ಶಿವಮೊಗ್ಗ: ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘ (ರಿ.), ಬೆಂಗಳೂರು ವತಿಯಿಂದ ಸೆಪ್ಟೆಂಬರ್ 17ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿರುವ ಸರ್ಕಾರಿ ನೌಕರರ ಸಭಾಭವನದಲ್ಲಿ ವಾರ್ಷಿಕ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮ ಆಯೋಜಿಸಲಾಗಿದೆ.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಎನ್. ರವಿಕುಮಾರ್ ಟೆಲೆಕ್ಸ್ ಅವರು ರಚಿಸಿರುವ ‘ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಅಂಬೇಡ್ಕರ್ ದೃಷ್ಟಿಕೋನ’ ಕಿರುಹೊತ್ತಿಗೆ ಬಿಡುಗಡೆಗೊಳ್ಳಲಿದೆ. ಇದೇ ಸಂದರ್ಭದಲ್ಲಿ ಸುದ್ದಿ ಮಾಧ್ಯಮ ಕ್ಷೇತ್ರಕ್ಕೆ ರವಿಕುಮಾರ್ ಅವರು ನೀಡಿರುವ ಕೊಡುಗೆಯನ್ನು ಪರಿಗಣಿಸಿ ಅವರನ್ನು ಗೌರವಿಸಿ ಸನ್ಮಾನಿಸಲಾಗುವುದು.

ಕಿರುಹೊತ್ತಿಗೆಯನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವ ಕೆ.ಹೆಚ್. ಮುನಿಯಪ್ಪ ಅವರು ಬಿಡುಗಡೆಗೊಳಿಸಲಿದ್ದಾರೆ. ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಚಿಂತನೆಗಳು ಹಾಗೂ ದೃಷ್ಟಿಕೋನಗಳು ಹೇಗೆ ಪ್ರತಿಫಲಿಸಬೇಕು ಎಂಬುದನ್ನು ಕಿರುಹೊತ್ತಿಗೆಯಲ್ಲಿ ವಿಶ್ಲೇಷಿಸಲಾಗಿದೆ.
ಕರ್ನಾಟಕ ರಾಜ್ಯ ಎಸ್ಸಿ/ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷ ಚೆಲುವರಾಜು ಹಾಗೂ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು ಅವರು ಕಾರ್ಯಕ್ರಮಕ್ಕೆ ಸರ್ವರಿಗೂ ಸ್ವಾಗತ ಕೋರಿದ್ದಾರೆ.











