ಮನೆ Blog *ಮೂಲಭೂತ ಸೌಕರ್ಯದಿಂದ ವಂಚಿತವಾದ ಚಿಪ್ಪಳಿ ಗ್ರಾಮ..**ಗ್ರಾಮಸ್ಥರ ಅಳಲನ್ನು ಕೇಳಿ ಚುನಾಯಿತ ಪ್ರತಿನಿಧಿಗಳೇ*

*ಮೂಲಭೂತ ಸೌಕರ್ಯದಿಂದ ವಂಚಿತವಾದ ಚಿಪ್ಪಳಿ ಗ್ರಾಮ..**ಗ್ರಾಮಸ್ಥರ ಅಳಲನ್ನು ಕೇಳಿ ಚುನಾಯಿತ ಪ್ರತಿನಿಧಿಗಳೇ*

187
0

ವಿಶೇಷ ವರದಿ ಅಮಿತ್ ಆರ್. ಆನಂದಪುರ (ಅಮಿತ್ ಟೈಮ್.)

ಗ್ರಾಮಗಳ ಅಭಿವೃದ್ಧಿ ಆದರೆ ದೇಶ ಅಭಿವೃದ್ಧಿಯಾದಂತೆ ಎಂಬ ಮಾತು ಭಾಗಶಃ ಸತ್ಯ ಆದರೆ ಗ್ರಾಮಗಳ ಅಭಿವೃದ್ಧಿಗೆ ಸರ್ಕಾರ ಕೋಟಿ ಕೋಟಿ ಹಣ ಸುರಿಯುತ್ತಿದೆ ಆದರೆ ಇಂದಿಗೂ ಸಹ ಕೆಲ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳಿಲ್ಲದೆ ಪರದಾಡುವ ಪರಿಸ್ಥಿತಿ ಎದುರಾಗಿದೆ.

ನಾನು ಇಂದು ಹೇಳಲು ಹೊರಟಿರುವ ಗ್ರಾಮ, ಸಾಗರ ತಾಲೂಕಿನ ಆನಂದಪುರ ಹೋಬಳಿಯ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಪ್ಪಳಿ. ಈ ಗ್ರಾಮದಲ್ಲಿ ಇಂದಿಗೂ ಸಹ ಜನಸಾಮಾನ್ಯರಿಗೆ ಮೂಲಭೂತ ಸೌಕರ್ಯವಿಲ್ಲದೆ ದಿನ ನಿತ್ಯ ಹಲವಾರು ಸವಾಲುಗಳನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಆನಂದಪುರದಿಂದ ಸಾಗರ ಹೋಗುವಾಗ ದಾರಿ ಮಧ್ಯದಲ್ಲಿ ಹೊಸಗುಂದ ದೇವಸ್ಥಾನಕ್ಕೆ ಹೋಗುವ ರಸ್ತೆ ದಾಟಿ ಸ್ವಲ್ಪ ಮುಂದೆ ಹೋದರೆ ಅರಣ್ಯ ಇಲಾಖೆಯ ಒಂದು ಮನೆ ಇದೆ ಮನೆಯ ಎದುರುಗಡೆ ಸಣ್ಣದಾಗಿ ಚಿಪ್ಪಳ್ಳಿ ಬೋರ್ಡ್ ಕಾಣುತ್ತದೆ ಆ ಬೋರ್ಡನ ಮುಂದೆ ಒಂದು ಮಣ್ಣಿನ ರಸ್ತೆಯನ್ನು ನಾವು ನೋಡಬಹುದಾಗಿದೆ ಆ ರಸ್ತೆಯಲ್ಲಿ ಚಿಪ್ಪಳ್ಳಿಗೆ ಹೋಗಬೇಕು ಸ್ವಲ್ಪ ದೂರದ ತನಕ ಜಲ್ಲಿಕಲ್ಲು ಹಾಕಿದ ಗುಂಡಿ ಬಿದ್ದ ರಸ್ತೆ ಕಾಣುತ್ತದೆ ದಟ್ಟವಾದ ಕಾಡಿನ ನಡುವೆ ಈಗಲೂ ಗುಂಡಿ ಕೆಸರು ರಸ್ತೆಯಲ್ಲಿ ಚಿಪ್ಪಳ್ಳಿಗೆ ಹೋಗುವ ಪರಿಸ್ಥಿತಿ ಎದುರಾಗಿದೆ.

