ಶಿವಮೊಗ್ಗ, ಆ.27: ಸಾಗರ ತಾಲೂಕಿನ ಉಳ್ಳೂರಿನಲ್ಲಿರುವ ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯಕ್ಕೆ 2023-24ನೇ ಸಾಲಿನಿಂದ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (ಎನ್ಸಿಟಿಇ) ಮಾನ್ಯತೆ ಇಲ್ಲದಿರುವುದರಿಂದ, ಅಲ್ಲಿ ಬಿಇಡಿ ಕೋರ್ಸ್ಗೆ ಪ್ರವೇಶ ಪಡೆಯುವ ಬಗ್ಗೆ ವಿದ್ಯಾರ್ಥಿಗಳು ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ಕುಲಸಚಿವ ಪ್ರೊ. ತಿಮ್ಮರಾಯಪ್ಪ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಕಾಲೇಜು ಸಕಾಲದಲ್ಲಿ ಅರ್ಜಿ ಸಲ್ಲಿಸದ ಕಾರಣ 2023-24ನೇ ಸಾಲಿನಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸಂಯೋಜನೆ ದೊರೆತಿಲ್ಲ. 2024-25ನೇ ಸಾಲಿನಲ್ಲಿ ಎನ್ಸಿಟಿಇ ಮಾನ್ಯತೆ ಇಲ್ಲದ ಕಾರಣ ಸಂಯೋಜನೆ ನೀಡಲಾಗಿಲ್ಲ ಎಂದು ತಿಳಿಸಿದ್ದಾರೆ.

ಅದೇ ರೀತಿ 2025-26 ಮತ್ತು 2026-27ನೇ ಸಾಲಿನಲ್ಲಿ ಯುಯುಸಿಎಂಎಸ್ ತಂತ್ರಾಂಶದ ಮೂಲಕ ಅರ್ಜಿ ಸಲ್ಲಿಸಿ, ಸ್ಥಳೀಯ ತಪಾಸಣಾ ಸಮಿತಿಯ ಮೂಲಕ ನಿಯಮಾನುಸಾರ ಸಂಯೋಜನಾ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರೂ, ವಿಶ್ವವಿದ್ಯಾಲಯದಿಂದ ಸಂಯೋಜನಾ ಆದೇಶ ಪಡೆದಿರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕರ್ನಾಟಕ ಹೈಕೋರ್ಟ್ನ 2026ರ ಜೂನ್ 24ರ ಮಧ್ಯಂತರ ಆದೇಶ ಅನ್ವಯ ಕಾಲೇಜಿಗೆ ಪರೀಕ್ಷೆ ಹಾಗೂ ಪ್ರವೇಶಾತಿಗೆ ಅನುಮತಿ ದೊರೆತಿದ್ದರೂ, ಅದು ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ. ಅಂತಿಮ ತೀರ್ಪಿನಲ್ಲಿ ಮಧ್ಯಂತರ ಆದೇಶ ರದ್ದಾದರೆ ಸಂಸ್ಥೆಯಾಗಲೀ, ವಿದ್ಯಾರ್ಥಿಗಳಾಗಲೀ ಸಮತೆಯ ಹಕ್ಕು ಸಾಧಿಸಲು ಸಾಧ್ಯವಿಲ್ಲ.
ಇದರಿಂದ ವಿದ್ಯಾರ್ಥಿಗಳ ಪದವಿಯ ಮಾನ್ಯತೆಗೆ ಸಮಸ್ಯೆ ಎದುರಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಸಾಗರ ಗಂಗೋತ್ರಿ ಶಿಕ್ಷಣ ಮಹಾವಿದ್ಯಾಲಯಕ್ಕೆ ಪ್ರವೇಶ ಪಡೆಯುವುದು ವಿದ್ಯಾರ್ಥಿಗಳ ವಿವೇಚನೆಗೆ ಬಿಟ್ಟ ವಿಷಯವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಾಹೀರಾತು












