ಸಾಹಿತ್ಯ ಮತ್ತು ಇತಿಹಾಸವನ್ನು ನಾಟಕದ ಮೂಲಕ ಪರಿಚಯಿಸುವುದರಿಂದ ಮಕ್ಕಳು ತಮ್ಮ ನೆಲದ ಸಂಸ್ಕೃತಿ ಹಾಗೂ ಸಾಹಿತ್ಯ ಪರಂಪರೆಯೊಂದಿಗೆ ಬೆಸೆಯಲು ಸಾಧ್ಯವಾಗುತ್ತದೆ.
ಗ್ರಾಮೀಣ ಹಾಗೂ ಸರ್ಕಾರಿ ಶಾಲೆಗಳ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ನಿಟ್ಟಿನಲ್ಲಿ ಶ್ರೀ ಸಿಗಂದೂರು ಎಜುಕೇಷನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಕೈಗೊಂಡಿರುವ ಈ ಯೋಜನೆ ಶಿಕ್ಷಣದೊಂದಿಗೆ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಬೆಸೆಯುವ ಅರ್ಥಪೂರ್ಣ ಪ್ರಯತ್ನವಾಗಿದೆ ಎನ್ನಬಹುದು.