ಚಿಪ್ಪಳ್ಳಿಯಲ್ಲಿ ಪ್ರಾಥಮಿಕ ಶಾಲೆ ಸಹ ಇತ್ತು ಆದರೆ ಕಳೆದ ಮೂರು ವರ್ಷಗಳಿಂದ ಆ ಶಾಲೆಯು ಮುಚ್ಚಿದೆ. ಇದರಿಂದ ಸರಿ ಸುಮಾರು 30 ಮನೆಗಳ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಹರಸಾಹಸಪಟ್ಟು ಶಾಲೆಗೆ ಹೋಗಬೇಕಾದ ಸ್ಥಿತಿ ಎದುರಾಗಿದೆ. ಶಾಲೆಗೆ ಹೋಗಲು ಹೆದರಿಕೆ ಆಗುತ್ತದೆ ಕಾರಣ ಕಾಡಿನಲ್ಲಿ ಸೇತುವೆಯನ್ನು ದಾಟಿ ಹೋಗಬೇಕು. ಅಪ್ಪ ಇದ್ದರೆ ಬೈಕ್ ನಲ್ಲಿ ಕರೆದುಕೊಂಡು ಹೋಗುತ್ತಾರೆ. ಆದರೆ ಬೈಕ್ ನಲ್ಲೂ ಹೋಗಲು ರಸ್ತೆ ಸರಿಯಾಗಿ ಇಲ್ಲದ ಕಾರಣ ಹೆದರಿಕೆಯಾಗುತ್ತದೆ. ಇದರಿಂದ ಶಾಲೆಗೆ ಹೋಗಲು ಬಹಳಷ್ಟು ತೊಂದರೆ ಆಗುತ್ತಿದೆ ಎಂದು ಪುಟ್ಟ ವಿದ್ಯಾರ್ಥಿ ತನ್ನ ಅಳಲನ್ನು ತೋಡಿಕೊಂಡಳು.

ಇತ್ತೀಚಿಗಷ್ಟೇ ಹೃದಯಘಾತವಾಗಿ ಸಾವಿನ ಮನೆ ಬಾಗಿಲು ತಟ್ಟಿ ಬಂದ ಓರ್ವ ಮಹಿಳೆ ಹೃದಯಗಾತವಾದಾಗ ನನ್ನನ್ನು ಕರೆದುಕೊಂಡು ಹೋಗಲು 108 ತಿಳಿಸಿದರೆ ಅವರು ಚಿಪ್ಪಣಿಗೆ ಬರಲು ಆಗುವುದಿಲ್ಲ ಎಂದು ನಮ್ಮ ಮನವಿ ತಿರಸ್ಕರಿಸಿದ್ದಾರೆ. ಹೇಗೋ ಊರಿನವರಲ್ಲ ಸೇರಿ ನನ್ನನ್ನು ಎತ್ತಿಕೊಂಡು ಹೋಗಿ ಆಸ್ಪತ್ರೆಗೆ ಸೇರಿಸಿದ್ದರಿಂದ ಇಂದು ನಾನು ಜೀವಂತವಾಗಿದ್ದೇನೆ. ದಯವಿಟ್ಟು ನಮಗೆ ರಸ್ತೆ ಮಾಡಿಕೊಡಿ ಎಂದು ಅಂಗಲಾಚಿ ಬೇಡಿಕೊಂಡರು.

