Home Blog ನಾಯಿಯ ತಂಟೆ ಮುಗಿಸಲು ಗುಂಡಿನ ದಾಳಿ..! ಪ್ರಕರಣದ ಹಿಂದೆ ಅಕ್ರಮ ಬಂದೂಕಿನ ಟ್ವಿಸ್ಟ್..!!

ನಾಯಿಯ ತಂಟೆ ಮುಗಿಸಲು ಗುಂಡಿನ ದಾಳಿ..! ಪ್ರಕರಣದ ಹಿಂದೆ ಅಕ್ರಮ ಬಂದೂಕಿನ ಟ್ವಿಸ್ಟ್..!!

38
0

ಸಾಗರ(ಆನಂದಪುರ): ಸಾಕು ನಾಯಿಗಳೊಂದಿಗೆ ತಂಟೆ ಮಾಡುತ್ತಿದ್ದ ನಾಯಿಗೆ ಬಂದೂಕಿನಿಂದ ಗುಂಡು ಹಾರಿಸಿ ಕೊಂದ ಆರೋಪದಡಿ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ.27ರಂದು ಆನಂದಪುರ ಠಾಣೆಯ ಸಿಬ್ಬಂದಿ ನಿರಂಜನ್ ಅವರು ಗುಪ್ತ ಮಾಹಿತಿ ಸಂಗ್ರಹ ಕರ್ತವ್ಯದಲ್ಲಿದ್ದಾಗ, ನಾಡವಳ್ಳಿ ಗ್ರಾಮದಲ್ಲಿ ಲಿಂಗಮೂರ್ತಿ ತಂದೆ ರಾಮಪ್ಪ ಎಂಬವರು ಬಂದೂಕಿನಿಂದ ನಾಯಿಗೆ ಗುಂಡು ಹಾರಿಸಿ ಕೊಂದಿರುವ ಬಗ್ಗೆ ಮಾಹಿತಿ ಲಭಿಸಿದೆ.

ಮಾಹಿತಿ ಆಧರಿಸಿ ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಕೆಂದು ಬಣ್ಣದ ಗಂಡು ನಾಯಿ ಮೃತಪಟ್ಟಿರುವುದು ಕಂಡುಬಂದಿದ್ದು, ಅದರ ಹಿಂಬದಿ ತೊಡೆಯ ಭಾಗಕ್ಕೆ ಗುಂಡು ತಗುಲಿರುವುದು ಗಮನಕ್ಕೆ ಬಂದಿದೆ.

ನಾಡವಳ್ಳಿ ಗ್ರಾಮದ ಬೋರಪ್ಪ ಅವರು ದನಗಳನ್ನು ಮೇಯಿಸಲು ಸಾರ್ವಜನಿಕ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಅವರೊಂದಿಗೆ ಈ ನಾಯಿ ಕೂಡ ಬರುತ್ತಿತ್ತು. ಲಿಂಗಮೂರ್ತಿ ಸಾಕಿದ್ದ ನಾಯಿಗಳೊಂದಿಗೆ ಈ ನಾಯಿ ಆಗಾಗ್ಗೆ ತಂಟೆ ಮಾಡುತ್ತಿತ್ತು ಎನ್ನಲಾಗಿದೆ.

ಆ.27ರಂದು ಬೆಳಗ್ಗೆ 11.15ರ ಸುಮಾರಿಗೆ, ಬೋರಪ್ಪ ಅವರು ದನಗಳನ್ನು ಮೇಯಿಸಲು ತೆರಳುತ್ತಿದ್ದ ವೇಳೆ ಅವರ ಹಿಂದೆ ಬಂದಿದ್ದ ನಾಯಿಗೆ ಲಿಂಗಮೂರ್ತಿ ಬಂದೂಕಿನಿಂದ ಗುಂಡು ಹಾರಿಸಿ ಕೊಂದಿದ್ದಾರೆ ಎಂದು ತಿಳಿದು ಬಂದಿದೆ.

ಅಲ್ಲದೆ, ಆರೋಪಿಯು ಯಾವುದೇ ಪರವಾನಗಿ ಇಲ್ಲದೆ ಬಂದೂಕು ಹೊಂದಿದ್ದು ಹಾಗೂ ಅದನ್ನು ಬಳಸಿ ಗುಂಡು ಹಾರಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣವನ್ನು ಪಿಎಸ್ಐ ಪ್ರವೀಣ್ ಅವರ ಮೇಲ್ವಿಚಾರಣೆಯಲ್ಲಿ ತನಿಖೆ ಕೈಗೊಳ್ಳಲಾಗಿದೆ.

ಜಾಹೀರಾತು