ಇನ್ನೂ ಈ ರಸ್ತೆಯ ಕಥೆಯೇ ಬೇರೆ ಆಗಿದ್ದು ಅದನ್ನ ನೋಡುವುದಾದರೆ ಹೊಸೂರು ಗ್ರಾಮ ಪಂಚಾಯಿತಿಯಿಂದ ರಸ್ತೆಯ ಕಾಮಗಾರಿಗಾಗಿ ಸ್ವಲ್ಪ ಹಣವನ್ನು ನೀಡಿದ್ದಾರೆ ಆದರೆ ಆ ಹಣ ಸಾಕಾಗದಿದ್ದಾಗ ಗ್ರಾಮದ 25ರಿಂದ 30 ಸದಸ್ಯರು ರಸ್ತೆಯನ್ನು ತಾವೇ ನಿಂತು ಸ್ವತಃ ಹಣ ಹಾಕಿ ಮಾಡಿಕೊಂಡಿದ್ದಾರೆ. ಈಗ ಆ ರಸ್ತೆ ಹದಗಿಟ್ಟಿ ಹೋಗಿದ್ದು ಓಡಾಡದ ಪರಿಸ್ಥಿತಿ ಎದುರಾಗಿದೆ.ಗುಡ್ಡದ ಮೇಲಿಂದ ಬರುವ ನೀರು ರಸ್ತೆಯ ಮೇಲೆ ಬಾರದಂತೆ ಕಾಲುವೆ ಮಾಡಲಾಗಿತ್ತು ಆದರೆ ಈ ಭಾಗದ ರೈತರು ಒಬ್ಬರು ಕಾಲುವೆಯನ್ನು ಮುಚ್ಚಿ ಆ ನೀರು ನೇರವಾಗಿ ರಸ್ತೆ ಮೇಲೆ ಹರಿದು ರಸ್ತೆ ಎಲ್ಲ ಹಾಳಾಗುದ್ದರಿಂದ ಯಾವ ವಾಹನಗಳು ಸಂಚರಿಸಲು ಆಗುತ್ತಿಲ್ಲ ಇದರ ಬಗ್ಗೆ ಹಲವು ಸಾರಿ ಗ್ರಾಮ ಆಡಳಿತಕ್ಕೆ ತಿಳಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ತಮ್ಮ ಅಸಹಾಯಕತೆ ತಮ್ಮ ನೋವನ್ನು ಗ್ರಾಮಸ್ಥರು ತೋಡಿಕೊಂಡರು.

ಇನ್ನು ಪ್ರಧಾನಮಂತ್ರಿಯವರು ಮಹತ್ವಾಕಾಂಕ್ಷೆಯ ಯೋಜನೆ ಆದ ಜೆಜೆಎಮ್ ಕಾಮಗಾರಿಯಿಂದ ಮನೆಗಳ ಮುಂದೆ ನಲ್ಲಿಗಳನ್ನು ಕೂಡಿಸಿಲಾಗಿದೆ. ಆದರೆ ನಲ್ಲಿಗಳಲ್ಲಿ ಸರಿಯಾಗಿ ನೀರು ಬರದೆ ಕುಡಿಯುವ ನೀರಿಗಾಗಿ ಇಲ್ಲಿನ ಜನರು ಹೊಳೆ ಹಾಗೂ ಗುಂಡಿ ನೀರನ್ನು ಅವಲಂಬಿಸಿದ್ದಾರೆ.

ಕಳೆದ 50-60 ವರ್ಷಗಳಿಂದ ಮೂಲಭೂತ ಸೌಲಭ್ಯಗಳಿಲ್ಲದೆ ನಾವು ಬಹಳಷ್ಟು ಸಂಕಷ್ಟವನ್ನು ಅನುಭವಿಸುತ್ತಿದ್ದೇವೆ. ಸ್ಥಳೀಯ ಗ್ರಾಮ ಪಂಚಾಯಿತಿನವರು ನಮಗೆ ಇಲ್ಲಿ ಅವಶ್ಯಕತೆ ಇರುವ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಇಲ್ಲವಾದರೆ ಮುಂದಿನ ದಿನಮಾನಗಳಲ್ಲಿ ಸ್ಥಳೀಯ ಹಾಗೂ ಎಲ್ಲ ಚುನಾವಣೆಗೂ ಮತದಾನ ಬಹಿಷ್ಕಾರ ಮಾಡಲಾಗುವುದೆಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಒಟ್ಟಿನಲ್ಲಿ ಚಿಪ್ಪಳಿ ಗ್ರಾಮ ಮೂಲಭೂತ ಸೌಕರ್ಯಗಳಿಲ್ಲದೆ, ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನಾದರೂ ಸ್ಥಳೀಯ ಶಾಸಕರು ಸಂಸದರು ಗ್ರಾಮ ಪಂಚಾಯತತಿಯವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಇಲ್ಲಿ ಮೂಲಭೂತ ಸೌಕರ್ಯವನ್ನು ಒದಗಿಸುತ್ತಾರೋ ಅಥವಾ ಇಲ್ಲವೋ ಎಂಬುದನ್ನು ಕಾದು ನೋಡಬೇಕಾಗಿದೆ.

ನಮ್ಮ ಅಮಿತ್ ಟೈಮ್ಸ್ ವಾಟ್ಸಪ್ ಗ್ರೂಪ್ ಅನ್ನು ಸೇರಲು ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ: https://chat.whatsapp.com/CnYYumPSez6AMYyw8cHG9A?mode=ac_t